* 36ನೇ ನ್ಯಾಷನಲ್ ಗೇಮ್ಸ್‌ನಲ್ಲಿ ಕರ್ನಾಟಕ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ* ಈ ಬಾರಿ 27 ಚಿನ್ನ ಸೇರಿ ಒಟ್ಟು 88 ಪದಕಗಳನ್ನು ಜಯಿಸಿದ ಕರ್ನಾಟಕ* ರಾಜ್ಯದ ಹಾಶಿಕಾ ಶ್ರೇಷ್ಠ ಮಹಿಳಾ ಕ್ರೀಡಾಪಟು ಗೌರವ
ಬೆಂಗಳೂರು(ಅ.13): 36ನೇ ನ್ಯಾಷನಲ್ ಗೇಮ್ಸ್ ಮುಕ್ತಾಯಗೊಂಡಿದ್ದು ಕರ್ನಾಟಕ ತನ್ನ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದೆ. ಈ ಬಾರಿ ರಾಜ್ಯವು 27 ಚಿನ್ನ ಸೇರಿ ಒಟ್ಟು 88 ಪದಕಗಳನ್ನು ಗೆಲ್ಲುವ ಮೂಲಕ ಪದಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು. 1997ರಲ್ಲಿ ರಾಷ್ಟ್ರೀಯ ಗೇಮ್ಸ್‌ಗೆ ಬೆಂಗಳೂರು ಆತಿಥ್ಯ ವಹಿಸಿತ್ತು. ಆ ವರ್ಷ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೂ, ಇಷ್ಟೊಂದು ಸಂಖ್ಯೆಯಲ್ಲಿ ಪದಕಗಳನ್ನು ಜಯಿಸಿರಲಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದಿನ ಮೂರು ನ್ಯಾಷನಲ್ ಗೇಮ್ಸ್‌ಗಳಲ್ಲಿ ಕರ್ನಾಟಕದ ಪ್ರದರ್ಶನವನ್ನು ಗಮನಿಸಿದಾಗ ಈ ಬಾರಿ ಎಷ್ಟರ ಮಟ್ಟಿಗೆ ಸುಧಾರಣೆ ಕಂಡಿದೆ ಎನ್ನುವುದು ತಿಳಿಯುತ್ತದೆ. 2007ರಲ್ಲಿ ಗುವಾಹಟಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ 21 ಚಿನ್ನ, 21 ಬೆಳ್ಳಿ, 29 ಕಂಚು ಸೇರಿ ಒಟ್ಟು 71 ಪದಕಗಳನ್ನು ಗೆದ್ದು 10ನೇ ಸ್ಥಾನ ಪಡೆದಿತ್ತು. ಬಳಿಕ ರಾಂಚಿಯಲ್ಲಿ ಆಯೋಜನೆಗೊಂಡಿದ್ದ 2011ರ ಕ್ರೀಡಾಕೂಟದಲ್ಲಿ 16 ಚಿನ್ನ, 10 ಬೆಳ್ಳಿ, 20 ಕಂಚು ಸೇರಿದಂತೆ 55 ಪದಕಗಳನ್ನು ಗೆದ್ದಿದ್ದ ಕರ್ನಾಟಕ ಪದಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿತ್ತು. 2015ರಲ್ಲಿ ತಿರುವನಂತಪುರಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ಕೇವಲ 8 ಚಿನ್ನ ದೊರೆತ್ತಿತ್ತು. ಜೊತೆಗೆ 21 ಬೆಳ್ಳಿ, 24 ಕಂಚು ಸೇರಿ ಒಟ್ಟು 53 ಪದಕ ಪಡೆದಿದ್ದ ರಾಜ್ಯದ ಅಥ್ಲೀಟ್‌ಗಳು ಪದಕ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದ್ದರು.
ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಪ್ರಾಬಲ್ಯ!
ರಾಜ್ಯ ಈ ಬಾರಿ ಅಗ್ರ 5ರಲ್ಲಿ ಸ್ಥಾನ ಪಡೆಯಲು ಈಜುಪಟುಗಳು ಪ್ರಮುಖ ಕಾರಣ. ರಾಜ್ಯ ಗೆದ್ದ 88 ಪದಕಗಳ ಪೈಕಿ ಒಟ್ಟು 39 ಪದಕಗಳು ಈಜು ಸ್ಪರ್ಧೆಯಲ್ಲೇ ದೊರೆತವು. 19 ಚಿನ್ನ, 8 ಬೆಳ್ಳಿ, 12 ಕಂಚಿನ ಪದಕಗಳನ್ನು ರಾಜ್ಯದ ಈಜುಪಟುಗಳು ಜಯಿಸಿದರು. ಹಾಶಿಕಾ ರಾಮಚಂದ್ರ, ಶ್ರೀಹರಿ ನಟರಾಜ್ ಶ್ರೇಷ್ಠ ಈಜುಪಟುಗಳಾಗಿ ಹೊರಹೊಮ್ಮಿದರು. ಈಜಿನಲ್ಲಿ ರಾಜ್ಯದ ಕ್ರೀಡಾಪಟುಗಳು 10ಕ್ಕೂ ಹೆಚ್ಚು ರಾಷ್ಟ್ರೀಯ ದಾಖಲೆಗಳನ್ನು ಬರೆದಿದ್ದು ವಿಶೇಷ.
ರಾಜ್ಯದ ಹಾಶಿಕಾ ಶ್ರೇಷ್ಠ ಮಹಿಳಾ ಕ್ರೀಡಾಪಟು!
6 ಚಿನ್ನ, 1 ಕಂಚಿನ ಪದಕ ಗೆದ್ದ ಕರ್ನಾಟಕದ 14 ವರ್ಷದ ಹಾಶಿಕಾ ರಾಮಚಂದ್ರ ಕ್ರೀಡಾಕೂಟದ ಶ್ರೇಷ್ಠ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಹಾಶಿಕಾಗೆ ಟ್ರೋಫಿ ನೀಡಿ ಗೌರವಿಸಿದರು.
National Games 2022: ಹಾಕಿಯಲ್ಲಿ ಚೊಚ್ಚಲ ಚಿನ್ನ ಗೆದ್ದ ಕರ್ನಾಟಕ
ವರ್ಣರಂಜಿತ ತೆರೆ
2 ವಾರಗಳಿಗೂ ಹೆಚ್ಚು ಕಾಲ ನಡೆದ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಬಿತ್ತು. ಉಪ ರಾಷ್ಟ್ರಪತಿ ಜಗ್‌ದೀಪ್ ಧನ್‌ಕರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗುಜರಾತ್ ಸಿಎಂ, ಕ್ರೀಡಾ ಸಚಿವ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಅನೇಕ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸರ್ವೀಸಸ್ ಕ್ರೀಡಾಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿ ಟ್ರೋಫಿ ಸ್ವೀಕರಿಸಿತು.
