ಪ್ರೊ ಕಬಡ್ಡಿ ಹರಾಜು - 441 ಆಟಗಾರರ ಅದೃಷ್ಟ ಪರೀಕ್ಷೆ!
7ನೇ ಆವೃತ್ತಿ ಪ್ರೊ ಕಬಡ್ಡಿಗೆ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಯಲಿದೆ. ಏ.08, ಏ.09 ರಂದು ನಡೆಯಲಿರುವ ಹರಾದಿನಲ್ಲಿಒಟ್ಟು 441 ಆಟಗಾರರಿದ್ದು, ರಾಜ್ಯ 23 ಆಟಗಾರರು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇಲ್ಲಿದೆ ಹರಾಜಿನ ಹೆಚ್ಚಿನ ವಿವರ.
ಬೆಂಗಳೂರು(ಏ.08): ಪ್ರೊ ಕಬಡ್ಡಿ 7ನೇ ಆವೃತ್ತಿಗೆ ಇನ್ನು ಕೇವಲ 3 ತಿಂಗಳು ಮಾತ್ರ ಬಾಕಿ ಇದ್ದು, ಎಲ್ಲಾ 12 ತಂಡಗಳು ನೂತನ ಆವೃತ್ತಿಗೆ ಹೊಸದಾಗಿ ತಂಡ ರಚಿಸಿಕೊಳ್ಳಲು ಸಿದ್ಧತೆ ನಡೆಸಿವೆ. ಸೋಮವಾರ(ಏ.08), ಮಂಗಳವಾರ(ಏ.09) ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಆಟಗಾರರ ಹರಾಜು ನಡೆಯಲಿದ್ದು, ಪ್ರೊ ಕಬಡ್ಡಿಯ ತಾರೆಗಳಾದ ರಾಹುಲ್ ಚೌಧರಿ, ರಿಶಾಂಕ್ ದೇವಾಡಿಗ, ಪ್ರಶಾಂತ್ ರೈ ಸೇರಿದಂತೆ ಒಟ್ಟು 441 ಆಟಗಾರರು ಅದೃಷ್ಟಪರೀಕ್ಷೆಗಿಳಿಯಲಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬುಲ್ಸ್‌ನಿಂದ ಕನ್ನಡಿಗರು ಔಟ್!
12 ತಂಡಗಳ ಪೈಕಿ 11 ತಂಡಗಳು ಕೆಲ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿವೆ. ಪುಣೇರಿ ಪಲ್ಟನ್ ಮಾತ್ರ ಎಲ್ಲಾ ಆಟಗಾರರನ್ನು ಕೈಬಿಟ್ಟಿದ್ದು ಹೊಸದಾಗಿ ತಂಡ ಕಟ್ಟಿಕೊಳ್ಳಬೇಕಿದೆ. ಈ ಬಾರಿ ಆಟಗಾರರ ಖರೀದಿಗೆ ವೆಚ್ಚ ಮಾಡಬಲ್ಲ ಒಟ್ಟು ಮೊತ್ತದಲ್ಲಿ ಏರಿಕೆ ಮಾಡಲಾಗಿದೆ. ಪ್ರತಿ ತಂಡಕ್ಕೆ .4.4 ಕೋಟಿ ಖರ್ಚು ಮಾಡಲು ಅವಕಾಶವಿದ್ದು, ಈಗಾಗಲೇ ಉಳಿಸಿಕೊಂಡಿರುವ ಆಟಗಾರರಿಗೆ ನೀಡಲಿರುವ ಸಂಭಾವನೆಯೂ ಇದರಲ್ಲಿ ಸೇರಲಿದೆ.
ಪ್ರತಿ ತಂಡ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಸೇರಿಸಿಕೊಳ್ಳಬಹುದಾಗಿದೆ. ಇದರಲ್ಲಿ ಕನಿಷ್ಠ ಇಬ್ಬರು, ಗರಿಷ್ಠ ನಾಲ್ವರು ವಿದೇಶಿ ಆಟಗಾರರು ಇರಬಹುದು. ಪ್ರೊ ಕಬಡ್ಡಿ ವತಿಯಿಂದ ‘ಭವಿಷ್ಯದ ಕಬಡ್ಡಿ ತಾರೆಯರು’ ಯೋಜನೆಯಡಿ ದೇಶಾದ್ಯಂತ ಪ್ರತಿಭಾನ್ವೇಷಣೆ ನಡೆಸಲಾಗಿದ್ದು, ಆಯ್ಕೆಯಾದ ಆಟಗಾರರಿಗೆ ವಿಶೇಷ ತರಬೇತಿ ನೀಡಲಾಗಿದೆ. ಈ ವಿಭಾಗದಿಂದ ಪ್ರತಿ ತಂಡಕ್ಕೆ ಗರಿಷ್ಠ 6 ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರಲಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ: ಹೊಸ ಲಾಂಛನ ಬಿಡುಗಡೆ ಮಾಡಿದ ಪುಣೇರಿ
ಮೂಲ ಬೆಲೆ ಏರಿಕೆ: ಆಟಗಾರರನ್ನು ‘ಎ’, ‘ಬಿ’, ‘ಸಿ’, ‘ಡಿ’ ಹಾಗೂ ನೂತನ ಯುವ ಆಟಗಾರರು(ಎನ್‌ವೈಪಿ) ಎಂದು 5 ವಿಭಾಗಗಳಾಗಿ ವಿಂಗಡಿಸಲಾಗಿದೆ. 6ನೇ ಆವೃತ್ತಿಯಲ್ಲಿ ‘ಎ’ ದರ್ಜೆ ಆಟಗಾರರ ಮೂಲ ಬೆಲೆ .20 ಲಕ್ಷವಿತ್ತು. ಆ ಮೊತ್ತವನ್ನು ಈ ಬಾರಿ .30 ಲಕ್ಷಕ್ಕೆ ಏರಿಸಲಾಗಿದೆ. ‘ಬಿ’ ದರ್ಜೆ ಆಟಗಾರರ ಮೂಲ ಬೆಲೆ .12 ಲಕ್ಷದಿಂದ .20 ಲಕ್ಷಕ್ಕೆ, ‘ಸಿ’ ದರ್ಜೆ ಆಟಗಾರರ ಆಟಗಾರರ ಮೂಲಕ ಬೆಲೆ .8 ಲಕ್ಷದಿಂದ 10 ಲಕ್ಷಕ್ಕೆ, ‘ಡಿ’ ದರ್ಜೆಯಲ್ಲಿ .5 ಲಕ್ಷದಿಂದ .6 ಲಕ್ಷಕ್ಕೆ, ಎನ್‌ವೈಪಿ ವಿಭಾಗದಲ್ಲಿ .6.6 ಲಕ್ಷದಿಂದ .7.26 ಲಕ್ಷಕಕ್ಕೆ ಏರಿಕೆ ಮಾಡಲಾಗಿದೆ.
ಹರಾಜಿನಲ್ಲಿ ರಾಜ್ಯದ23 ಆಟಗಾರರು
7ನೇ ಆವೃತ್ತಿ ಹರಾಜಿನಲ್ಲಿ ಕರ್ನಾಟಕದ ಒಟ್ಟು 23 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಪೈಕಿ ತಾರಾ ಆಟಗಾರರಾದ ಪ್ರಶಾಂತ್ ರೈ, ಸುಕೇಶ್ ಹೆಗ್ಡೆ, ಜೆ.ದರ್ಶನ್, ಸಂತೋಷ್ ಬಿ.ಎಸ್ ಇದ್ದಾರೆ. ಎನ್‌ವೈಪಿ ವಿಭಾಗದಲ್ಲಿ 6 ಆಟಗಾರರಿದ್ದು, ಹೊಸ ಪ್ರತಿಭೆಗಳಿಗೆ ತಂಡಗಳು ಮಣೆ ಹಾಕಲಿವೆಯೇ ಎನ್ನುವ ಕುತೂಹಲವಿದೆ. ಕಳೆದ ವರ್ಷ ಪ್ರಶಾಂತ್ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ರಾಜ್ಯದ ಆಟಗಾರ ಎನಿಸಿಕೊಂಡಿದ್ದರು. ಈ ವರ್ಷವೂ ಅವರೇ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆ ಇದೆ.
ಮೊದಲ ಬಾರಿಗೆ ಗೋವಾ ಆಟಗಾರರು
ಹರಾಜಿನಲ್ಲಿ ಕರ್ನಾಟಕ ಸೇರಿ ಒಟ್ಟು 19 ರಾಜ್ಯಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಗೋವಾ ಆಟಗಾರರಿಗೆ ಪ್ರೊ ಕಬಡ್ಡಿ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಇದೇ ವೇಳೆ ಭಾರತ ಸೇರಿ ಒಟ್ಟು 14 ದೇಶಗಳ ಆಟಗಾರರು ಹರಾಜಿನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
441 ಆಟಗಾರರು
ಪ್ರೊ ಕಬಡ್ಡಿ ಹರಾಜಿನಲ್ಲಿ 441 ಆಟಗಾರರು ಭಾಗಿಯಾಗಲಿದ್ದಾರೆ.
389 ಆಟಗಾರರು
ಹರಾಜಿನಲ್ಲಿ ಪಾಲ್ಗೊಳ್ಳಲಿರುವ 441 ಆಟಗಾರರ ಪೈಕಿ 389 ಮಂದಿ ಭಾರತೀಯರು.
19 ರಾಜ್ಯ
ಹರಾಜಿನಲ್ಲಿ ಭಾರತದ ಒಟ್ಟು 19 ರಾಜ್ಯಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ.
14 ದೇಶ
ಭಾರತ ಸೇರಿ ಒಟ್ಟು 14 ದೇಶಗಳ ಆಟಗಾರರು ಹರಾಜಿನಲ್ಲಿ ಭಾಗಿಯಾಗಲಿದ್ದಾರೆ.