ಬೆಂಗಳೂರು(ಅ.01): ಜಾರ್ಖಂಡ್‌ನ ರಾಂಚಿಯಲ್ಲಿ ಮುಂಬರುವ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಅಥ್ಲೀಟ್‌ಗಳಿಗೆ ಪ್ರವೇಶ ನೀಡದೆ ಇರುವ ನಿರ್ಧಾರಕ್ಕೆ ಭಾರತ ಅಥ್ಲೆಟಿಕ್ಸ್‌ ಸಂಸ್ಥೆ (ಎಎಫ್‌ಐ) ಬಂದಿದೆ ಎನ್ನಲಾಗಿದೆ. ಸದ್ಯ ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ್ನು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ (ಕೆಎಎ) ಆಯೋಜಿಸಬೇಕಿತ್ತು. 

ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್‌ ಕೂಟ: ಅನ್ನು ರಾಣಿ ಫೈನಲ್‌ಗೆ

ಆದರೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗಿರುವ ನೆಪವೊಡ್ಡಿ ರಾಷ್ಟ್ರೀಯ ಕೂಟ ನಡೆಸಲು ಅಸಾಧ್ಯ ಎಂದು ಕೆಎಎ ಹೇಳಿತ್ತು. ಇದರಿಂದಾಗಿ ಎಎಫ್‌ಐ ಅಥ್ಲೆಟಿಕ್ಸ್‌ ಕೂಟವನ್ನು ರಾಂಚಿಗೆ ಸ್ಥಳಾಂತರಿಸಿತು.

ಇದನ್ನೂ ಓದಿ: ಬೆಂಗಳೂರಿನಿಂದ ರಾಷ್ಟ್ರೀಯ ಅಥ್ಲೆಟಿಕ್ಸ್ ರಾಂಚಿಗೆ ಎತ್ತಂಗಡಿ..!

ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ಬೇಸರ ವ್ಯಕ್ತಪಡಿಸಿರುವ ಎಎಫ್‌ಐ, ರಾಷ್ಟ್ರೀಯ ಅಥ್ಲೆಟಿಕ್ಸ್‌ ಕೂಟಕ್ಕೆ ರಾಜ್ಯದ ಅಥ್ಲೀಟ್‌ಗಳಿಗೆ ಪ್ರವೇಶ ನಿರಾಕರಿಸಿದೆ ಎನ್ನಲಾಗುತ್ತಿದೆ. ಇದರಿಂದಾಗಿ ನವೆಂಬರ್‌ನಲ್ಲಿ ನಡೆಯಲಿರುವ ಕಿರಿಯರ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಅಥ್ಲೀಟ್‌ಗಳು ಭಾಗವಹಿಸುವುದು ಅನುಮಾನ ಮೂಡಿಸಿದೆ. 

ಇದನ್ನೂ ಓದಿ: ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಗಿಟ್ಟಿಸಿದ ಜಿನ್ಸನ್ ಜಾನ್ಸನ್

ಎಎಫ್‌ಐನ ಈ ಕಠಿಣ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಕೆಎಎ ಕಾರ‍್ಯದರ್ಶಿ ರಾಜವೇಲು, ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು. ರಾಜ್ಯದ ಅಥ್ಲೀಟ್‌ಗಳ ಭವಿಷ್ಯಕ್ಕೆ ಯಾವುದೇ ತೊಂದರೆಯಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದರು.