ಬೆಂಗಳೂರು(ಮಾ.24): ಪ್ರೊ ಕಬಡ್ಡಿ 7ನೇ ಆವೃತ್ತಿಗೆ ಇನ್ನು ಕೇವಲ 4 ತಿಂಗಳು ಮಾತ್ರ ಬಾಕಿ ಇದೆ. ಇನ್ನೇನು 20 ದಿನಗಳಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ತಂಡವೂ ತಾನು ಉಳಿಸಿಕೊಳ್ಳಬೇಕಿರುವ ಆಟಗಾರರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದ್ದು, ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ದೊಡ್ಡ ಪಟ್ಟಿಯೇ ಸಿದ್ಧವಾಗಿದೆ. ಆಘಾತಕಾರಿ ಅಂಶವೆಂದರೆ ಬೆಂಗಳೂರು ಬುಲ್ಸ್‌ ತಂಡದಲ್ಲಿದ್ದ ನಾಲ್ಕೂ ಜನ ಕರ್ನಾಟಕದ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. 

ಬೆಂಗಳೂರು ಬುಲ್ಸ್ ತಂಡದ ಹೀರೋ ಬೆಂಗಾಲ್ ಪಾಲು..!

ಮೊನ್ನೆ ಮೊನ್ನೆಯಷ್ಟೇ ಕಳೆದ ಆವೃತ್ತಿಯಲ್ಲಿ ತಂಡದ ಪ್ರಧಾನ ಕೋಚ್‌ ಆಗಿ, ತಂಡ ಚಾಂಪಿಯನ್‌ ಆಗಲು ದೊಡ್ಡ ಮಟ್ಟದಲ್ಲಿ ಶ್ರಮಿಸಿದ್ದ ರಾಜ್ಯದ ಬಿ.ಸಿ.ರಮೇಶ್‌, ಬೆಂಗಾಲ್‌ ವಾರಿಯ​ರ್ಸ್ ಪಾಲಾಗಿದ್ದರು. ಇದೀಗ ರಾಜ್ಯದ ಆಟಗಾರರಾದ ನಿತೇಶ್‌ ಬಿ.ಆರ್‌, ಜವಾಹರ್‌ ವಿವೇಕ್‌, ಹರೀಶ್‌ ನಾಯ್ಕ್ ಹಾಗೂ ಆನಂದ್‌ಗೂ ಬೆಂಗಳೂರು ತಂಡದಲ್ಲಿ ಸ್ಥಾನವಿಲ್ಲದಂತಾಗಿದೆ. ಹರಾಜಿನಲ್ಲಿ ಕರ್ನಾಟಕದ ಆಟಗಾರರನ್ನು ತಂಡ ಖರೀದಿಸಬಹುದು. ಆದರೆ ಸದ್ಯದ ಮಟ್ಟಿಗೆ ಬೆಂಗಳೂರು ಬುಲ್ಸ್‌ ಕೇವಲ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಬುಲ್ಸ್‌ 7ನೇ ಆವೃತ್ತಿಗೆ ನಾಯಕ ರೋಹಿತ್‌ ಕುಮಾರ್‌, ರೈಡ್‌ ಮಷಿನ್‌ ಪವನ್‌ ಶೆರಾವತ್‌ ಹಾಗೂ ಆಲ್ರೌಂಡರ್‌ ಎಂದು ಕರೆಸಿಕೊಳ್ಳುವ ಆಶಿಶ್‌ ಸಾಂಗ್ವಾನ್‌ರನ್ನು ತಂಡ ಉಳಿಸಿಕೊಂಡಿದೆ. ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಸಂಪೂರ್ಣ ಪಟ್ಟಿ ಸುವರ್ಣನ್ಯೂಸ್ ಸಹೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಜತೆಗೆ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಪೈಕಿ ಕೆಲವರು, ಈ ಬೆಳವಣಿಗೆಯನ್ನು ಖಚಿತ ಪಡಿಸಿದ್ದಾರೆ.

ಮೂವರಿಗೇ 2 ಕೋಟಿ ವೆಚ್ಚ?: ಪತ್ರಿಕೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರೋಹಿತ್‌, ಪವನ್‌ ಹಾಗೂ ಆಶಿಶ್‌ರನ್ನು ಉಳಿಸಿಕೊಳ್ಳಲು ತಂಡ 2 ಕೋಟಿ ರುಪಾಯಿ ವೆಚ್ಚ ಮಾಡಿದೆ. ಆಟಗಾರರ ಖರೀದಿಗೆ ತಂಡವೊಂದು ಗರಿಷ್ಠ .4 ಕೋಟಿ ಖರ್ಚು ಮಾಡಬಹುದು. ಅಂದರೆ, ಇನ್ನುಳಿದ ಆಟಗಾರರನ್ನು ಖರೀದಿಸಲು ಬುಲ್ಸ್‌ ಬಳಿ ಉಳಿದಿರುವುದು ಕೇವಲ 2 ಕೋಟಿ ಮಾತ್ರ. ಕಳೆದ ಆವೃತ್ತಿಯಲ್ಲಿ ತಂಡ ಚಾಂಪಿಯನ್‌ ಆಗಲು ಡಿಫೆಂಡರ್‌ಗಳಾದ ಮಹೇಂದರ್‌ ಸಿಂಗ್‌, ಅಮಿತ್‌ ಶೆರೊನ್‌ ಪಾತ್ರ ಮಹತ್ವದಾಗಿತ್ತು. ಕಾಶಿಲಿಂಗ್‌ ಅಡಕೆ ರೈಡಿಂಗ್‌ ಜತೆ ಡಿಫೆನ್ಸ್‌ನಲ್ಲೂ ಮಿಂಚಿದ್ದರು. ಸುಮಿತ್‌ ಸಿಂಗ್‌ 4ನೇ ರೈಡರ್‌ ಆಗಿ ಉತ್ತಮ ಪ್ರದರ್ಶನ ತೋರಿದ್ದರು. ಈ ಯಾರನ್ನೂ ತಂಡ ಉಳಿಸಿಕೊಳ್ಳಲು ಇಚ್ಛಿಸಿಲ್ಲ.

ಹರಾಜಿನಲ್ಲಿ ತಾರಾ ಆಟಗಾರರು!: ಏ.8 ಹಾಗೂ 9ರಂದು ಮುಂಬೈನಲ್ಲಿ 7ನೇ ಆವೃತ್ತಿ ಪ್ರೊ ಕಬಡ್ಡಿ ಆಟಗಾರರ ಹರಾಜು ನಡೆಯಲಿದೆ. ಹರಾಜಿನಲ್ಲಿ ತಾರಾ ಆಟಗಾರರು ಪಾಲ್ಗೊಳ್ಳಲಿದ್ದಾರೆ. 
ಪ್ರಶಾಂತ್‌ ರೈ, ಸುಕೇಶ್‌ ಹೆಗ್ಡೆ, ಜೆ.ದರ್ಶನ್‌, ಸಚಿನ್‌ ವಿಠ್ಠಲ ಸೇರಿದಂತೆ ಕರ್ನಾಟಕದ ಇನ್ನೂ ಅನೇಕರು ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ. ಯುವ ಪ್ರತಿಭೆಗಳೂ ಸೇರಿ ರಾಜ್ಯದ ಒಟ್ಟು 24 ಆಟಗಾರರು ಹರಾಜಿಗೆ ಲಭ್ಯರಿರಲಿದ್ದಾರೆ. 

ಇದೇ ವೇಳೆ 6ನೇ ಆವೃತ್ತಿಯ ಅತ್ಯಂತ ದುಬಾರಿ ಆಟಗಾರ ಮೋನು ಗೋಯತ್‌, ಪ್ರೊ ಕಬಡ್ಡಿಯ ಪೋಸ್ಟರ್‌ ಬಾಯ್‌ ರಾಹುಲ್‌ ಚೌಧರಿ, ಕಳೆದ ಆವೃತ್ತಿಯಲ್ಲಿ ಯು.ಪಿ.ಯೋಧಾ ತಂಡವನ್ನು ಮುನ್ನಡೆಸಿದ್ದ ರಿಶಾಂಕ್‌ ದೇವಾಡಿಗ, ಯು ಮುಂಬಾದಲ್ಲಿ ಅಬ್ಬರಿಸಿದ್ದ ಸಿದ್ಧಾರ್ಥ್ ದೇಸಾಯಿ, ತಾರಾ ರೈಡರ್‌ ನಿತಿನ್‌ ತೋಮರ್‌, ದ.ಕೊರಿಯಾದ ಜಾನ್‌ ಕುನ್‌ ಲೀ, ಇರಾನ್‌ನ ಅಬೋಜರ್‌ ಮಿಘಾನಿ ಸೇರಿದಂತೆ ಇನ್ನೂ ಅನೇಕ ತಾರಾ ಆಟಗಾರರು ಹರಾಜಿಗೆ ಲಭ್ಯರಿರಲಿದ್ದಾರೆ.