Commonwealth Games 2022: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕನ್ನಡತಿ ರಾಜೇಶ್ವರಿಗೆ ಸ್ಥಾನ
* ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್
* ಭಾರತ ತಂಡವನ್ನು ಮುನ್ನಡೆಸಲಿರುವ ಹರ್ಮನ್‌ಪ್ರೀತ್ ಕೌರ್
* ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್‌ಗೆ ಸ್ಥಾನ
ನವದೆಹಲಿ(ಜು.12): ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆಯಲಿರುವ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನ ಮಹಿಳಾ ಟಿ20 ಟೂರ್ನಿಗೆ 15 ಮಂದಿಯ ತಂಡ ಪ್ರಕಟವಾಗಿದ್ದು, ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್ ಸ್ಥಾನ ಪಡೆದಿದ್ದಾರೆ. ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧನಾ ಉಪನಾಯಕಿಯಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಜೆಮಿಮಾ ರೋಡ್ರಿಗಸ್, ಸ್ನೇಹ ರಾಣಾ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಿಮ್ರಾನ್ ಬಹದೂರ್, ರಿಚಾ ಘೋಷ್, ಪೂನಂ ಯಾದವ್ ಮೀಸಲು ಆಟಗಾರ್ತಿಯರಾಗಿ ತಂಡದ ಜೊತೆ ಪ್ರಯಾಣಿಸಲಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ಪ್ರವಾಸದಿಂದ ಹೊರಗುಳಿದಿದ್ದ ಆಲ್ರೌಂಡರ್ ಸ್ನೆಹ್ ರಾಣಾ, ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ನೆಹ್ ರಾಣಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇನ್ನುಳಿದಂತೆ ವಿಕೆಟ್ ಕೀಪರ್ ಬ್ಯಾಟರ್ ತಾನಿಯಾ ಭಾಟಿಯಾ ಕೂಡಾ ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂಡವು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಯಾಶ್ತಿಕಾ ಭಾಟಿಯಾ ಅವರನ್ನು ಆಯ್ಕೆ ಮಾಡಿಕೊಂಡಿದೆ.
ನೀತು ಡೇವಿಡ್ ನೇತೃತ್ವದ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು ತಾನಿಯಾ ಭಾಟಿಯಾ ಅವರಿಗೆ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಣೆಹಾಕಿದ್ದು, ಸಾಕಷ್ಟು ಅಚ್ಚರಿಗೆ ಪಾತ್ರವಾಗಿದೆ. ತಾನಿಯಾ ಭಾಟಿಯಾ 22 ಪಂದ್ಯಗಳಿಂದ ಕೇವಲ 9.72ರ ಬ್ಯಾಟಿಂಗ್ ಸರಾಸರಿಯಲ್ಲಿ 166 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದಾರೆ. ಆದರೆ 14 ಪಂದ್ಯಗಳಿಂದ 112ರ ಸ್ಟ್ರೈಕ್‌ರೇಟ್‌ನಲ್ಲಿ 191 ರನ್ ಚಚ್ಚಿರುವ ರಿಚಾ ಘೋಷ್ ಮೀಸಲು ಆಟಗಾರ್ತಿಯಾಗಿ ಸ್ಥಾನ ಗಳಿಸಿಕೊಂಡಿದ್ದಾರೆ.
ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಆಸ್ಪ್ರೇಲಿಯಾ, ಬಾರ್ಬಡೋಸ್ ಹಾಗೂ ಪಾಕಿಸ್ತಾನ ಜೊತೆ ಸ್ಥಾನ ಪಡೆದಿದ್ದು, ಜುಲೈ 29ಕ್ಕೆ ಆಸೀಸ್ ವಿರುದ್ಧ ಮೊದಲ ಪಂದ್ಯವಾಡಲಿದೆ. 31ಕ್ಕೆ ಪಾಕಿಸ್ತಾನ, ಆಗಸ್ಟ್ 3ಕ್ಕೆ ಬಾರ್ಬಡೊಸ್ ಸವಾಲನ್ನು ಎದುರಿಸಲಿದೆ. ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ‘ಬಿ’ ಗುಂಪಿನಲ್ಲಿವೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡಲಿವೆ.
ಸೌರವ್ ಗಂಗೂಲಿ BCCI ಅಧ್ಯಕ್ಷರಾದ್ಮೇಲೆ ಏನೆಲ್ಲಾ ಅವಾಂತರಗಳು ಆಗಿವೆ ಗೊತ್ತಾ..?
ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Birmingham Commonwealth Games) ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ. ಆದರೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು 1998ರಲ್ಲಿ ಕೌಲಲಾಂಪುರದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಪುರುಷರ ಕ್ರಿಕೆಟ್ ತಂಡವು ಚಾಂಪಿಯನ್ ಆಗುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು.
ತಂಡ: ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಮೇಘನಾ ಸಿಂಗ್, ತಾನಿಯಾ ಭಾಟಿಯಾ, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಠಾಕೂರ್, ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಹರ್ಲೀನ್ ಡಿಯೋಲ್, ಸ್ನೆಹ್ ರಾಣಾ.
ಆಸ್ಟ್ರೇಲಿಯಾ ಎದುರು ಲಂಕಾಕ್ಕೆ ಇನ್ನಿಂಗ್ಸ್ ಜಯದ ಖುಷಿ
ಗಾಲೆ: ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಶ್ರೀಲಂಕಾ ಇನ್ನಿಂಗ್ಸ್ ಮತ್ತು 39 ರನ್ ಜಯ ಸಾಧಿಸಿ, 2 ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಗೊಳಿಸಿದೆ. ದಿನೇಶ್ ಚಾಂಡಿಮಲ್(ಔಟಾಗದೆ 206) ದ್ವಿಶತಕದ ನೆರವಿನಿಂದ ಮೊದಲ ಇನ್ನಿಂಗ್ಸಲ್ಲಿ 554 ರನ್ ಕಲೆಹಾಕಿದ ಶ್ರೀಲಂಕಾ, 2ನೇ ಇನ್ನಿಂಗ್‌್ಸನಲ್ಲಿ ಆಸ್ಪ್ರೇಲಿಯಾವನ್ನು 151 ರನ್‌ಗೆ ಆಲೌಟ್ ಮಾಡಿತು.
ಟೆಸ್ಟ್‌ಗೆ ಪಾದಾರ್ಪಣೆ ಮಾಡಿ ಮೊದಲ ಇನ್ನಿಂಗಲ್ಲಿ 6 ವಿಕೆಟ್ ಪಡೆದಿದ್ದ ಪ್ರಭಾತ್ ಜಯಸೂರ್ಯ, 2ನೇ ಇನ್ನಿಂಗ್ಸಲ್ಲೂ 6 ವಿಕೆಟ್ ಕಿತ್ತರು. ನಾಲ್ಕೇ ದಿನಕ್ಕೆ ಪಂದ್ಯ ಮುಕ್ತಾಯಗೊಂಡಿತು. ಟಿ20 ಸರಣಿಯನ್ನು ಆಸ್ಪ್ರೇಲಿಯಾ, ಏಕದಿನ ಸರಣಿಯನ್ನು ಆಸ್ಪ್ರೇಲಿಯಾ ಗೆದ್ದಿದ್ದವು. ಮೊದಲ ಟೆಸ್ಟ್‌ನಲ್ಲಿ ಆಸೀಸ್ 10 ವಿಕೆಟ್ ಜಯ ಪಡೆದಿತ್ತು.