2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ, ಶ್ರೀಲಂಕಾದ ಜಾವೆಲಿನ್ ಪಟು ರುಮೇಶ್ ತರಂಗಾ ಪಥಿರಾಗೆ 89.75 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು ಭಾರತದ ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಥ್ಲೆಟಿಕ್ಸ್‌ಗೆ ಬರುವ ಮುನ್ನ ಪಥಿರಗೆ ಓರ್ವ ವೇಗದ ಬೌಲರ್ ಆಗಿದ್ದ ಕ್ರಿಕೆಟಿಗ ಎನ್ನುವುದು ವಿಶೇಷ.

ಗ್ಲಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿ ಶ್ರೀಲಂಕಾದ ಜಾವೆಲಿನ್ ಥ್ರೋ ಪಟು ರುಮೇಶ್ ತರಂಗಾ ಪಥಿರಾಗೆ ಬಂಗಾರದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಲಂಕಾ ಮೂಲದ 23 ವರ್ಷದ ರುಮೇಶ್ ತರಂಗಾ ಪಥಿರಾಗೆ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬರೋಬ್ಬರಿ 89.75 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮಾಜಿ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಹಿಂದಿಕ್ಕಿ ಚಿನ್ನದ ಪದಜ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ರುಮೇಶ್ ತರಂಗಾ ಪಥಿರಾಗೆ ಜಾವೆಲಿನ್ ಥ್ರೋ ಪಟು ಆಗುವುದಕ್ಕಿಂತ ಕ್ರಿಕೆಟಿಗರಾಗಿದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

ರುಮೇಶ್ ತರಂಗಾ ಪಥಿರಾಗೆ, ಭಾರತದ ನೀರಜ್ ಚೋಪ್ರಾ ಅವರನ್ನು ಸೋಲಿಸುವುದರ ಜೊತೆಗೆ, ಹಾಲಿ ವಿಶ್ವ ಚಾಂಪಿಯನ್ ಕೇಶೋರ್ನ್ ವಾಲ್ಕಾಟ್, ಹಾಲಿ ಒಲಿಂಪಿಕ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ ಮತ್ತು ಮಾಜಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಅವರಂತಹ ದಿಗ್ಗಜರನ್ನೊಳಗೊಂಡ ಸ್ಪರ್ಧಿಗಳ ನಡುವೆ ಲಂಕಾ ಜಾವೆಲಿನ್ ಪಟು ತಮ್ಮ ಪ್ರಾಬಲ್ಯವನ್ನು ಮೆರೆದರು.

ಚಿನ್ನ ತಂದುಕೊಟ್ಟ ಆ ಒಂದು ಎಸೆತ:

ಶುಕ್ರವಾರ ಸಂಜೆ ಕ್ರೀಡಾಂಗಣದಲ್ಲಿ ಊಹಿಸಲಾಗದ ಗಾಳಿಯ ದಿಕ್ಕುಗಳನ್ನು ನಿಭಾಯಿಸುತ್ತಲೇ, ಪಥಿರಾಗೆ ಅಗ್ರಸ್ಥಾನವನ್ನು ಖಚಿತಪಡಿಸಿಕೊಳ್ಳಲು ಕೇವಲ ಒಂದೇ ಒಂದು ಥ್ರೋ ಸಾಕಾಯಿತು. ಫೈನಲ್ ಸುತ್ತಿನಲ್ಲಿ ಪಥಿರಾಗೆ ಎಸೆದ 89.75 ಮೀಟರ್ ದೂರವನ್ನು ಉಳಿದ್ಯಾವ ಜಾವೆಲಿನ್ ಪಟುಗಳು ಹತ್ತಿರವೂ ಬರಲು ಸಾಧ್ಯವಾಗಲಿಲ್ಲ. ಭಾರತದ ನೀರಜ್ ಚೋಪ್ರಾ ತಮ್ಮ ಎರಡನೇ ಪ್ರಯತ್ನದಲ್ಲಿ 85.83 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರೆ, ಭಾರತದವರೇ ಆದ ಯುವ ಪ್ರತಿಭಾನ್ವಿತ ಜಾವೆಲಿನ್ ಥ್ರೋ ಪಟು ಯಶ್ವೀರ್ ಸಿಂಗ್ ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ(85.41 ಮೀಟರ್) ದೂರ ಜಾವೆಲಿನ್ ಎಸೆಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

Scroll to load tweet…

ಮಾರಕ ವೇಗಿಯಾಗಿದ್ದ ರುಮೇಶ್ ತರಂಗಾ ಪಥಿರಾಗೆ!

ಕಾಮನ್‌ವೆಲ್ತ್ ಗೇಮ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಪಥಿರಾಗೆ, ಅಥ್ಲೆಟಿಕ್ಸ್ ಕ್ಷೇತ್ರ ಆರಿಸಿಕೊಳ್ಳುವ ಮುನ್ನ ಓರ್ವ ಕ್ರಿಕೆಟಿಗರಾಗಿದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ತಮ್ಮ ಹದಿಹರೆಯದ ದಿನಗಳಲ್ಲಿ ಪಥಿರಾಗೆ, ನಂಬಿಗಸ್ಥ ಮಧ್ಯಮ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಪಥಿರಾಗೆ ಅಂಡರ್-19 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ನಿಯಮಿತವಾಗಿ ಗಂಟೆಗೆ 130ರಿಂದ 134 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಸ್ಥಳೀಯ ವೇಗದ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಸದ್ಯ ಶ್ರೀಲಂಕಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಇಶಾನ್ ಮಾಲಿಂಗ ಅವರಿಗಿಂತ ಕೊಂಚ ಹಿಂದಿನ ಸ್ಥಾನವನ್ನು ಪಡೆದಿದ್ದರು.

ಕ್ರಿಕೆಟ್ ಆಡುವ ವೇಳೆಯಲ್ಲಿಯೇ ಕೋಚ್ ಟೋನಿ ಪ್ರಸನ್ನ ಅವರ ಕಣ್ಣಿಗೆ ಬಿದ್ದ ಪಥಿರಾಗೆ, ಅವರಲ್ಲಿದ್ದ ಥ್ರೋಯಿಂಗ್ ಸ್ಪರ್ಧೆಯಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಅಥ್ಲೆಟಿಕ್ಸ್‌ನತ್ತ ಬರಲು ಪ್ರೇರೇಪಿಸಿದರು. ಇದಾದ ಬಳಿಕ ಅವರು ಕ್ರಿಕೆಟ್ ತೊರೆದು ಪೂರ್ಣ ಪ್ರಮಾಣದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯತ್ತ ಮುಖ ಮಾಡಿದರು.

ನನ್ನನ್ನು ಜಾವೆಲಿನ್ ಕ್ರೀಡೆಗೆ ಪರಿಚಯಿಸಿದವರು ಕೋಚ್ ಟೋನಿ. ಮೂಲಭೂತ ತಂತ್ರಗಳನ್ನು ಕರಗತ ಮಾಡಿಕೊಂಡು ಅವುಗಳನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿದರೆ, ಅಂತಿಮವಾಗಿ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಅವರು ಯಾವಾಗಲೂ ನನಗೆ ಹೇಳುತ್ತಿದ್ದರು.ಅವರು ನನಗೆ ಕೇವಲ ತರಬೇತುದಾರರಿಗಿಂತ ಮಿಗಿಲಾದವರು. ಅವರು ನನಗೆ ಕೇವಲ ಆಟವನ್ನಷ್ಟೇ ಅಲ್ಲ, ಜೀವನದ ಬಗ್ಗೆಯೂ ಕಲಿಸಿದ್ದಾರೆ ಎಂದು ಪಥಿರಾಗೆ ಟೋನಿ ಅವರನ್ನು ಕೊಂಡಾಡಿದ್ದಾರೆ.

ಆರಂಭಿಕ ದಿನಗಳ ಕ್ರಿಕೆಟ್‌ನ ಭರವಸೆಯ ವೇಗಿಯಾಗಿದ್ದ ರುಮೇಶ್, ಇದೀಗ ಜಾವೆಲಿನ್ ಎಸೆತದಲ್ಲಿ ವಿಶ್ವಮಟ್ಟದ ಶಕ್ತಿಯನ್ನಾಗಿ ಪರಿವರ್ತನೆಗೊಂಡಿದ್ದಾರೆ. ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಶ್ರೀಲಂಕಾದ ಕ್ರೀಡಾ ಇತಿಹಾಸದಲ್ಲಿ ಒಂದು ಐತಿಹಾಸಿಕ ಅಧ್ಯಾಯವನ್ನು ಬರೆದಿದ್ದಾರೆ.