* ಸಾಂದರ್ಭಿಕ ಚಿತ್ರ ಬಳಸಲಾಗಿದೆ

ಬೆಂಗಳೂರು(ಫೆ.14): ಪ್ರೊ ಕಬಡ್ಡಿ ಟೂರ್ನಿಯ ಆಯ್ಕೆ ಪ್ರಕ್ರಿಯೆಗಿಂತ, ಇಂಡೋ-ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಆಯ್ಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನ್ಯೂ ಕಬಡ್ಡಿ ಫೆಡರೇಷನ್‌ ನಡೆಸುತ್ತಿರುವ ಬಂಡಾಯ ಲೀಗ್‌ನದ್ದು ಅಖಿಲ ಭಾರತ ಆಯ್ಕೆ ಪ್ರಕ್ರಿಯೆ ಆಗಿದ್ದರಿಂದ, ವಿವಿಧ ನಗರಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಆಟಗಾರರು ಬುಧವಾರ ಇಲ್ಲಿನ ವಿದ್ಯಾನಗರ ಕ್ರೀಡಾ ಹಾಸ್ಟೆಲ್‌ ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 271 ಆಟಗಾರರು ಭಾಗವಹಿಸಿದ್ದರು. ಈ ಪೈಕಿ 200 ಆಟಗಾರರನ್ನು ಲೀಗ್‌ಗೆ ಆಯ್ಕೆ ಮಾಡಲಾಗಿದೆ.

200 ಆಟಗಾರರ ಪೈಕಿ 150 ಆಟಗಾರರು ಲೀಗ್‌ನಲ್ಲಿ 8 ತಂಡಗಳಲ್ಲಿ ಆಡಲಿದ್ದಾರೆ. ಇನ್ನುಳಿದ 50 ಯುವ ಆಟಗಾರರಿಗೆ ಹೆಚ್ಚಿನ ತರಬೇತಿಯನ್ನು ನೀಡಲು ನ್ಯೂ ಕಬಡ್ಡಿ ಫೆಡರೇಷನ್‌ ನಿರ್ಧರಿಸಿದೆ.

ಪ್ರೊ ಕಬಡ್ಡಿ v/s ನ್ಯೂ ಕಬಡ್ಡಿ- ಗೊಂದಲದಲ್ಲಿ ಆಟಗಾರರು!

ಆಟಗಾರರ ಆಯ್ಕೆ ಸಮಿತಿಯಲ್ಲಿ 12 ತಜ್ಞ ಮಾಜಿ ಕಬಡ್ಡಿ ಆಟಗಾರರು ಇದ್ದಾರೆ. ಆಯ್ಕೆ ಪಾರದರ್ಶಕವಾಗಿ ನಡೆಯುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಆಯ್ಕೆ ಸಮಿತಿಯಲ್ಲಿರುವವರು ದೇಶವನ್ನು ಪ್ರತಿನಿಧಿಸಿದ ಆಟಗಾರರು ಹಾಗೂ ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. ರಾಜ್ಯದಿಂದ 29 ಆಟಗಾರರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಪ್ರತಿಭೆ ಇರುವ ಆಟಗಾರರಿಗೆ ಲೀಗ್‌ನಲ್ಲಿ ಆಡಲು ಅವಕಾಶ ಲಭಿಸಲಿದೆ ಎಂದು ಆಯೋಜಕರು ಹೇಳಿದರು.

ಆಟಗಾರರ ವಿಂಗಡಣೆ: ಆಟಗಾರರ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಗುರುವಾರ ಆಯ್ಕೆಯಾಗಿರುವ ಆಟಗಾರರನ್ನು ‘ಎ’, ‘ಬಿ’, ‘ಸಿ’ ಹಾಗೂ ‘ಡಿ’ ದರ್ಜೆಯಾಗಿ ವಿಂಗಡಿಸಲಾಗುವುದು. ಗ್ರೇಡ್‌ ಪಡೆದ ಆಟಗಾರರಿಗೆ ಕ್ರಮವಾಗಿ 10 ಲಕ್ಷ ರುಪಾಯಿ , 8 ಲಕ್ಷ ರುಪಾಯಿ, 6 ಲಕ್ಷ ವೇತನ ನೀಡಲಾಗುತ್ತದೆ. ‘ಡಿ’ ದರ್ಜೆಯಲ್ಲಿ 50 ಆಟಗಾರರನ್ನು ಆಯ್ಕೆ ಮಾಡಿ ಹೆಚ್ಚಿನ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಆಯೋಜಕರು ಹೇಳಿದರು.

ಪ್ರೊ ಕಬಡ್ಡಿ ಆಟಗಾರರು ಭಾಗಿ: ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 18 ರಿಂದ 20 ಪ್ರೊ ಕಬಡ್ಡಿ ಆಟಗಾರರು ಭಾಗವಹಿಸಿದ್ದರು ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ. ಈ ಬೆಳವಣೆಗೆ ಅಚ್ಚರಿ ಮೂಡಿಸಿದೆ. ಉಳಿದಂತೆ ಸವೀರ್‍ಸಸ್‌, ಎಎಸ್‌ಸಿ, ರೈಲ್ವೇಸ್‌ ಹಾಗೂ ಪೊಲೀಸ್‌ ಇಲಾಖೆಯ ಕಬಡ್ಡಿ ಆಟಗಾರರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಪರೀಕ್ಷೆಗೆ 100 ರೆಫ್ರಿಗಳು ಹಾಜರ್‌!

ಆಟಗಾರರ ಆಯ್ಕೆ ಪ್ರಕ್ರಿಯೆ ಜತೆ ಅಂಪೈರ್‌ಗಳ ಆಯ್ಕೆ ಪ್ರಕ್ರಿಯೆ ಕೂಡ ನಡೆಸಲಾಯಿತು. ಕರ್ನಾಟಕದಿಂದ 25 ರೆಫ್ರಿಗಳು ಭಾಗವಹಿಸಿದ್ದರು. ಒಟ್ಟಾರೆ ದಕ್ಷಿಣ ಭಾರತದಿಂದ 100 ರೆಫ್ರಿಗಳು ಪಾಲ್ಗೊಂಡಿದ್ದರು. ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಆಟಗಾರರ ಆಯ್ಕೆ ಪ್ರಕ್ರಿಯೆ ವೇಳೆ ಕಾರ್ಯನಿರ್ವಹಿಸಲು ಅವಕಾಶ ನೀಡಿ, ಉತ್ತಮ ಪ್ರದರ್ಶನ ತೋರಿದವರನ್ನು ಗುರುತಿಸಲಾಯಿತು.

ಪ್ರೊ ಕಬಡ್ಡಿ ಆಯ್ಕೆಗೆ 138 ಆಟಗಾರರು

ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಚರಣದ ‘ಭವಿಷ್ಯದ ಕಬಡ್ಡಿ ತಾರೆಯರು’ ಆಯ್ಕೆ ಪ್ರಕ್ರಿಯೆ ಬುಧವಾರವೂ ನಡೆಯಿತು. ಮೊದಲ ದಿನ 100 ಆಟಗಾರರು ಪಾಲ್ಗೊಂಡಿದ್ದರು. 2ನೇ ದಿನವಾದ ಬುಧವಾರ ಒಟ್ಟು 138 ಆಟಗಾರರು ಇದ್ದರು ಎಂದು ಮೂಲಗಳು ತಿಳಿಸಿವೆ. 2 ದಿನಗಳ ಕಾಲ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 500ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಆಯೋಜಕರಲ್ಲಿತ್ತು ಎನ್ನಲಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ದೊರೆಯಲಿಲ್ಲ.