ನವದೆಹಲಿ[ಜು.24]: ನಿವೃತ್ತಿ ನಿರ್ಧಾರದಿಂದ ಸ್ವತಃ ಎಂ.ಎಸ್‌.ಧೋನಿಯೇ ಹಿಂದೆ ಸರಿದಿದ್ದು, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕ್ರಿಕೆಟ್‌ ಅಂಗಳದಿಂದ ಸದ್ಯಕ್ಕೆ ದೂರ ಸರಿಯುವುದಿಲ್ಲ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಧೋನಿಯ ಈ ನಿರ್ಧಾರಕ್ಕೆ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿಯೇ ಕಾರಣ ಎನ್ನಲಾಗಿದೆ. 2019ರ ಏಕದಿನ ವಿಶ್ವಕಪ್‌ ಬಳಿಕ ನಿವೃತ್ತಿ ಘೋಷಿಸಲು ಧೋನಿ ನಿರ್ಧರಿಸಿದ್ದರು. ತಂಡದ ಸಹ ಆಟಗಾರರೊಂದಿಗೂ ಈ ಕುರಿತು ಸುಳಿವು ನೀಡಿದ್ದರು. ಆದರೆ, ಧೋನಿ ತಂಡದಿಂದ ಹೊರ ನಡೆಯುವುದು ವಿರಾಟ್‌ಗೆ ಇಷ್ಟವಿರಲ್ಲಿಲ್ಲ ಎಂದು ಡಿಎನ್‌ಎ ಆಂಗ್ಲ ದೈನಿಕ ವರದಿ ಮಾಡಿದೆ.

ಧೋನಿ ತರಬೇತಿಗೆ ಭಾರತೀಯ ಸೇನಾ ಮುಖ್ಯಸ್ಥರಿಂದ ಗ್ರೀನ್ ಸಿಗ್ನಲ್!

‘ವಿಶ್ವಕಪ್‌ ಬಳಿಕ ಏಕಾಏಕಿ ನಿವೃತ್ತಿ ಘೋಷಿಸದಂತೆ ವಿರಾಟ್‌ ಕೊಹ್ಲಿ ಮನವೊಲಿಸಿದ ಬಳಿಕ ಧೋನಿ ತಮ್ಮ ನಿರ್ಧಾರ ಬದಲಿಸಿದರು’ ಎಂದು ಕೊಹ್ಲಿಯ ಆಪ್ತ ಮೂಲಗಳು ತಿಳಿಸಿವೆ ಎಂದು ಹೇಳಿದೆ.

‘ಧೋನಿಗೆ ಯಾವುದೇ ಫಿಟ್ನೆಸ್‌ ಸಮಸ್ಯೆಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ವಿರಾಟ್‌, ಒಂದೊಮ್ಮೆ ತಂಡಕ್ಕೆ ಅವಶ್ಯವಿದ್ದರೆ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ವರೆಗೂ ಧೋನಿ ತಂಡದಲ್ಲಿ ಮುಂದುವರೆಯಬಹುದು. ರಿಷಭ್‌ ಪಂತ್‌ರನ್ನು ಬೆಳೆಸುತ್ತಿರುವ ಹಿನ್ನೆಲೆಯಲ್ಲಿ, ಬೇರೆ ಕೀಪರ್‌ನ ಅಗತ್ಯವಿಲ್ಲ ಎಂಬುದು ಆಯ್ಕೆ ಸಮಿತಿ ಲೆಕ್ಕಾಚಾರವಾಗಿದೆ. ಒಂದೊಮ್ಮೆ ರಿಷಭ್‌ ಗಾಯಗೊಂಡರೆ, ಆ ವೇಳೆ ಧೋನಿ ಸುಲಭವಾಗಿ ತಂಡವನ್ನು ಕೂಡಿಕೊಳ್ಳಬಹುದಾಗಿದೆ’ ಎಂದು ಮೂಲಗಳು ತಿಳಿಸಿವೆ.

ಧೋನಿ ಭವಿಷ್ಯದ ಬಗ್ಗೆ ತುಟಿಬಿಚ್ಚಿದ ಆಯ್ಕೆ ಸಮಿತಿ ಮುಖ್ಯಸ್ಥ!

ವಿಕೆಟ್‌ ಕೀಪರ್‌ ಆಯ್ಕೆ ವಿಚಾರ ಬಂದಾಗ ಭವಿಷ್ಯದ ದೃಷ್ಟಿಯಿಂದ ಮೂರೂ ಮಾದರಿಗಳಿಗೂ ರಿಷಭ್‌ ಪಂತ್‌ ನಮ್ಮ ಮೊದಲ ಆಯ್ಕೆ ಎಂದು ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ಈಗಾಗಲೇ ಹೇಳಿದ್ದಾರೆ. ವಿಕೆಟ್‌ ಕೀಪರ್‌ಗಳಾದ ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌ ಹಾಗೂ ವೃದ್ಧಿಮಾನ್‌ ಸಾಹ ಅವರಂತಹ ಪ್ರತಿಭಾನ್ವಿತರಿದ್ದರೂ, ಅಂತಾರಾಷ್ಟ್ರೀಯ ಪಂದ್ಯಾವಳಿ ವೇಳೆ ಇವರಾರ‍ಯರು ಅನುಭವಿ ಧೋನಿಗೆ ಪರ್ಯಾಯವಲ್ಲ. ಧೋನಿಯ ಮಾರ್ಗದರ್ಶನವನ್ನು ಸದಾ ಕಾಲ ಸ್ವಾಗತಿಸುವ ವಿರಾಟ್‌ ಕೊಹ್ಲಿ, ಇದೇ ಕಾರಣಕ್ಕಾಗಿ ಇನ್ನು ಹೆಚ್ಚಿನ ಕಾಲ ಧೋನಿ ತಂಡದಲ್ಲಿ ಇರಲು ಬಯಸುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ಧೋನಿ ‘ಎ’ ಗ್ರೇಡ್‌ ಒಪ್ಪಂದಕ್ಕೆ ಕುತ್ತು?

ಪ್ರಸ್ತುತ ತಂಡದಿಂದ 2 ತಿಂಗಳ ಕಾಲ ಧೋನಿ ಹಿಂದೆ ಉಳಿದಿದ್ದು, ಇದೇ ವೇಳೆ ಬಿಸಿಸಿಐ ಜೊತೆ ಧೋನಿ ಮಾಡಿಕೊಂಡಿರುವ ‘ಎ’ ಗ್ರೇಡ್‌ ಒಪ್ಪಂದಕ್ಕೆ ಕುತ್ತು ಉಂಟಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. 2020ರ ಮಾರ್ಚ್  ಧೋನಿಯ ಒಪ್ಪಂದ ಮುಕ್ತಾಯಗೊಳ್ಳಲಿದ್ದು, ಹೆಚ್ಚಿನ ಪಂದ್ಯಗಳನ್ನು ಆಡದ ಕಾರಣ ಅವರ ‘ಎ’ ಗ್ರೇಡ್‌ ಒಪ್ಪಂದ ರದ್ದಾಗುವ ಸಾಧ್ಯತೆಗಳಿವೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.