ಬುಮ್ರಾ ಚೊಚ್ಚಲ ಹ್ಯಾಟ್ರಿಕ್: ನೂರರೊಳಗೆ ಆಲೌಟ್ ಭೀತಿಯಲ್ಲಿ ವಿಂಡೀಸ್..!
ಬುಮ್ರಾ ಮಿಂಚಿನ ಹ್ಯಾಟ್ರಿಕ್, ಹನುಮ ವಿಹಾರಿ ಚೊಚ್ಚಲ ಶತಕ ಹಾಗೂ ಇಶಾಂತ್ ಶರ್ಮಾ ಮೊದಲ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಎದುರು ಬಿಗಿ ಹಿಡಿತ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಿಂಗ್ಸ್ ಟನ್[ಸೆ.01]: ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ 87 ರನ್’ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದು, ಮೂರಂಕಿ ಮೊತ್ತ ತಲುಪುವುದರೊಳಗಾಗಿ ಆಲೌಟ್ ಆಗುವ ಭೀತಿಗೆ ಸಿಲುಕಿದೆ. ವೇಗಿ ಬುಮ್ರಾ ಹ್ಯಾಟ್ರಿಕ್ ಸಹಿತ ಕೇವಲ 16 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ.
KPL ಫೈನಲ್: ಬಳ್ಳಾರಿ ಮಣಿಸಿ ಚಾಂಪಿಯನ್ ಆದ ಹುಬ್ಳಿ ಟೈಗರ್ಸ್!
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಹನುಮ ವಿಹಾರಿ ಬಾರಿಸಿದ ಚೊಚ್ಚಲ ಶತಕ[111] ಹಾಗೂ ಇಶಾಂತ್ ಶರ್ಮಾ [57] ಚೊಚ್ಚಲ ಅರ್ಧಶತಕದ ನೆರವಿನಿಂದ 416 ರನ್ ಬಾರಿಸಿ ಆಲೌಟ್ ಆಯಿತು. ಆ್ಯಂಟಿಗ ಟೆಸ್ಟ್ ನಲ್ಲಿ 93 ರನ್ ಬಾರಿಸಿ ಶತಕ ವಂಚಿತರಾಗಿದ್ದ ವಿಹಾರಿ ಕಡೆಗೂ ಶತಕ ಸಿಡಿಸುವಲ್ಲು ಸಫಲರಾಗಿದ್ದಾರೆ. ವಿಂಡೀಸ್ ಪರ ಹೋಲ್ಡರ್ 105 ನೀಡಿ 5 ವಿಕೆಟ್ ಪಡೆದರು. ಇನ್ನು ದೈತ್ಯ ಕ್ರಿಕೆಟಿಗ ರಾಕೀಂ ಕಾರ್ನ್’ವೆಲ್ 3 ವಿಕೆಟ್ ಪಡೆದು ಮಿಂಚಿದರು.
ಹನುಮಾ ವಿಹಾರಿ ಅಬ್ಬರ, ಬೃಹತ್ ಮೊತ್ತದತ್ತ ಭಾರತ!
ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್’ಗೆ ವೇಗಿ ಬುಮ್ರಾ ಆಘಾತ ನೀಡಿದರು. ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ಬುಮ್ರಾ, ಎರಡನೇ ಟೆಸ್ಟ್ ಪಂದ್ಯದಲ್ಲೂ ಕೆರಿಬಿಯನ್ನರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದರು. ವಿಂಡೀಸ್’ನ ಐವರು ಅಗ್ರಕ್ರಮಾಂಕದ ಬ್ಯಾಟ್ಸ್’ಮನ್’ಗಳನ್ನು ಪೆವಿಲಿಯನ್’ಗಟ್ಟುವಲ್ಲಿ ಯಶಸ್ವಿಯಾದರು.
ವಿಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್[34] ಹಾಗೂ ಜೇಸನ್ ಹೋಲ್ಡರ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ವೆಸ್ಟ್ ಇಂಡೀಸ್ ತಂಡ ಇನ್ನೂ 329 ರನ್’ಗಳ ಹಿನ್ನಡೆಯಲ್ಲಿದ್ದು, ಇನಿಂಗ್ಸ್ ಸೋಲು ಕಂಡರೂ ಅಚ್ಚರಿಯಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜಾಮರ್ ಹ್ಯಾಮಿಲ್ಟನ್[2] ಹಾಗೂ ರಾಕೀಂ ಕಾರ್ನ್’ವೆಲ್[4] ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಹ್ಯಾಟ್ರಿಕ್ ಸಾಧನೆ: ಕೇವಲ 12ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬುಮ್ರಾ, ಹ್ಯಾಟ್ರಿಕ್ ವಿಕೆಟ್ ಗಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಟೆಸ್ಟ್ ಬೌಲರ್ ಎನ್ನುವ ಅಪರೂಪದ ದಾಖಲೆ ಬರೆದರು. 9ನೇ ಓವರ್’ನಲ್ಲಿ ಡ್ಯಾರನ್ ಬ್ರಾವೋ, ಶಮರ್ಥ್ ಬ್ರೂಕ್ಸ್ ಹಾಗೂ ರೋಸ್ಟನ್ ಚೇಸ್ ಅವರನ್ನು ಬಲಿ ಪಡೆದರು. ಈ ಮೂಲಕ ಹರ್ಭಜನ್ ಸಿಂಗ್[ಆಸ್ಟ್ರೇಲಿಯಾ] ಹಾಗೂ ಇರ್ಫಾನ್ ಪಠಾನ್ ಸಾಲಿಗೆ ಬುಮ್ರಾ ಸೇರ್ಪಡೆಗೊಂಡರು.