ಮುಂಬೈ[ಫೆ.10]: ಟೀಂ ಇಂಡಿಯಾ ಟಿ20 ಸರಣಿಯನ್ನು ನ್ಯೂಜಿಲೆಂಡ್ ಎದುರು ಕೂದಲೆಳೆ ಅಂತರದಲ್ಲಿ ಕೈಚೆಲ್ಲಿದೆ. ಈ ಮೂಲಕ ಕಿವೀಸ್ ನೆಲದಲ್ಲಿ ಭಾರತದ ಟಿ20 ಸರಣಿ ಗೆಲುವಿನ ಕನಸು ಮತ್ತೊಮ್ಮೆ ನುಚ್ಚು-ನೂರಾಗಿದೆ.

ಸಲ್ಯೂಟ್: ಪಂದ್ಯ ಸೋತರೂ ಭಾರತೀಯರ ಹೃದಯ ಗೆದ್ದ ಧೋನಿ..!

ಹ್ಯಾಮಿಲ್ಟನ್’ನ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಬರೋಬ್ಬರಿ 212 ರನ್ ಕಲೆಹಾಕಿತ್ತು. ಕಠಿಣ ಗೆಲುವಿನ ಗುರಿ ಪಡೆದ ಭಾರತ ಆರಂಭಿಕ ಆಘಾತದ ಹೊರತಾಗಿಯೂ ವಿಜಯ್ ಶಂಕರ್ ಹಾಗೂ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಮತ್ತು ಕೃನಾಲ್ ಪಾಂಡ್ಯ ಹೋರಾಟದಿಂದ ಕೇವಲ 4 ರನ್’ಗಳ ಅಂತರದ ರೋಚಕ ಸೋಲು ಕಂಡಿತು.

ಕಿವೀಸ್ ನೆಲದಲ್ಲಿ ಟೀಂ ಇಂಡಿಯಾದ ಟಿ20 ಸರಣಿ ಗೆಲುವು ಮರೀಚಿಕೆ

ಏಳನೇ ವಿಕೆಟ್’ಗೆ ಕಾರ್ತಿಕ್-ಕೃನಾಲ್ ಜೋಡಿ 63 ರನ್’ಗಳ ಜತೆಯಾಟವಾಡಿತಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ದಿನೇಶ್ ಕಾರ್ತಿಕ್ ಕೇವಲ 16 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 33 ರನ್ ಬಾರಿಸಿದರೆ, ಕೃನಾಲ್ 13 ಎಸೆತಗಳಲ್ಲಿ ತಲಾ 2 ಸಿಕ್ಸರ್ ಹಾಗೂ ಬೌಂಡರಿಗಳ ನೆರವಿನಿಂದ 26 ರನ್ ಚಚ್ಚಿದರು. ಟೀಂ ಇಂಡಿಯಾ ಕೊನೆಯ 4 ಎಸೆತಗಳಲ್ಲಿ 14 ರನ್’ಗಳ ಅವಶ್ಯಕತೆಯಿತ್ತು. ಈ ವೇಳೆ ದಿನೇಶ್ ಕಾರ್ತಿಕ್ ಒಂಟಿ ರನ್ ತೆಗೆದುಕೊಳ್ಳುವ ಅವಕಾಶವಿದ್ದರೂ ಅದನ್ನು ಬಿಟ್ಟು ತಾವೇ ಸ್ಟ್ರೈಕ್ ಉಳಿಸಿಕೊಂಡರು. ಕೃನಾಲ್’ಗೆ ಸ್ಟ್ರೈಕ್ ನೀಡಲು ನಿರಾಕರಿಸಿದ್ದು ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಿತು. ಯಾಕೆಂದರೆ ಕೃನಾಲ್ ಕೂಡಾ 2 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ಉತ್ತಮ ಲಯದಲ್ಲಿದ್ದರು. ಕೊನೆಯ ಓವರ್’ನಲ್ಲಿ ಕೃನಾಲ್’ಗೆ ಕೇವಲ ಒಂದು ಎಸೆತವನ್ನಷ್ಟೇ ಎದುರಿಸಲು ಸಾಧ್ಯವಾಯಿತು. ಕೊನೆಯ ಎಸೆತದಲ್ಲಿ ಕಾರ್ತಿಕ್ ಸಿಕ್ಸರ್ ಸಿಡಿಸಿದರಾದರೂ ಪಂದ್ಯವನ್ನು ಗೆಲುವಿನ ದಡ ಸೇರಿಸಲು ವಿಫಲವಾದರು.

ಟೀಂ ಇಂಡಿಯಾ ರೋಚಕ ಸೋಲಿನ ಬಗ್ಗೆ ಟ್ವಿಟರಿಗರು ಹೇಳಿದ್ದಿಷ್ಟು...

ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಟ್ವೀಟ್ ಮಾಡಿದ ಮುಂಬೈ ಇಂಡಿಯನ್ಸ್ ತಮಿಳುನಾಡು ಮೂಲದ ದಿನೇಶ್ ಕಾರ್ತಿಕ್’ಗೆ ಟಾಂಗ್ ನೀಡಿದೆ. 13 ಎಸೆತಗಳಲ್ಲಿ 26 ರನ್, ಕೊನೆಯ ಓವರ್’ನಲ್ಲಿ ಆಡಲು ಸಿಕ್ಕಿದ್ದು ಕೇವಲ ಒಂದೇ ಎಸೆತ. ಹಾರ್ಡ್ ಲಕ್ ಎಂದು ಟ್ವೀಟ್ ಮಾಡಿದೆ. 

ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್ರೌಂಡರ್ ಆಗಿರುವ ಕೃನಾಲ್ ಪಾಂಡ್ಯ, ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಕಿವೀಸ್ ನೆಲದಲ್ಲಿ ಟೀಂ ಇಂಡಿಯಾ ಚೊಚ್ಚಲ ಟಿ20 ಗೆಲುವು ದಾಖಲಿಸಲು ಪ್ರಮುಖ ಪಾತ್ರವಹಿಸಿದ್ದರು.