ಪ್ರೊ ಕಬಡ್ಡಿ 2019: ತವರಲ್ಲಿ ಪುಣೆ ಭರ್ಜರಿ ಆರಂಭ
ಪುಣೇರಿ ಪಲ್ಟನ್ ತಂಡ ತವರಿನಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ನಿತಿನ್ ತೋಮರ್ ಮಿಂಚಿನ ಪ್ರದರ್ಶನದ ಮೂಲಕ ಪುಣೆಗೆ ಗೆಲುವು ತಂದಿತ್ತರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಪುಣೆ(ಸೆ.15): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್, ತನ್ನ ತವರಿನ ಚರಣದಲ್ಲಿ ಗೆಲುವಿನ ಆರಂಭ ಪಡೆದುಕೊಂಡಿದೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ 43-33 ಅಂಕಗಳಲ್ಲಿ ಜಯ ಸಾಧಿಸಿತು. ತಂಡಕ್ಕಿದು 5ನೇ ಗೆಲುವಾಗಿದ್ದು, ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಂಡಿದೆ. ಲೀಗ್ ಹಂತದಲ್ಲಿ ಪುಣೆಗೆ ಇನ್ನು 7 ಪಂದ್ಯ ಬಾಕಿ ಇದ್ದು, 7ರಲ್ಲೂ ಗೆದ್ದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಇದೆ.
ಯುವ ಕಬಡ್ಡಿ ಪ್ರತಿಭೆಗಳಿಗೆ ವೇದಿಕೆ KBD ಜೂನಿಯರ್ಸ್
ಗುಜರಾತ್ 15 ಪಂದ್ಯಗಳಲ್ಲಿ 9ರಲ್ಲಿ ಸೋಲುಂಡಿದ್ದು, ತಂಡ ಪ್ಲೇ-ಆಫ್ಗೇರಬೇಕಿದ್ದರೆ ಬಾಕಿ ಇರುವ 7 ಪಂದ್ಯಗಳಲ್ಲಿ ಗೆಲ್ಲಲೇ ಬೇಕಿದೆ. ಶನಿವಾರದ ಪಂದ್ಯದಲ್ಲಿ ಪುಣೆಗೆ ರೈಡರ್‌ಗಳಾದ ನಿತಿನ್ ತೋಮರ್ (11 ಅಂಕ), ಮಂಜೀತ್ (06 ಅಂಕ) ನೆರವಾದರು. ನಾಯಕ ಸುರ್ಜೀತ್ 5 ಟ್ಯಾಕಲ್ ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 20 ರೈಡ್ ಅಂಕ, 18 ಟ್ಯಾಕಲ್ ಅಂಕ ಗಳಿಸಿದ ಪುಣೆ, ಸುಲಭ ಗೆಲುವು ಸಾಧಿಸಿತು. ಮೊದಲಾರ್ಧದ ಅಂತ್ಯಕ್ಕೆ 24-10ರ ಮುನ್ನಡೆ ಸಾಧಿಸಿದ್ದು, ಪುಣೆ ಗೆಲುವನ್ನು ಸುಲಭಗೊಳಿಸಿತು.
PKL 2019: ಆರಂಭದಲ್ಲಿ ಅಬ್ಬರಿಸಿ ಅಂತ್ಯದಲ್ಲಿ ಪಂದ್ಯ ಕೈಚೆಲ್ಲಿದ ಬುಲ್ಸ್!
ಹರ್ಯಾಣ ಜಯದ ಓಟ!
ಶನಿವಾರ ನಡೆದ 2ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್, ತಮಿಳ್ ತಲೈವಾಸ್ ವಿರುದ್ಧ 43-35 ಅಂಕಗಳಲ್ಲಿ ಜಯ ಸಾಧಿಸಿತು. ಟೂರ್ನಿಯಲ್ಲಿ ಹರ್ಯಾಣಕ್ಕೆ ಇದು 10ನೇ ಜಯವಾಗಿದೆ. 54 ಅಂಕಗಳಿಸಿರುವ ಹರ್ಯಾಣ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ.
ತಲೈವಾಸ್ 11ನೇ ಸೋಲಿನೊಂದಿಗೆ ಕೊನೆ ಸ್ಥಾನದಲ್ಲಿದ್ದು, ತಂಡ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದೆ. ಮೊದಲಾರ್ಧದಲ್ಲಿ 16-14ರ ಮುನ್ನಡೆ ಪಡೆದಿದ್ದ ಹರ್ಯಾಣ, ದ್ವಿತೀಯಾರ್ಧದಲ್ಲಿ ಭರ್ಜರಿ ಆಟವಾಡಿ 8 ಅಂಕಗಳಿಂದ ಗೆಲುವು ಪಡೆಯಿತು.