Commonwealth Games ಭಾರತೀಯ ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಸಂವಾದಕ್ಕೆ ಡೇಟ್ ಫಿಕ್ಸ್
* ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ಷಣಗಣನೆ
* ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟವು ಜುಲೈ 28ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ
* ಬುಧವಾರದಂದು ಬೆಳಗ್ಗೆ 10ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ
ನವದೆಹಲಿ(ಜು.18): ಜುಲೈ 28ರಿಂದ ಆರಂಭಗೊಳ್ಳಲಿರುವ 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಜುಲೈ 20ರಂದು ಸಂವಾದ ನಡೆಸಲಿದ್ದಾರೆ. ಬುಧವಾರದಂದು ಬೆಳಗ್ಗೆ 10ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದು, ಕ್ರೀಡಾಪಟುಗಳು ಬಿಡುವು ಮಾಡಿಕೊಂಡು ಸಂವಾದದಲ್ಲಿ ಪಾಲ್ಗೊಳ್ಳುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಇ-ಮೇಲ್ ಮೂಲಕ ಸೂಚಿಸಿದೆ.
ಈಗಾಗಲೇ ಕೆಲ ಅಥ್ಲೀಟ್‌ಗಳು ಬರ್ಮಿಂಗ್‌ಹ್ಯಾಮ್ ತಲುಪಿದ್ದು, ಇನ್ನೂ ಕೆಲವರು ಜಾಗತಿಕ ಕೂಟಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಜುಲೈ 23ಕ್ಕೆ ಕ್ರೀಡಾ ಗ್ರಾಮಕ್ಕೆ ಕ್ರೀಡಾಪಟುಗಳಿಗೆ ಪ್ರವೇಶ ಸಿಗಲಿದೆ. ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟವು ಜುಲೈ 28ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಈಗಾಗಲೇ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ 322 ಮಂದಿಯನ್ನೊಳಗೊಂಡ ಭಾರತ ತಂಡವನ್ನು ಈಗಾಗಲೇ ಹೆಸರಿಸಿದೆ. ಇದರಲ್ಲಿ 215 ಅಥ್ಲೀಟ್‌ಗಳು ಹಾಗೂ 107 ಸಹಾಯಕ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಒಳಗೊಂಡಿದೆ.
2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವು 66 ಪದಕಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. ಇನ್ನು ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕಳೆದ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿತ್ತು. ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ, ವೇಟ್‌ಲಿಫ್ಟರ್ ಕನ್ನಡಿಗ ಗುರುರಾಜ್ ಪೂಜಾರಿ, ಒಲಿಂಪಿಕ್ಸ್ ಪದಕ ವಿಜೇತರಾದ ಮೀರಾಬಾಯಿ ಚಾನು, ಪಿ ವಿ ಸಿಂಧು, ಲೊವ್ಲೀನಾ ಬೋರ್ಗೊಹೈನ್, ಭಜರಂಗ್ ಪೂನಿಯಾ, ರವಿಕುಮಾರ್ ದಹಿಯಾ ಸೇರಿದಂತೆ ಬಲಿಷ್ಠ ಆಟಗಾರರನ್ನೊಳಗೊಂಡ ಭಾರತ ತಂಡ ಈ ಬಾರಿ ಪದಕ ಭೇಟೆಯಾಡಲು ಸಜ್ಜಾಗಿದೆ.
Commonwealth Games 2022: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕನ್ನಡತಿ ರಾಜೇಶ್ವರಿಗೆ ಸ್ಥಾನ
ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು 15 ವಿವಿಧ ಗೇಮ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಭಾರತೀಯ ಅಥ್ಲೀಟ್‌ಗಳಿಗೆ ಹುರುಪು ತುಂಬುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ, ಕಾಮನ್‌ವೆಲ್ತ್ ಗೇಮ್ಸ್‌ಗೆ ಸಜ್ಜಾಗಿರುವ ಕ್ರೀಡಾಪಟುಗಳ ಜತೆ ಮಾತುಕತೆ ನಡೆಸಲಿದ್ದಾರೆ.
ಸಿಂಧು ಸಾಧನೆಗೆ ಮೋದಿ, ಬೊಮ್ಮಾಯಿ ಅಭಿನಂದನೆ
ನವದೆಹಲಿ: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ಇದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಕೊಂಡಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಚೊಚ್ಚಲ ಬಾರಿ ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದ ಸಿಂಧುಗೆ ಅಭಿನಂದನೆಗಳು. ಸಿಂಧು ಮತ್ತೊಮ್ಮೆ ತಮ್ಮ ಅಸಾಧಾರಣ ಪ್ರತಿಭೆ ಪ್ರದರ್ಶಿಸಿ, ಯಶಸ್ಸು ಸಾಧಿಸಿದ್ದಾರೆ. ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದೆ’ ಎಂದಿದ್ದಾರೆ. ಅಲ್ಲದೇ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ಗಣ್ಯರು ಸಿಂಧುಗೆ ಅಭಿನಂದನೆ ಸಲ್ಲಿಸಿದ್ದಾರೆ.
Singapore Open 2022: ಚೊಚ್ಚಲ ಬಾರಿಗೆ ಸಿಂಧು ಮುಡಿಗೆ ಸಿಂಗಾಪುರ ಓಪನ್ ಪ್ರಶಸ್ತಿ ಗರಿ
ಭಾನುವಾರ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ 3ನೇ ಶ್ರೇಯಾಂಕಿತ ಸಿಂಧು, ವಿಶ್ವ ನಂ.11 ಚೀನಾದ ವಾಂಗ್ ಝಿ ಯಿ ವಿರುದ್ಧ 21-9, 11-21, 21-15 ಗೇಮ್‌ಗಳಿಂದ ಗೆಲುವು ಸಾಧಿಸಿದರು. ಇತ್ತೀಚೆಗೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲೂ ವಾಂಗ್‌ರನ್ನು ಸೋಲಿಸಿದ್ದ ಸಿಂಧು ಮತ್ತೊಮ್ಮೆ ಮೇಲುಗೈ ಸಾಧಿಸಿದರು. ಈ ಮೂಲಕ ಜುಲೈ 28ಕ್ಕೆ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು.
3ನೇ ಭಾರತೀಯ ಶಟ್ಲರ್: ಸಿಂಗಾಪುರ ಓಪನ್‌ನಲ್ಲಿ ಚಾಂಪಿಯನ್ ಆದ ಭಾರತದ 3ನೇ ಶಟ್ಲರ್ ಎನ್ನುವ ಹಿರಿಮೆಗೆ ಸಿಂಧು ಪಾತ್ರರಾಗಿದ್ದಾರೆ. ಈ ಮೊದಲು 2010ರಲ್ಲಿ ಸೈನಾ ನೆಹ್ವಾಲ್, 2017ರಲ್ಲಿ ಬಿ.ಸಾಯಿಪ್ರಣೀತ್ ಪ್ರಶಸ್ತಿ ಗೆದ್ದಿದ್ದರು.