ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ, ಮಾಜಿ ಕೋಚ್ ರವಿಶಾಸ್ತ್ರಿ ತಂಡದಲ್ಲಿ ಬದಲಾವಣೆಗೆ ಸಲಹೆ ನೀಡಿದ್ದಾರೆ. ಕಳಪೆ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ ಬದಲು ಇಶಾನ್ ಕಿಶನ್‌ರನ್ನು ಓಪನರ್ ಆಗಿ ಆಡಿಸಬೇಕು ಎಂದು ಅವರು ಹೇಳಿದ್ದಾರೆ. 

ಮುಂಬೈ: ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ತಂಡ ನಾಳೆ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ತಂಡದ ಸಂಯೋಜನೆಯಲ್ಲಿ ಒಂದು ಪ್ರಮುಖ ಬದಲಾವಣೆಗೆ ಸಲಹೆ ನೀಡಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ಯುವ ಆಟಗಾರ ಅಭಿಷೇಕ್ ಶರ್ಮಾ ಬದಲು ಇಶಾನ್ ಕಿಶನ್‌ರನ್ನು ಓಪನರ್ ಆಗಿ ಕಣಕ್ಕಿಳಿಸಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.

ವಿಶ್ವದ ನಂಬರ್ 1 ಟಿ20 ಬ್ಯಾಟರ್ ಆಗಿರುವ ಅಭಿಷೇಕ್ ಶರ್ಮಾ, ಈ ವಿಶ್ವಕಪ್‌ನಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಆಡಿದ ಆರು ಪಂದ್ಯಗಳಲ್ಲಿ ಕೇವಲ 13.3ರ ಸರಾಸರಿಯಲ್ಲಿ 80 ರನ್ ಗಳಿಸಿದ್ದಾರೆ. ಗ್ರೂಪ್ ಹಂತದಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದ ಅಭಿಷೇಕ್, ವೆಸ್ಟ್ ಇಂಡೀಸ್ ವಿರುದ್ಧದ ಕಳೆದ ಪಂದ್ಯದಲ್ಲಿ 11 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಔಟಾಗಿದ್ದರು. ಅಭಿಷೇಕ್ ಶರ್ಮಾ ಸದ್ಯ ಲಯದಲ್ಲಿರುವಂತೆ ಕಾಣುತ್ತಿಲ್ಲ.

ಅಭಿಷೇಕ್ ಶರ್ಮಾ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?

"ಸೆಮಿಫೈನಲ್‌ನಂತಹ ಮಹತ್ವದ ಪಂದ್ಯದಲ್ಲಿ ಅಭಿಷೇಕ್‌ನನ್ನು ಆಡಿಸುವ ಮುನ್ನ, ಅವನ ಆತ್ಮವಿಶ್ವಾಸ ಕುಗ್ಗಿದೆಯೇ ಎಂದು ಟೀಮ್ ಮ್ಯಾನೇಜ್‌ಮೆಂಟ್ ಪರಿಶೀಲಿಸಬೇಕು. ನೆಟ್ಸ್‌ನಲ್ಲಿ ಅವನ ಬ್ಯಾಟಿಂಗ್ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಒಂದು ವೇಳೆ ಅವನು ಮಾನಸಿಕವಾಗಿ ಕುಗ್ಗಿದ್ದರೆ, ಸಂಜು ಸ್ಯಾಮ್ಸನ್ ಜೊತೆ ಇಶಾನ್ ಕಿಶನ್‌ರನ್ನು ಓಪನರ್ ಆಗಿ ಆಡಿಸಬೇಕು. ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್‌ನನ್ನು ವಾಪಸ್ ತರಬೇಕು," ಎಂದು ಶಾಸ್ತ್ರಿ ಐಸಿಸಿಯ ಮಾಸಿಕ ವಿಮರ್ಶೆಯಲ್ಲಿ ತಿಳಿಸಿದ್ದಾರೆ.

"ಅಭಿಷೇಕ್‌ನ ಆತ್ಮವಿಶ್ವಾಸ ಕುಸಿದಿದ್ದರೆ ಮಾತ್ರ ನಾನು ಇಶಾನ್ ಕಿಶನ್‌ರನ್ನು ಓಪನರ್ ಆಗಿ ಆಡಿಸುವ ಬಗ್ಗೆ ಯೋಚಿಸುತ್ತೇನೆ," ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧವೇ ಅಭಿಷೇಕ್ 54 ಎಸೆತಗಳಲ್ಲಿ 135 ರನ್ ಸಿಡಿಸಿದ್ದನ್ನು ಶಾಸ್ತ್ರಿ ನೆನಪಿಸಿಕೊಂಡಿದ್ದಾರೆ. ಇದು ಟಿ20ಯಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ಸ್ಕೋರ್ ಆಗಿದೆ.

ಈ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್, ಏಳು ಪಂದ್ಯಗಳಿಂದ 185ರ ಸ್ಟ್ರೈಕ್ ರೇಟ್‌ನಲ್ಲಿ 224 ರನ್ ಗಳಿಸಿದ್ದಾರೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದು 24 ಎಸೆತಗಳಲ್ಲಿ 61 ರನ್ ಚಚ್ಚಿದ್ದರು. ಆದರೆ, ರಿಂಕು ಸಿಂಗ್‌ಗೆ ಈ ವಿಶ್ವಕಪ್‌ನಲ್ಲಿ ಇನ್ನೂ ಮಿಂಚಲು ಸಾಧ್ಯವಾಗಿಲ್ಲ.

ಅಭಿಷೇಕ್‌ಗೆ ಪಾಂಟಿಂಗ್ ಬೆಂಬಲ

ಅಭಿಷೇಕ್‌ನನ್ನು ಕೈಬಿಡಬೇಕೆಂಬ ಚರ್ಚೆಗಳ ನಡುವೆಯೂ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವನಿಗೆ ಬೆಂಬಲ ಸೂಚಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಅಭಿಷೇಕ್ ಏನಾದರೂ ಸರ್ಪ್ರೈಸ್ ನೀಡಬಹುದು ಎಂದು ಪಾಂಟಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ. ಸತತ ವೈಫಲ್ಯಗಳಿಂದ ಮಾನಸಿಕವಾಗಿ ಕುಗ್ಗದಿರಲು, ಅಭ್ಯಾಸದಿಂದ ಸಣ್ಣ ಬ್ರೇಕ್ ತೆಗೆದುಕೊಂಡು ಫ್ರೆಶ್ ಆಗುವಂತೆ ಪಾಂಟಿಂಗ್ ಸಲಹೆ ನೀಡಿದ್ದಾರೆ.

ಭಾರತ-ಇಂಗ್ಲೆಂಡ್ ಸೆಮಿಫೈನಲ್ ಫೈಟ್:

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಂಬೈನ ವಾಂಖೆಡೆ ಮೈದಾನದಲ್ಲಿ ಮಾರ್ಚ್ 05ರಂದು ಕಾದಾಡಲಿವೆ. ಸತತ ಮೂರನೇ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನು ಸೂಪರ್-8 ಹಂತದಲ್ಲಿ ಇಂಗ್ಲೆಂಡ್ ತಂಡವು ಆಡಿದ ಮೂರು ಪಂದ್ಯಗಳನ್ನು ಗೆದ್ದು ಸೆಮೀಸ್‌ಗೆ ಎಂಟ್ರಿಕೊಟ್ಟಿದೆ. ಹೀಗಾಗಿ ಗುರುವಾರ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.