National Games 2022: ಹಾಕಿಯಲ್ಲಿ ಚೊಚ್ಚಲ ಚಿನ್ನ ಗೆದ್ದ ಕರ್ನಾಟಕ
ನ್ಯಾಷನಲ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ ಕರ್ನಾಟಕ
21 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ್ದ ಕರ್ನಾಟಕ ಪುರುಷರ ಹಾಕಿ ತಂಡ
ಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ 7-6 ಗೋಲುಗಳ ರೋಚಕ ಗೆಲುವು
ರಾಜ್‌ಕೋಟ್(ಅ.12): ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಹಾಕಿ ತಂಡದ ಚಿನ್ನದ ಬರ ನೀಗಿದೆ. 21 ವರ್ಷಗಳ ಬಳಿಕ ರಾಜ್ಯ ಪುರುಷರ ಹಾಕಿ ತಂಡ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದೆ. ಮಂಗಳವಾರ ನಡೆದ ಫೈನಲ್‌ನಲ್ಲಿ ರಾಜ್ಯ ತಂಡ ಉತ್ತರ ಪ್ರದೇಶ ವಿರುದ್ಧ 7-6 ಗೋಲುಗಳ ರೋಚಕ ಗೆಲುವು ಸಂಪಾದಿಸಿತು. ಸಡನ್ ಡೆತ್‌ನಲ್ಲಿ ಗೋಲು ಬಾರಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ಪಂದ್ಯದುದ್ದಕ್ಕೂ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂತು. 25ನೇ ನಿಮಿಷದಲ್ಲಿ ತಾರಾ ಆಟಗಾರ ಎಸ್.ವಿ.ಸುನಿಲ್ ಕರ್ನಾಟಕ ಪರ ಮೊದಲ ಗೋಲು ಬಾರಿಸಿದರೆ, 4ನೇ ಕ್ವಾರ್ಟರ್‌ನಲ್ಲಿ 2 ಗೋಲು ದಾಖಲಿಸಿ ಉತ್ತರ ಪ್ರದೇಶ ತಿರುಗೇಟು ನೀಡಿತು. ಆದರೆ ಪಂದ್ಯ ಮುಗಿಯಲು 4 ನಿಮಿಷ ಬಾಕಿ ಇರುವಾಗ ಗೋಲು ಬಾರಿಸಿದ ಹರೀಶ್ ಮುತುಗಾರ್ ರಾಜ್ಯ ತಂಡ ಸಮಬಲ ಸಾಧಿಸಲು ನೆರವಾದರು.
ಬಳಿಕ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಸಿಕ್ಕ 5 ಪ್ರಯತ್ನಗಳಲ್ಲಿ ಎರಡೂ ತಂಡಗಳು ತಲಾ 4 ಗೋಲು ಬಾರಿಸಿದವು. ಆಗ ಫಲಿತಾಂಶಕ್ಕಾಗಿ ಸಡನ್ ಡೆತ್ ಎಂದರೆ ಸಾಮಾನ್ಯ ಪಂದ್ಯದ ರೀತಿಯ ಆಟದಲ್ಲಿ ಯಾರು ಮೊದಲು ಗೋಲು ಬಾರಿಸುತ್ತಾರೋ ಅವರು ವಿಜೇತರು ಎನ್ನುವ ನಿಯಮ ಅಳವಡಿಸಲಾಯಿತು. ಸಡನ್ ಡೆತ್‌ನಲ್ಲಿ ಮೊಹಮದ್ ರಾಹೀಲ್ ಗೋಲು ಬಾರಿಸಿ ರಾಜ್ಯವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಇದೇ ವೇಳೆ ಮಹಿಳಾ ವಿಭಾಗದಲ್ಲಿ ಪಂಜಾಬ್ ವಿರುದ್ಧ ಗೆದ್ದ ಹರಾರಯಣ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾದ ಕಬ್ಬಡಿ ಆಟಗಾರ್ತಿ ಎಲ್.ವರಲಕ್ಷ್ಮೀ
ಫುಟ್ಬಾಲ್: ಕೈ ತಪ್ಪಿದ ಕಂಚು
ಪುರುಷರ ಫುಟ್ಬಾಲ್‌ನಲ್ಲಿ ಕರ್ನಾಟಕ ಕಂಚಿನ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿತು. ಸರ್ವಿಸಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜ್ಯ ತಂಡ 0-4 ಅಂತರದಲ್ಲಿ ಸೋಲುಂಡು ನಿರಾಸೆ ಅನುಭವಿಸಿತು. ಕ್ರೀಡಾಕೂಟದಲ್ಲಿ ಕರ್ನಾಟಕ 27 ಚಿನ್ನ, 23 ಬೆಳ್ಳಿ ಹಾಗೂ 38 ಕಂಚು ಸೇರಿ 88 ಪದಕಗಳೊಂದಿಗೆ 4ನೇ ಸ್ಥಾನ ಕಾಯ್ದುಕೊಂಡಿದೆ. ಸರ್ವಿಸಸ್ 121 ಪದಕಗೊಂದಿಗೆ ಅಗ್ರಸ್ಥಾನದಲ್ಲಿದೆ.
ಕ್ರೀಡಾಕೂಟಕ್ಕೆ ಇಂದು ತೆರೆ
2 ವಾರಗಳ ಕಾಲ ನಡೆದ 36ನೇ ರಾಷ್ಟ್ರೀಯ ಗೇಮ್ಸ್‌ಗೆ ಬುಧವಾರ ತೆರೆ ಬೀಳಲಿದೆ. ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ. 37ನೇ ರಾಷ್ಟ್ರೀಯ ಗೇಮ್ಸ್ ಅನ್ನು 2023ರಲ್ಲಿ ಗೋವಾದಲ್ಲಿ ನಡೆಸಲು ನಿರ್ಧರಿಸಲಾಗಿದೆ.