ಸಾಕ್ಷ್ಯಾಧಾರ ಕೊರತೆ ಬ್ರಿಜ್‌ಭೂಷಣ್‌ಗೆ ಕ್ಲೀನ್‌ಚಿಟ್‌ ಸಾಧ್ಯತೆಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷಬ್ರಿಜ್‌ಭೂಷಣ್‌ ವಜಾಗೊಳಿಸಬೇಕು ಎಂದು ಧರಣಿ ನಡೆಸಿದ್ದ ಕುಸ್ತಿಪಟುಗಳು

ನವದೆಹಲಿ(ಏ.14): ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ಗೆ ಕ್ಲೀನ್‌ಚಿಟ್ ಸಿಗಲಿದೆ ಎಂದು ಪ್ರತಿಷ್ಠಿತ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 

ಅಗ್ರಕುಸ್ತಿಪಟುಗಳಾದ ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ ಇತರರು ಬ್ರಿಜ್‌ಭೂಷಣ್ ವಿರುದ್ದ ಲೈಂಗಿಕ ಕಿರುಕುಳ ಆರೋಪ ಮಾಡಿ, ಅವರನ್ನು ವಜಾಗೊಳಿಸಬೇಕು ಎಂದು ಧರಣಿ ನಡೆಸಿದ್ದರು. ಕೇಂದ್ರ ಕ್ರೀಡಾ ಸಚಿವಾಲಯ ಜನವರಿ 23ರಂದು ಬಾಕ್ಸಿಂಗ್ ದಿಗ್ಗಜೆ ಮೇರಿ ಕೋಮ್‌ ಅವರ ನೇತೃತ್ವದ ಐವರು ಸದಸ್ಯರ ಸಮಿತಿ ರಚಿಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಬಳಿಕ ಕುಸ್ತಿಪಟುಗಳ ಒತ್ತಾಯದ ಮೇರೆಗೆ ಬಬಿತಾ ಪೋಗಾಟ್‌ರನ್ನು ಸಮಿತಿಗೆ ಸೇರ್ಪಡೆಗೊಳಿಸಿ 2 ವಾರ ಹೆಚ್ಚುವರಿ ಸಮಯ ನೀಡಿತ್ತು. ಸಮಿತಿಯು ಏಪ್ರಿಲ್‌ ಮೊದಲ ವಾರದಲ್ಲಿ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ಭೂಷಣ್‌ರಿಂದ ಯಾವುದೇ ರೀತಿಯ ಕಿರುಕುಳ ಆಗಿರುವ ಆಗಿರುವ ಬಗ್ಗೆ ಉಲ್ಲೇಖವಿಲ್ಲ ಎಂದು ಮೂಲಗಳು ಮಾಹಿತಿ ನೀಡಿರುವುದಾಗಿ ಸುದ್ದಿಸಂಸ್ಥೆ ತಿಳಿಸಿದೆ.

ಕುಸ್ತಿಪಟುಗಳು ಮಾಡಿದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ನೀಡಿಲ್ಲ. ಜೊತೆಗೆ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿರುವುದು ಸಹ ಕಂಡು ಬಂದಿದೆ. ಸದ್ಯದಲ್ಲೇ ಸಚಿವಾಲಯ ಸಮಿತಿಯು ವರದಿಯನ್ನು ಬಹಿರಂಗಗೊಳಿಸುವ ನಿರೀಕ್ಷೆಯಿದೆ.

ಮುಂಬೈ ದಾಳಿಯ ಬಗ್ಗೆ ಜಾವೇದ್‌ ಅಖ್ತರ್‌ ಕಾಮೆಂಟ್ಸ್‌ಗೆ ವಾಸಿಂ ಅಕ್ರಂ ಪ್ರತಿಕ್ರಿಯೆ!

ಏಷ್ಯನ್‌ ಕುಸ್ತಿ: ಭಾರತದ ಅಮನ್‌ಗೆ ಚಿನ್ನದ ಪದಕ

ಕಜಕಸ್ತಾನ: ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದೊರೆತಿದೆ. ಪುರುಷರ 57 ಕೆ.ಜಿ. ವಿಭಾಗದಲ್ಲಿ ಅಮನ್ ಸೆಹ್ರಾವತ್ ಚಿನ್ನದ ಪದಕ ಜಯಿಸಿದ್ದಾರೆ. ಫೈನಲ್‌ನಲ್ಲಿ ಅವರು ಕಿರ್ಗಿಸ್ತಾನದ ಆಲ್ಮಾಜ್‌ಸಾನ್ಬೆಕೋವ್ ವಿರುದ್ದ 9-4 ಅಂತರದಲ್ಲಿ ಗೆಲುವು ಸಾಧಿಸಿದರು. ಇದೇ ವೇಳೆ 79 ಕೆ.ಜಿ. ವಿಭಾಗದಲ್ಲಿ ದೀಪಕ್ ಕುಕ್ನಾ ಕಂಚಿನ ಪದಕ ಜಯಿಸಿದರು.

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ

ನವದೆಹಲಿ: ಒಲಿಂಪಿಕ್‌ ಜಾವೆಲಿನ್‌ ಥ್ರೋ ಚಾಂಪಿಯನ್‌ ನೀರಜ್‌ ಚೋಪ್ರಾ ಮೇ 5ರಿಂದ ಈ ಋುತುವಿನಲ್ಲಿ ಸ್ಪರ್ಧೆ ಆರಂಭಿಸಲಿದ್ದು, ದೋಹಾ ಡೈಮಂಡ್‌ ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಈ ವರ್ಷ 90 ಮೀ. ದೂರ ದಾಟುವ ಗುರಿ ಇಟ್ಟುಕೊಂಡಿರುವ ನೀರಜ್‌ಗೆ ಲೀಗ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಗ್ರೆನಡಾದ ಆ್ಯಂಡರ್‌ಸನ್‌ ಪೀಟ​ರ್ಸ್‌, ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಚೆಕ್‌ ಗಣರಾಜ್ಯದ ಜಾಕುಬ್‌ ವಾಲೆಚ್‌, ಜರ್ಮನಿಯ ಜ್ಯೂಲಿಯನ್‌ ವೆಬರ್‌ ಸೇರಿ ಇನ್ನೂ ಕೆಲ ಪ್ರಮುಖ ಅಥ್ಲೀಟ್‌ಗಳಿಂದ ಸ್ಪರ್ಧೆ ಎದುರಾಗಲಿದೆ.

ಟೆನಿಸ್‌: ಚೀನಾ ವಿರುದ್ಧ ಭಾರತಕ್ಕೆ 0-3 ಸೋಲು

ತಾಷ್ಕೆಂಟ್‌: ವಿಶ್ವ ಮಹಿಳಾ ತಂಡಗಳ(ಬಿಲ್ಲಿ ಜೀನ್‌ ಕಿಂಗ್‌ ಕಪ್‌) ಚಾಂಪಿಯನ್‌ಶಿಪ್‌ನ ಏಷ್ಯಾ-ಓಷಿಯಾನಿಯಾ ಗುಂಪು-1ರ ತನ್ನ 3ನೇ ಪಂದ್ಯದಲ್ಲಿ ಭಾರತ ತಂಡ ಚೀನಾ ವಿರುದ್ಧ 0-3 ಅಂತರದಲ್ಲಿ ಸೋಲುಂಡಿದೆ. ಎರಡು ಡಬಲ್ಸ್‌, ಸಿಂಗಲ್ಸ್‌ ಪಂದ್ಯದಲ್ಲಿ ಭಾರತ ಸೋಲುಂಡಿತು. ಈ ಸೋಲಿನೊಂದಿಗೆ ಭಾರತ 3ನೇ ಸ್ಥಾನಕ್ಕೆ ಜಾರಿದೆ. ಜಪಾನ್‌ ಮೊದಲ ಸ್ಥಾನದಲ್ಲಿದ್ದು, ಚೀನಾ 2ನೇ ಸ್ಥಾನ ಪಡೆದಿದೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ವಿಶ್ವ ಗುಂಪು ಪ್ಲೇ-ಆಫ್‌ಗೆ ಪ್ರವೇಶ ಪಡೆಯಲಿವೆ. 5, 6ನೇ ಸ್ಥಾನ ಪಡೆವ ತಂಡಗಳು ವಿಶ್ವ ಗುಂಪು-2ಕ್ಕೆ ತಳ್ಳಲ್ಪಡಲಿವೆ. 3-4ನೇ ಸ್ಥಾನ ಪಡೆದ ತಂಡಗಳು ಗುಂಪು-1ರಲ್ಲೇ ಉಳಿಯಲಿವೆ. ಭಾರತ ಶುಕ್ರವಾರ ತನ್ನ 4ನೇ ಪಂದ್ಯದಲ್ಲಿ ಜಪಾನ್‌ ವಿರುದ್ಧ ಆಡಲಿದೆ.