ಬೆಂಗಳೂರು(ಫೆ.13):  ಪ್ರೊ ಕಬಡ್ಡಿ ಟೂರ್ನಿ ಹಾಗೂ ಅಂತಾರಾಷ್ಟ್ರೀಯ ಕಬಡ್ಡಿ ಲೀಗ್‌ ನಡುವಿನ ಜಟಾಪಟಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಎರಡೂ ಪಂದ್ಯಾವಳಿಯ ಆಯ್ಕೆ ಪ್ರಕ್ರಿಯೆಗಳು ಒಂದೇ ದಿನಾಂಕದಲ್ಲಿ ನಿಗದಿಯಾಗಿರುವುದರಿಂದ ಯುವ ಕಬಡ್ಡಿ ಆಟಗಾರರು ಗೊಂದಲಕ್ಕೀಡಾಗಿದ್ದಾರೆ. ಮಂಗಳವಾರದಿಂದ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾಗಿರುವ ‘ಭವಿಷ್ಯ ಕಬಡ್ಡಿ ತಾರೆಯರ’ ಆಯ್ಕೆ ಪ್ರಕ್ರಿಯೆಯ ಮೊದಲ ದಿನ 100 ಆಟಗಾರರು ಭಾಗವಹಿಸಿದ್ದರು. 

ಇದನ್ನೂ ಓದಿ: ಲೋಕಸಭಾ ಚುನಾವಣೆ ದಿನಾಂಕ ನಿರ್ಧರಿಸಿದ ಬಳಿಕ ಐಪಿಎಲ್ ವೇಳಾಪಟ್ಟಿ ಪ್ರಕಟ!

ಆಯ್ಕೆ ಪ್ರಕ್ರಿಯೆಗೆ ಕನಿಷ್ಠ 500 ಆಟಗಾರರನ್ನು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಆಟಗಾರರು ಬಾರದ ಕಾರಣ ಆಯೋಜಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೂ 2ನೇ ದಿನವಾದ ಬುಧವಾರ ಹೆಚ್ಚಿನ ಯುವ ಪ್ರತಿಭೆಗಳು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ ಎಂದು ಆಯೋಜಕರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಇದನ್ನೂ ಓದಿ: ರೋಹಿತ್’ಗೆ ರೆಸ್ಟ್; ಈ ಇಬ್ಬರಿಗೆ ವಿಶ್ವಕಪ್ ಎಂಟ್ರಿ ಕೊಡಲು ಕೊನೆಯ ಚಾನ್ಸ್..?

ಇತ್ತ ನ್ಯೂ ಕಬಡ್ಡಿ ಫೆಡರೇಷನ್‌ ಬುಧವಾರ ಹಾಗೂ ಗುರುವಾರ, ಇಂಡೋ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ಗೆ ಅಖಿಲ ಭಾರತ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಬೆಂಗಳೂರು ಹೊರವಲಯದಲ್ಲಿರುವ ವಿದ್ಯಾನಗರ ಕ್ರೀಡಾ ಹಾಸ್ಟೆಲ್‌ ಆವರಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಪ್ರೊ ಕಬಡ್ಡಿಯಲ್ಲೇ ವೇತನ ಹೆಚ್ಚು!
‘ಭವಿಷ್ಯ ಕಬಡ್ಡಿ ತಾರೆಯರು’ ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾಗಿ, ಅಂತಿಮ ಸುತ್ತಿನ ಶಿಬಿರಕ್ಕೆ ತೆರಳಿದರೆ ಅಲ್ಲಿ ಪ್ರೊ ಕಬಡ್ಡಿ ತಂಡಗಳು ತಮಗೆ ಸೂಕ್ತ ಎನಿಸುವ ಆಟಗಾರರನ್ನು ಸೇರಿಸಿಕೊಳ್ಳಲಿವೆ. ಆಯ್ಕೆಯಾಗುವ ಆಟಗಾರರಿಗೆ ಒಂದು ಆವೃತ್ತಿಗೆ .6 ಲಕ್ಷ ವೇತನ ದೊರೆಯಲಿದೆ. ಹೊಸದಾಗಿ ಆರಂಭಗೊಳ್ಳುತ್ತಿರುವ ಇಂಡೋ-ಇಂಟರ್‌ನ್ಯಾಷನಲ್‌ ಲೀಗ್‌ನಲ್ಲಿ ಆಟಗಾರರನ್ನು 3 ವಿಭಾಗಗಳಾಗಿ ವಿಂಗಡಿಸಿ ಹಣ ನೀಡಲಾಗುತ್ತದೆ. ಯುವ ಆಟಗಾರರಿಗೆ .2 ಲಕ್ಷ ರು.ಗಳನ್ನು ನಿಗದಿ ಮಾಡಲಾಗಿದೆ. ಒಂದೇ ದಿನ ಎರಡೂ ಆಯ್ಕೆ ಪ್ರಕ್ರಿಯೆ ನಡೆಯಲಿರುವ ಕಾರಣ ಆಟಗಾರರಲ್ಲಿ ಗೊಂದಲ ಶುರುವಾಗಿದೆ ಎನ್ನಲಾಗಿದೆ.