ಬುಮ್ರಾ ಹ್ಯಾಟ್ರಿಕ್ ಮ್ಯಾಜಿಕ್: ಹರಿದು ಬಂತು ಅಭಿನಂದನೆಗಳ ಮಹಾಪೂರ
ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ವೆಸ್ಟ್ ಇಂಡೀಸ್ ಅಕ್ಷರಶಃ ನಲುಗಿದೆ. ಹರ್ಭಜನ್, ಇರ್ಫಾನ್ ಪಠಾಣ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಬುಮ್ರಾ ಪಾತ್ರರಾಗಿದ್ದಾರೆ. ಬುಮ್ರಾ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.01] ಟೀಂ ಇಂಡಿಯಾ ಮಾರಕ ವೇಗಿ, ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಕಿಂಗ್ಸ್’ಟನ್’ನ ಸಬೀನಾ ಪಾರ್ಕ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಅಕ್ಷರಶಃ ಅಬ್ಬರಿಸಿದ್ದಾರೆ. ಸೀಮಿತ ಓವರ್’ನ ಕ್ರಿಕೆಟ್’ನಲ್ಲಿ ಭಾರತದ ನಂಬರ್ 1 ಬೌಲರ್ ಎನಿಸಿರುವ ಬುಮ್ರಾ, ವಿಂಡೀಸ್ ಪ್ರವಾಸದಲ್ಲೂ ಕಮಾಲ್ ಮಾಡಿದ್ದಾರೆ. ಅಲ್ಲದೇ ಟೆಸ್ಟ್ ಕ್ರಿಕೆಟ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಎನ್ನುವ ಗೌರವಕ್ಕೂ ಬುಮ್ರಾ ಭಾಜನರಾಗಿದ್ದಾರೆ.
ಬುಮ್ರಾ ಚೊಚ್ಚಲ ಹ್ಯಾಟ್ರಿಕ್: ನೂರರೊಳಗೆ ಆಲೌಟ್ ಭೀತಿಯಲ್ಲಿ ವಿಂಡೀಸ್..!
ಕೇವಲ 25 ವರ್ಷದ ಬುಮ್ರಾ ತಾವಾಡುತ್ತಿರುವ 12ನೇ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್’ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವಿಂಡೀಸ್ ಎದುರು 5+ ವಿಕೆಟ್ ಪಡೆದ ಏಷ್ಯಾದ ಮೊದಲ ಬೌಲರ್ ಎನ್ನುವ ದಾಖಲೆ ಬರೆದಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯದ 9ನೇ ಓವರ್ ಬೌಲಿಂಗ್ ಮಾಡಿದ ಬುಮ್ರಾ, ಡ್ಯಾರನ್ ಬ್ರಾವೋ, ಶಮರ್ಥ್ ಬ್ರೂಕ್ಸ್ ಹಾಗೂ ರೋಸ್ಟನ್ ಚೇಸ್ ಅವರನ್ನು ಬಲಿ ಪಡೆದರು. ಈ ಮೂಲಕ ಹರ್ಭಜನ್ ಸಿಂಗ್ ಹಾಗೂ ಇರ್ಫಾನ್ ಪಠಾಣ್ ಸಾಲಿಗೆ ಬುಮ್ರಾ ಸೇರ್ಪಡೆಗೊಂಡರು.
ಈ ಮೊದಲು ಹರ್ಭಜನ್ ಸಿಂಗ್ 2001ರಲ್ಲಿ ಕೊಲ್ಕತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದಾದ ಬಳಿಕ 2006ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಓವರ್’ನಲ್ಲೇ ಇರ್ಫಾನ್ ಪಠಾಣ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದೀಗ ಈ ಇಬ್ಬರು ಸಾಧಕರ ಸಾಲಿಗೆ ಅಹಮಬಾದ್ ವೇಗಿ ಸೇರ್ಪಡೆಯಾಗಿದ್ದಾರೆ.
ಬುಮ್ರಾ ಏಷ್ಯಾ ಸಾಮ್ರಾಟ: ದಿಗ್ಗಜರು ಮಾಡಲಾಗದ ಸಾಧನೆ ಇದೀಗ ಬುಮ್ರಾ ತೆಕ್ಕೆಗೆ
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ಹನುಮ ವಿಹಾರಿ ಚೊಚ್ಚಲ ಶತಕದ ನೆರವಿನಿಂದ 416 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಬುಮ್ರಾ ದಾಳಿಗೆ ತತ್ತರಿಸಿದ್ದು, ಎರಡನೇ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 87 ರನ್ ಬಾರಿಸಿದೆ. ಬುಮ್ರಾ 16 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ.
ಬುಮ್ರಾ ಮಿಂಚಿನ ದಾಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.