ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾದ ಕಬ್ಬಡಿ ಆಟಗಾರ್ತಿ ಎಲ್.ವರಲಕ್ಷ್ಮೀ
ರಾಷ್ಟ್ರೀಯ ಕ್ರೀಡಾಪಟು , ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಎಲ್.ವರಲಕ್ಷ್ಮೀ ಅಕ್ಟೊಬರ್ 11ರ ಮಂಗಳವಾರ "ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ"ಯ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ “ಒಂದು ದಿನದ ಯುವ ಕ್ರೀಡಾ ಅಧಿಕಾರಿ”ಯಾಗಿ ಕಾರ್ಯನಿರ್ವಹಿಸಿದ್ದಾರೆ.
ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಬಳ್ಳಾಪುರ (ಅ.11): ಕಡು ಬಡತನವಿದ್ದರೂ ಲೆಕ್ಕಿಸದೆ ಕ್ರೀಡೆಯ ಜೊತೆಗೆ ಓದಿಗೂ ಪ್ರಾಮುಖ್ಯತೆಯನ್ನು ನೀಡಿ ಹೆಣ್ಣು ಮಕ್ಕಳು ಯಾರಿಗೂ ಕಡಿಮೆಯಿಲ್ಲವೆಂದು ಕಬ್ಬಡಿ ಕ್ರೀಡೆಯಲ್ಲಿ ರಾಷ್ಟ್ರೀಯ ಕ್ರೀಡಾಪಟುವಾಗಿ ಹೊರಹೊಮ್ಮಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ ಎಲ್.ವರಲಕ್ಷ್ಮೀ. ಅವರು 2022 ನೇ ಸಾಲಿನ ಕಬ್ಬಡಿ ಕ್ರೀಡೆಯಲ್ಲಿ ದಕ್ಷಿಣ ವಲಯದಿಂದ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ರಾಷ್ಟ್ರೀಯ ಕ್ರೀಡಾಪಟು (ಪೆಂಕಾಕ್ ಸಿಲತ್).ಇವರು ಪ್ರಸ್ತುತ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಅಕ್ಟೊಬರ್ 11ರ ಮಂಗಳವಾರ "ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ"ಯ ಅಂಗವಾಗಿ ಜಿಲ್ಲೆಯಲ್ಲಿ “ಒಂದು ದಿನದ ಯುವ ಕ್ರೀಡಾ ಅಧಿಕಾರಿ”ಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಮಂಗಳವಾರ ಬೆಳಿಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿಯ ಕಾರ್ಯ ಚಟುವಟಿಕೆಗಳ ಜೊತೆ ಒಂದು ದಿನದ ಕ್ರೀಡಾಧಿಕಾರಿಯಾಗಿ ಸೇವೆ ಸಲ್ಲಿಸಲು ಎಲ್.ವರಲಕ್ಷ್ಮೀ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯ್ ಕುಮಾರ್ ಅವರು ಸ್ವಾಗತಿಸಿದರು.
ನಂತರೆ ಜಿಲ್ಲೆಯ ಸರ್.ಎಂ.ವಿಶ್ವೇರಯ್ಯ ಜಿಲ್ಲಾ ಕ್ರೀಡಾಂಗಣ, ಒಳ ಕ್ರೀಡಾಂಗಣ, ಚಿಂತಾಮಣಿ ತಾಲ್ಲೂಕಿನ ಕ್ರೀಡಾಂಗಣ ಸೇರಿದಂತೆ ಕಚೇರಿಯ ವಿವಿಧ ಕೆಲಸ ಕಾರ್ಯಗಳ ಕುರಿತು ಪರಿಚಯ ಮಾಡಿಕೊಟ್ಟರು. ಒಂದು ದಿನ ಜೊತೆಯಲ್ಲಿದ್ದು ಅವರ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಸರ್ಕಾರದ ಆಡಳಿತವನ್ನು ಹತ್ತಿರದಿಂದ ವಿದ್ಯಾರ್ಥಿನಿ ಗಮನಿಸಿದರು.
“ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ”ಯ ಪ್ರಯುಕ್ತ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ನಮ್ಮ ದೇಶದ 18 ರಿಂದ 23ರ ವಯಸ್ಸಿನ ಯುವತಿಯರಿಗೆ ಯುಕೆಯ ಉನ್ನತ ರಾಜತಾಂತ್ರಿಕ ಅಧಿಕಾರಿಯ ಒಂದು ದಿನದ ಆಡಳಿತ ಚಟುವಟಿಕೆಗಳ ಅನುಭವ ಪಡೆಯಲು ಅವಕಾಶವನ್ನು ಕಲ್ಪಿಸಲು “ಹೈಕಮಿಷನರ್ ಫಾರ್ ಎ ಡೇ” ಸ್ಪರ್ಧೆ ಏರ್ಪಡಿಸಲಾಗಿರುತ್ತದೆ.
ಅದೇ ರೀತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ/ಉಪ ನಿರ್ದೇಶಕರ ಕಾರ್ಯ ವೈಖರಿಯನ್ನು ಪರಿಚಯಿಸಲು 18 ರಿಂದ 23 ವರ್ಷ ವಯಸ್ಸಿನ ಯುವತಿಯರು ಆಯಾ ಜಿಲ್ಲೆಗಳ ಸಹಾಯಕ ನಿರ್ದೇಶಕರ ಜೊತೆಯಲ್ಲಿ ಒಂದು ದಿನ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಂದು “ಒಂದು ದಿನ ಯುವ ಕ್ರೀಡಾ ಅಧಿಕಾರಿಯಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಎಲ್.ವರಲಕ್ಷ್ಮೀ ಅವರನ್ನು ಆಯ್ಕೆ ಮಾಡಲಾಗಿದೆ
ಕ್ರೀಡೆಯ ಶಿಕ್ಷಕರಾಗುವ ಗುರಿ: ಕ್ರೀಡಾ ಅಧಿಕಾರಿಯ ಜೊತೆ ಒಂದು ದಿನದ ಕ್ರೀಡಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವುದು ತುಂಬಾ ಸಂತೋಷವಾಗಿದೆ. ಕ್ರೀಡಾಪಟುಗಳು ಅಭ್ಯಾಸ ಮಾಡಲು ಜಿಲ್ಲೆಯಲ್ಲಿ ಹೊರ ಹಾಗೂ ಒಳ ಕ್ರೀಡಾಂಗಣವಿದೆ. ಮಹಿಳಾ ಕ್ರೀಡಾಪಟುಗಳಿಗೆ ಇದು ತುಂಬಾ ಅನುಕೂಲವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡೆಯಲ್ಲಿಯೇ ಉತ್ತಮ ಕ್ರೀಡಾಪಟುವಾಗಿ, ಕ್ರೀಡಾ ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಾರ್ಯಗಳು ಸಕಾರಗೊಳ್ಳಲು ಶ್ರಮಿಸುತ್ತಿದ್ದೇನೆ. ಇತರೆ ಮಹಿಳಾ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಬೇಕು ಎಂದು ಎಲ್.ವರಲಕ್ಷ್ಮೀ ಹರ್ಷವ್ಯಕ್ತಪಡಿಸಿದರು.
ರಾಷ್ಟ್ರೀಯ ಕ್ರೀಡಾಪಟು ಎಲ್.ವರಲಕ್ಷ್ಮೀ ಅವರ ಪರಿಚಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಎಂಬ ಗ್ರಾಮದ ತಂದೆ ಲಕ್ಷ್ಮಣ್, ತಾಯಿ ಕರಗಮ್ಮ ಅವರ ಮಗಳಾಗಿ ಜನನ. ಪ್ರಸ್ತುತ ಚಿಕ್ಕಬಳ್ಳಾಪುರಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡು ಕ್ರೀಡೆಯಲ್ಲಿಯೇ ಉನ್ನತ ಸ್ಥಾನಕ್ಕೇರಲು ಕನಸು ಕಂಡಿದ್ದಾರೆ. ಶಾಲಾ ಮಟ್ಟದ ಕ್ರೀಡೆಯಲ್ಲಿ (ಕಬ್ಬಡಿ) ರಾಜ್ಯ ಮಟ್ಟವನ್ನು ಪ್ರತಿನಿಧಿಸಿರುತ್ತಾರೆ. ಸತತವಾಗಿ 05 ವರ್ಷಗಳಿಂದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಹಾಗೂ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಭಾಗವಹಿಸಿದ್ದರು.
ಮಗಳ ಹೆಸರಲ್ಲಿ ನಿರ್ಮಾಣವಾಗ್ತಿರೋ ರಸ್ತೆಗೆ, ಆಕೆಯ ತಾಯಿಯೇ ದಿನಗೂಲಿ
ಸತತವಾಗಿ ಮೂರು ವರ್ಷಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅಂತರಕಾಲೇಜು ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ 2018-19 ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಜೊತೆಗೆ ವಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. 2018-19 ನೇ ಸಾಲಿನಲ್ಲಿ ಖೋ-ಖೋ ಕ್ರೀಡೆಯಲ್ಲಿ ಭಾಗಿ. 2022ನೇ ಸಾಲಿನ ಕಬ್ಬಡಿ ಕ್ರೀಡೆಯಲ್ಲಿ ದಕ್ಷಿಣ ವಲಯದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ರಾಷ್ಟ್ರೀಯ ಕ್ರೀಡಾಪಟು (ಪೆಂಕಾಕ್ ಸಿಲತ್) ಆಗಿದ್ದಾರೆ.