ರಣಜಿ ಟ್ರೋಫಿ ೨ನೇ ಚರಣ ಗುರುವಾರದಿಂದ ಆರಂಭ. ರೋಹಿತ್ ಶರ್ಮಾ, ಜೈಸ್ವಾಲ್ ಮುಂಬೈ ಪರ, ಜಡೇಜಾ, ಪಂತ್ ದೆಹಲಿ ಪರ, ಶುಭ್‌ಮನ್ ಗಿಲ್ ಪಂಜಾಬ್ ಪರ, ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ ಕರ್ನಾಟಕ ಪರ ಆಡಲಿದ್ದಾರೆ. ಗಾಯದಿಂದಾಗಿ ಕೊಹ್ಲಿ, ರಾಹುಲ್ ಈ ಸುತ್ತಿನಲ್ಲಿ ಆಡುತ್ತಿಲ್ಲ. ಕೊಹ್ಲಿ ಮುಂದಿನ ಪಂದ್ಯದಲ್ಲಿ ದೆಹಲಿ ಪರ ಆಡುವ ಸಾಧ್ಯತೆ ಇದೆ.

ಬೆಂಗಳೂರು: ದೇಸಿ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡಬೇಕು ಎಂದು ಬಿಸಿಸಿಐ ತಾಕೀತು ಮಾಡಿದ ಬೆನ್ನಲ್ಲೇ ಭಾರತ ಟೆಸ್ಟ್‌ ತಂಡದಲ್ಲಿ ಆಡುವ ಆಟಗಾರರು ಗುರುವಾರದಿಂದ ಆರಂಭಗೊಳ್ಳಲಿರುವ 2024-25ರ ರಣಜಿ ಋತುವಿನ 2ನೇ ಚರಣದಲ್ಲಿ ಕಣಕ್ಕಿಳಿಯಲಿದ್ದಾರೆ. ಹಾಲಿ ಚಾಂಪಿಯನ್‌ ಮುಂಬೈ ಪರ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಆಡಲಿದ್ದಾರೆ. 

2015ರ ಬಳಿಕ ಇದೇ ಮೊದಲ ಬಾರಿಗೆ ರೋಹಿತ್‌ ರಣಜಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈನ ಬಿಕೆಸಿ ಮೈದಾನದಲ್ಲಿ ನಡೆಯಲಿರುವ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಜೊತೆ ಭಾರತ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್‌ ಸಹ ಕಣಕ್ಕಿಳಿಯಲಿದ್ದಾರೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಮುಂಬೈ ತಂಡ ಆಡಲಿದೆ.

ಇನ್ನು, ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ಹಾಗೂ ದೆಹಲಿ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ಹಾಗೂ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಷಭ್‌ ಪಂದ್ಯ ಆಡಲಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್‌ ತಂಡ ಕರ್ನಾಟಕ ವಿರುದ್ಧ ಕಣಕ್ಕಿಳಿಯಲಿದ್ದು, ಶುಭ್‌ಮನ್‌ ಗಿಲ್‌ ಪಂಜಾಬ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ಪರ ದೇವ್‌ದತ್‌ ಪಡಿಕ್ಕಲ್‌ ಹಾಗೂ ಪ್ರಸಿದ್ಧ್‌ ಕೃಷ್ಣ ಆಡಲಿದ್ದಾರೆ.

ಈಡನ್‌ನಲ್ಲಿ ಇಂಗ್ಲೆಂಡನ್ನು ಚೆಂಡಾಡಿದ ಟೀಂ ಇಂಡಿಯಾ; ಟಿ20 ಸರಣಿಯಲ್ಲಿ ಶುಭಾರಂಭ

ಗಾಯದ ಕಾರಣ ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌ ಈ ಸುತ್ತಿನಲ್ಲಿ ಆಡುತ್ತಿಲ್ಲ. ಜ.30ರಿಂದ ಆರಂಭಗೊಳ್ಳಲಿರುವ ಮುಂದಿನ ಪಂದ್ಯದಲ್ಲಿ ದೆಹಲಿ ಪರ ಕೊಹ್ಲಿ ಆಡುವುದು ಖಚಿತವಾಗಿದೆ. ರಾಹುಲ್‌ರ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ರಣಜಿ ಟ್ರೋಫಿ: ಇಂದಿನಿಂದ ಕರ್ನಾಟಕಕ್ಕೆ ಪಂಜಾಬ್‌ ಸವಾಲು

ಬೆಂಗಳೂರು: 2 ತಿಂಗಳ ಬಿಡುವಿನ ಬಳಿಕ 2024-25ರ ರಣಜಿ ಟ್ರೋಫಿ ಗುರುವಾರದಿಂದ ಪುನಾರಂಭಗೊಳ್ಳಲಿದೆ. ಕರ್ನಾಟಕ ತಂಡ ‘ಸಿ’ ಗುಂಪಿನ ತನ್ನ 6ನೇ ಪಂದ್ಯದಲ್ಲಿ ಪಂಜಾಬ್‌ ತಂಡದ ಸವಾಲನ್ನು ಎದುರಿಸಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಇದೇ ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಎರಡು ಚರಣಗಳಲ್ಲಿ ನಡೆಸಲಾಗುತ್ತಿದೆ. ಕಳೆದ 2 ತಿಂಗಳಲ್ಲಿ ಮುಷ್ತಾಕ್‌ ಅಲಿ ಟಿ20 ಹಾಗೂ ವಿಜಯ್‌ ಹಜಾರೆ ಏಕದಿನ ಟೂರ್ನಿಗಳು ನಡೆದಿದ್ದವು. ಕೆಲ ದಿನಗಳ ಹಿಂದಷ್ಟೇ ವಿಜಯ್‌ ಹಜಾರೆ ಟ್ರೋಫಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಕರ್ನಾಟಕ, ರಣಜಿ ಟ್ರೋಫಿಯ ಗುಂಪು ಹಂತದಲ್ಲಿ ಬಾಕಿಯಿರುವ 2 ಪಂದ್ಯಗಳನ್ನು ಗೆದ್ದು ನಾಕೌಟ್‌ ಹಂತ ಪ್ರವೇಶಿಸುವ ವಿಶ್ವಾಸದಲ್ಲಿದೆ. 7ನೇ ಹಾಗೂ ಅಂತಿಮ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಹರ್ಯಾಣ ಎದುರಾಗಲಿದೆ. 5 ಪಂದ್ಯಗಳಲ್ಲಿ ಕೇವಲ 1 ಜಯ, 4 ಡ್ರಾ ಕಂಡಿರುವ ಕರ್ನಾಟಕ ಗುಂಪಿನಲ್ಲಿ 4ನೇ ಸ್ಥಾನದಲ್ಲಿದೆ.

ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್; 13 ವರ್ಷಗಳ ಬಳಿಕ ರಣಜಿ ಟ್ರೋಫಿ ಆಡಲು ಕಿಂಗ್ ಕೊಹ್ಲಿ ರೆಡಿ!

ವಿಜಯ್‌ ಹಜಾರೆಯಲ್ಲಿ ಮಿಂಚಿದ್ದ ಮಯಾಂಕ್ ಅಗರ್‌ವಾಲ್‌, ಆರ್‌.ಸ್ಮರಣ್‌ ಸೇರಿ ದೇವ್‌ದತ್‌ ಪಡಿಕ್ಕಲ್‌, ನಿಕಿನ್‌ ಜೋಸ್‌ರ ಬ್ಯಾಟಿಂಗ್ ಬಲ ರಾಜ್ಯ ತಂಡಕ್ಕೆ ಸಿಗಲಿದೆ. ಬೌಲಿಂಗ್‌ನಲ್ಲಿ ಪ್ರಸಿದ್ಧ್‌ ಕೃಷ್ಣ, ವಾಸುಕಿ ಕೌಶಿಕ್‌, ಶ್ರೇಯಸ್‌ ಗೋಪಾಲ್‌ರ ಅನುಭವ ರಾಜ್ಯಕ್ಕೆ ವರದಾನವಾಗಲಿದೆ.

ಮತ್ತೊಂದೆಡೆ ಪಂಜಾಬ್‌ಗೂ ಇದು ನಿರ್ಣಾಯಕ ಪಂದ್ಯ ಎನಿಸಿದೆ. ಶುಭ್‌ಮನ್‌ ಗಿಲ್‌ರ ಸೇರ್ಪಡೆ ಸಹಜವಾಗಿಯೇ ತಂಡದ ಬ್ಯಾಟಿಂಗ್‌ ಬಲ ಹೆಚ್ಚಿಸಲಿದೆ.