ಬೆಂಗಳೂರು[ಸೆ.28]: ಕೆ.ಎಲ್ ರಾಹುಲ್ ಆಕರ್ಷಕ ಶತಕ[131] ಹಾಗೂ ನಾಯಕ ಮನೀಶ್ ಪಾಂಡೆ ಸಮಯೋಚಿತ[50] ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟೂರ್ನಿಯಲ್ಲಿ 60 ರನ್’ಗಳಿಂದ ಕೇರಳವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಕರ್ನಾಟಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಕೇರಳ ಆರಂಭಿಕ ಬ್ಯಾಟ್ಸ್’ಮನ್ ವಿಷ್ಣು ವಿನೋದ್[104] ಹಾಗೂ ಸಂಜು ಸ್ಯಾಮ್ಸನ್[67] ಅರ್ಧಶತಕ ವ್ಯರ್ಥವಾದಂತಾಗಿದೆ.

ವಿಶ್ವ ಕ್ರಿಕೆಟ್ ನ ಗ್ಲಾಮರ್ ಆಟಗಾರ್ತಿ ಸಾರಾ ನಿವೃತ್ತಿ..!

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಡುವ ಅವಕಾಶ ಪಡೆದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. 30 ರನ್ ಬಾರಿಸುವಷ್ಟರಲ್ಲಿ ಕರ್ನಾಟಕ ಎರಡು ವಿಕೆಟ್ ಕಳೆದುಕೊಂಡಿತು. ಆ ಬಳಿಕ ನಾಯಕ ಮನೀಶ್ ಪಾಂಡೆ ಜತೆ ಇನಿಂಗ್ಸ್ ಕಟ್ಟಿದ ಉಪನಾಯಕ ಕೆ.ಎಲ್ ರಾಹುಲ್ ಕೇರಳ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಮನೀಶ್ ಪಾಂಡೆ 51 ಎಸೆತಗಳಲ್ಲಿ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರಾಹುಲ್ 122 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 131 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್ 31 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆ ಹಾಕಲು ನೆರವಾದರು. ಅಂತಿಮವಾಗಿ ಕರ್ನಾಟಕ 49.5 ಓವರ್’ಗಳಲ್ಲಿ 294 ರನ್ ಬಾರಿಸಿ ಆಲೌಟ್ ಆಯಿತು.

ವಿಜಯ್‌ ಹಜಾರೆ ಟ್ರೋಫಿ: ಜಾರ್ಖಂಡ್‌ ವಿರುದ್ಧ ಕರ್ನಾ​ಟಕ ಜಯ​ಭೇ​ರಿ!

ಇನ್ನು ಸವಾಲಿನ ಗುರಿ ಬೆನ್ನತ್ತಿದ ಕೇರಳ ಮೊದಲ ಓವರ್’ನಲ್ಲೇ ವಿಕೆಟ್ ಕಳೆದುಕೊಂಡಿತು. ವಿನೂಪ್ ಮನೋಹರನ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಆ ಬಳಿಕ ವಿಷ್ಣು ವಿನೋದ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಆಧರಿಸಿದರು. ಉತ್ತಮವಾಗಿ ಇನಿಂಗ್ಸ್ ಕಟ್ಟಿದ ಸಂಜು ಸ್ಯಾಮ್ಸನ್ ಕೂಡಾ ರನೌಟ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು. ವಿಕೆಟ್ ಒಪ್ಪಿಸುವ ಮುನ್ನ ಸಂಜು 66 ಎಸೆತಗಳಲ್ಲಿ 67 ರನ್ ಬಾರಿಸಿದ್ದರು. ಆ ಬಳಿಕ ನಾಯಕ ರಾಬಿನ್ ಉತ್ತಪ್ಪ ಕೇವಲ 13 ರನ್ ಬಾರಿಸಿ ಬಂದ ದಾರಿಯಲ್ಲೇ ಹಿಂತಿರುಗಿದರು. ಇನ್ನು ಸಚಿನ್ ಬೇಬಿ ಆಟ 26 ರನ್’ಗಳಿಗೆ ಸೀಮಿತವಾಯಿತು. ಆ ಬಳಿಕ ಉಳಿದ್ಯಾವ ಕ್ರಿಕೆಟಿಗರು ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡಿದ ವಿಷ್ಣು ವಿನೋದ್ 123 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 104 ರನ್ ಬಾರಿಸಿ 9ನೇಯವರಾಗಿ ವಿಕೆಟ್ ಒಪ್ಪಿಸಿದರು. 

ಕರ್ನಾಟಕದ ಪರ ವೇಗಿ ರೋನಿತ್ ಮೋರೆ ಮೂರು ವಿಕೆಟ್ ಪಡೆದರೆ, ಅಭಿಮನ್ಯು ಮಿಥುನ್ 2 ಹಾಗೂ ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಗೋಪಾಲ್ ಹಾಗೂ ಪವನ್ ದೇಶ್’ಪಾಂಡೆ ತಲಾ ಒಂದೊಂದು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 294
ಕೆ.ಎಲ್ ರಾಹುಲ್: 131

ಕೇರಳ: 234
ವಿಷ್ಣು ವಿನೋದ್: 104