10ನೇ ಆವೃತ್ತಿಯ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅಖಾಡ ಸಿದ್ಧವಾಗಿದ್ದು, ಭಾರತವು ಇಂಗ್ಲೆಂಡ್‌ ತಂಡವನ್ನು ಮತ್ತು ದಕ್ಷಿಣ ಆಫ್ರಿಕಾವು ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮಾತ್ರ ಅಜೇಯವಾಗಿ ಉಳಿದಿದೆ.

ಮುಂಬೈ/ಕೋಲ್ಕತಾ: 10ನೇ ಆವೃತ್ತಿಯ ಟಿ20 ವಿಶ್ವಕಪ್‌ನ ಗುಂಪು ಹಂತ ಹಾಗೂ ಸೂಪರ್‌-8 ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಸೆಮಿಫೈನಲ್‌ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಬುಧವಾರ ಹಾಗೂ ಗುರುವಾರ 2 ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ.

20 ತಂಡಗಳಿದ್ದ ಟೂರ್ನಿಯಲ್ಲಿ 16 ತಂಡಗಳು ಹೊರಬಿದ್ದಿವೆ. ಮಾಜಿ ಚಾಂಪಿಯನ್‌ಗಳಾದ ಭಾರತ, ಇಂಗ್ಲೆಂಡ್‌, ಮಾಜಿ ರನ್ನರ್‌-ಅಪ್‌ಗಳಾದ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ತಂಡಗಳು ಸೆಮೀಸ್‌ನಲ್ಲಿ ಆಡಲಿವೆ. ಮಾ.4ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ದ.ಆಫ್ರಿಕಾ ಹಾಗೂ ಕಿವೀಸ್‌ ಮುಖಾಮುಖಿಯಾಗಲಿವೆ. ಮಾ.5ರಂದು ಮುಂಬೈನ ವಾಂಖೇಡೆಯಲ್ಲಿ ಭಾರತಕ್ಕೆ ಇಂಗ್ಲೆಂಡ್‌ ಸವಾಲು ಎದುರಾಗಲಿದೆ. 2 ದಿನಗಳ ಬಿಡುವಿನ ಬಳಿಕ ಮಾ.8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

--

2 ಸೆಮಿ, ಫೈನಲ್‌ಗೆ ಇದೆ ಮೀಸಲು ದಿನ

2 ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯ ನಡೆಯುವ ನಗರಗಳಲ್ಲಿ ಸದ್ಯಕ್ಕೆ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಒಂದು ವೇಳೆ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೂ ಮೀಸಲು ದಿನದಂದು ಪಂದ್ಯ ಮುಂದುವರಿಯಲಿವೆ. ನಿಗದಿತ ದಿನದಂದು ಮಳೆಯಿಂದ ಪಂದ್ಯ ಪೂರ್ಣಗೊಳ್ಳದಿದ್ದರೆ, ಮರುದಿನ ಅಲ್ಲಿಂದಲೇ ಪಂದ್ಯ ಆರಂಭಿಸಲಾಗುತ್ತದೆ.

--

ದಕ್ಷಿಣ ಆಫ್ರಿಕಾ ಮಾತ್ರ ಟೂರ್ನಿಯಲ್ಲಿ ಅಜೇಯ

ಈ ಬಾರಿ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮಾತ್ರ ಅಜೇಯವಾಗಿದೆ. ತಂಡ ಗುಂಪು ಹಂತದಲ್ಲಿ 4 ಹಾಗೂ ಸೂಪರ್‌-8 ಹಂತದಲ್ಲಿ ಎಲ್ಲಾ 3 ಪಂದ್ಯಗಳಲ್ಲೂ ಗೆದ್ದಿದೆ. ಭಾರತ ಗುಂಪು ಹಂತದಲ್ಲಿ 4 ಪಂದ್ಯದಲ್ಲಿ ಗೆದ್ದಿದ್ದರೂ, ಸೂಪರ್‌-8 ಹಂತದಲ್ಲಿ ದ.ಆಫ್ರಿಕಾ ವಿರುದ್ಧ ಸೋತಿತ್ತು. ಇನ್ನು, ಇಂಗ್ಲೆಂಡ್‌, ಕಿವೀಸ್‌ ತಂಡಗಳು ಗುಂಪು ಹಂತದಲ್ಲೇ ತಲಾ ಒಂದೊಂದು ಪಂದ್ಯದಲ್ಲಿ ಸೋಲನುಭವಿಸಿದ್ದವು.

ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ 20ನೇ ಸೆಮಿ: ವಿಶ್ವದ ಮೊದಲ ತಂಡ

ಐಸಿಸಿ ಟೂರ್ನಿಗಳಲ್ಲಿ ಒಟ್ಟಾರೆ ಭಾರತಕ್ಕೆ ಇದು 20ನೇ ಸೆಮಿಫೈನಲ್‌. ಏಕದಿನ ವಿಶ್ವಕಪ್‌ನಲ್ಲಿ 8, ಚಾಂಪಿಯನ್ಸ್‌ ಟ್ರೋಫಿಯಲ್ಲಿ 8 ಸೆಮಿಫೈನಲ್‌ ಆಡಿರುವ ಭಾರತ, ಟಿ20 ವಿಶ್ವಕಪ್‌ನಲ್ಲಿ 6ನೇ ಸೆಮೀಸ್‌ಗೆ ಸಿದ್ಧವಾಗಿದೆ. ಇನ್ನು, ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ಸೆಮಿಫೈನಲ್‌ ಆಡಿದ ಅಥವಾ ಆಡಲಿರುವ ತಂಡಗಳ ಪೈಕಿ ಆಸ್ಟ್ರೇಲಿಯಾ(18), ನ್ಯೂಜಿಲೆಂಡ್‌(18), ಇಂಗ್ಲೆಂಡ್‌(16), ಪಾಕಿಸ್ತಾನ(16) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

06ನೇ ಬಾರಿ: ಟಿ20 ವಿಶ್ವಕಪ್‌ನಲ್ಲಿ ಭಾರತ, ಇಂಗ್ಲೆಂಡ್‌ಗೆ ಇದು ತಲಾ 6ನೇ ಸೆಮಿಫೈನಲ್‌. ಕಿವೀಸ್‌ಗೆ 5ನೇ, ದ.ಆಫ್ರಿಕಾಗೆ 4ನೇ ಸೆಮಿ.