ನ್ಯೂಜಿಲೆಂಡ್ ನೀಡಿದ್ದ 213 ರನ್’ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಮುಗ್ಗರಿಸಿತು. ಧವನ್ ಕೇವಲ 5 ರನ್ ಬಾರಿಸಿ ಸ್ಯಾಂಟ್ನರ್’ಗೆ ವಿಕೆಟ್ ಒಪ್ಪಿಸಿದರು.

ಹ್ಯಾಮಿಲ್ಟನ್[ಫೆ.10]: ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಸಂಘಟಿತ ಪ್ರದರ್ಶನ ತೋರಿದ ನ್ಯೂಜಿಲೆಂಡ್ ತಂಡವು ಭಾರತವನ್ನು 4 ರನ್’ಗಳಿಂದ ರೋಚಕವಾಗಿ ಮಣಿಸಿ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿದೆ. ಇದರೊಂದಿಗೆ ಕಿವೀಸ್ ನೆಲದಲ್ಲಿ ಭಾರತದ ಟಿ20 ಸರಣಿ ಗೆಲುವಿನ ಕನಸು ಮರೀಚಿಕೆಯಾಗಿಯೇ ಉಳಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ್ಯೂಜಿಲೆಂಡ್ ನೀಡಿದ್ದ 213 ರನ್’ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಮುಗ್ಗರಿಸಿತು. ಧವನ್ ಕೇವಲ 5 ರನ್ ಬಾರಿಸಿ ಸ್ಯಾಂಟ್ನರ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ವಿಜಯ್ ಶಂಕರ್-ರೋಹಿತ್ ಶರ್ಮಾ ಎರಡನೇ ವಿಕೆಟ್’ಗೆ 75 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಸಮೀಪ ಕೊಂಡ್ಯೊಯ್ದರು. ಕೇವಲ 28 ಎಸೆತಗಳಲ್ಲಿ ವಿಜಯ್ ಶಂಕರ್ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 43 ರನ್ ಚಚ್ಚಿದರು. ನಾಯಕ ರೋಹಿತ್ 38 ರನ್ ಬಾರಿಸಿದರೆ, ರಿಷಭ್ ಪಂತ್ 28 ರನ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ 21 ರನ್ ಬಾರಿಸಿದರೆ ಧೋನಿ ಆಟ ಕೇವಲ 2 ರನ್’ಗಳಿಗೆ ಸೀಮಿತವಾಯಿತು.

ಗೆಲುವಿನ ಆಸೆ ಮೂಡಿಸಿದ ಕೃನಾಲ್-ಕಾರ್ತಿಕ್: ಒಂದು ಹಂತದಲ್ಲಿ 15.2 ಓವರ್’ಗಳಿಗೆ 6 ವಿಕೆಟ್ ಕಳೆದುಕೊಂಡು 145 ರನ್ ಬಾರಿಸಿ ಸೋಲಿನತ್ತ ಮುಖ ಮಾಡಿದ್ದ ಭಾರತಕ್ಕೆ ದಿನೇಶ್ ಕಾರ್ತಿಕ್-ಕೃನಾಲ್ ಪಾಂಡ್ಯ ಆಸರೆಯಾದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಈ ಜೋಡಿ ಏಳನೇ ವಿಕೆಟ್’ಗೆ ಮುರಿಯದ 63 ರನ್’ಗಳ ಜತೆಯಾಟವಾಡಿತಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲವಾಯಿತು.
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿವೀಸ್ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಕಾಲಿನ್ ಮನ್ರೋ[72] ಆಕರ್ಷಕ ಅರ್ಧಶತಕ, ಟಿಮ್ ಸೈಫರ್ಟ್, ರಾಸ್ ಟೇಲರ್ ಹಾಗೂ ಕಾಲಿನ್ ಡಿ ಗ್ರಾಂಡ್’ಹೋಂ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 212 ರನ್ ಸಿಡಿಸಿತ್ತು.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 212/4
ಕಾಲಿನ್ ಮನ್ರೊ: 72
ಕುಲ್ದೀಪ್: 26/2

ಭಾರತ: 208/6
ವಿಜಯ್ ಶಂಕರ್: 43
ಡೇರಲ್ ಮಿಚೆಲ್: 27/2

[* ನ್ಯೂಜಿಲೆಂಡ್ ತಂಡಕ್ಕೆ 4 ರನ್’ಗಳ ಜಯ]