ಇಂದಿನಿಂದ ಬೆಂಗಳೂರಲ್ಲಿ ಪ್ರೊ ಕಬಡ್ಡಿ ಹವಾ
ಬಹುನಿರೀಕ್ಷಿತ ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಬೆಂಗಳೂರಿನ ಚರಣದ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಕಳೆದೆರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಬಡ್ಡಿ ಕಲರವ ಆರಂಭವಾಗುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
"
ಬೆಂಗಳೂರು[ಆ.31]: ಪ್ರೊ ಕಬಡ್ಡಿ 7ನೇ ಆವೃತ್ತಿಯ ಬೆಂಗಳೂರು ಚರಣ, 2 ವರ್ಷಗಳ ಬಳಿಕ ಮತ್ತೆ ತವರಿಗೆ ವಾಪಸಾಗಿದೆ. ರಾಜ್ಯ ರಾಜಧಾನಿಯ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ ಆಯೋಜಿಸಲು ರಾಜ್ಯ ಕ್ರೀಡಾ ಇಲಾಖೆ ಅನುಮತಿ ನೀಡಿರುವ ಕಾರಣದಿಂದ ಬೆಂಗಳೂರಲ್ಲಿ ಮತ್ತೆ ಕಬಡ್ಡಿ ಹವಾ ಸೃಷ್ಟಿಯಾಗಿದೆ.
PKL7: ತವರಿನಲ್ಲಿ ಅಬ್ಬರಿಸಲು ರೆಡಿ ಎಂದ ಶೆರಾವತ್!
2 ವರ್ಷಗಳ ನಂತರ ತವರು ಅಭಿಮಾನಿಗಳ ಪ್ರೋತ್ಸಾಹ ದೊಂದಿಗೆ ಆಟವಾಡುವುದಕ್ಕೆ ತುಂಬ ಸಂತಸವಾಗುತ್ತಿದೆ ಎಂದು ಬೆಂಗಳೂರು ಬುಲ್ಸ್ ಕೋಚ್ ರಣಧೀರ್ ಸಿಂಗ್ ಹೇಳಿದ್ದಾರೆ. ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣಧೀರ್ ಸಿಂಗ್, ಕಳೆದ 2 ವರ್ಷಗಳ ಕಾಲ ಬೆಂಗಳೂರು ಚರಣವನ್ನು ಮತ್ತೊಂದು ನಗರಗಳಲ್ಲಿ ಆಯೋಜಿಸಲಾಗಿತ್ತು. ಆಯಾ ನಗರಗಳಲ್ಲಿ ಕಬಡ್ಡಿ ಅಭಿಮಾನಿಗಳು ಏನೇ ಬೆಂಬಲ ನೀಡಿದ್ದರೂ ಅದು ತವರು ಅಭಿಮಾನಿಗಳ ಬೆಂಬಲಕ್ಕೆ ಸರಿಸಮವಲ್ಲ. ಆದರೂ ಬೆಂಗಳೂರು ತಂಡ ಎಲ್ಲಾ ಆವೃತ್ತಿಗಳಲ್ಲೂ ಉತ್ತಮ ಪ್ರದರ್ಶನ ತೋರಿದೆ. ಹಾಲಿ ಚಾಂಪಿಯನ್ ಆಗಿರುವ ಕಾರಣದಿಂದ ತವರು ಚರಣದಲ್ಲಿ ಕಬಡ್ಡಿ ಆಯೋಜನೆಯಾಗಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ. ನಿರೀಕ್ಷೆಯಂತೆ ಒತ್ತಡ ಇರಲಿದೆ. ಆದರೆ ಆಟಗಾರರು ಒತ್ತಡವನ್ನು ಮೀರಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಹೇಳಿದರು.
PKL7: ಬೆಂಗ್ಳೂರಿಗೆ ಬಂತು ಕಬಡ್ಡಿ; ಕನ್ನಡದಲ್ಲೇ ರೋಹಿತ್ ಆಹ್ವಾನ!
ತಂಡ ಎಲ್ಲಾ ವಿಭಾಗಗಳಲ್ಲಿ ಆಟಗಾರರ ನಡುವೆ ಉತ್ತಮ ಹೊಂದಾಣಿಕೆ ಇದೆ. ಪ್ರತಿ ಪಂದ್ಯದಲ್ಲೂ ವಿಭಿನ್ನ ತಂತ್ರಗಾರಿಕೆಯಲ್ಲಿ ಕಣಕ್ಕಿಳಿಯಲಿದ್ದೇವೆ. ಪ್ರೊ ಕಬಡ್ಡಿಯ ಮೊದಲ 4 ಆವೃತ್ತಿಗಳನ್ನು ಬೆಂಗಳೂರು ಚರಣದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. 5ನೇ ಆವೃತ್ತಿಗೆ ಬೆಂಗಳೂರು ಚರಣ ನೀಡಲು ರಾಜ್ಯ ಕ್ರೀಡಾ ಇಲಾಖೆ ಅವಕಾಶ ನೀಡಿರಲಿಲ್ಲ . ಕಡೇ ಕ್ಷಣದಲ್ಲಿ ಬೆಂಗಳೂರು ಚರಣ, ಮಹಾರಾಷ್ಟ್ರದ ನಾಗ್ಪುರಕ್ಕೆ ವರ್ಗಾವಣೆಗೊಂಡಿತ್ತು. 6ನೇ ಆವೃತ್ತಿಯ ಬೆಂಗಳೂರು ಚರಣ ಆಯೋಜನೆಗೆ ಕ್ರೀಡಾ ಇಲಾಖೆ ಅಡ್ಡಗಾಲು ಹಾಕಿತ್ತು. ಹೀಗಾಗಿ 6ನೇ ಆವೃತ್ತಿಯ ಬೆಂಗಳೂರು ಚರಣ ಪುಣೆಗೆ ವರ್ಗವಾಗಿತ್ತು. ಬೆಂಗಳೂರು ಬುಲ್ಸ್ ಆಯಾ ನಗರಗಳನ್ನೆ ತನ್ನ 2ನೇ ಚರಣ ಎಂದು ಸ್ವೀಕರಿಸಿ ಪಂದ್ಯವನ್ನಾಡಿತ್ತು. ಅಲ್ಲಿಯ ಅಭಿಮಾನಿ ಗಳು ಬುಲ್ಸ್ ತಂಡದ ಆಟಗಾರರನ್ನು ಹುರಿದುಂಬಿಸಿದ್ದರು. ಇದೀಗ ಬುಲ್ಸ್ ತಂಡ, ಮತ್ತೆ ತವರು ಚರಣದಲ್ಲಿ ಪಂದ್ಯವನ್ನಾಡಲು ಸಜ್ಜಾಗಿದೆ. ಆ.31 ರಿಂದ ಸೆ.6 ರವರೆಗೆ ಬೆಂಗಳೂರಿನಲ್ಲಿ 11 ಪಂದ್ಯಗಳು ನಡೆಯಲಿವೆ. ಇದರಲ್ಲಿ ಬೆಂಗಳೂರು ಬುಲ್ಸ್ ತಂಡ ಕೇವಲ 4 ಪಂದ್ಯಗಳನ್ನು ಮಾತ್ರ ಆಡಲಿದೆ. ತವರಿನ ಚರಣದಲ್ಲಿ ಬುಲ್ಸ್‌ಗೆ 3 ದಿನಗಳ ಕಾಲ ವಿಶ್ರಾಂತಿ ದೊರೆಯಲಿದೆ. ಸದ್ಯ 11 ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ, 6 ಗೆಲುವು ಸಾಧಿಸಿದ್ದು, 5 ಸೋಲು ಕಂಡಿದೆ. 33 ಅಂಕಗಳಿಂದ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತವರು ಚರಣದ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಮುಂದಿನ ಹಾದಿಗೇರಲು ಮಹತ್ವದ್ದಾಗಿದೆ. ಹೀಗಾಗಿ ಬೆಂಗಳೂರು ತಂಡ, ಒತ್ತಡ ಮೀರಿ ಉತ್ತಮ ಪ್ರದರ್ಶನ ತೋರುವ ಅಗತ್ಯತೆಯಿದೆ.