ಮುಂಬೈ(ಏ.24): ವಿಶ್ವ  ಕ್ರಿಕೆಟನ್ನು 24 ವರ್ಷಗಳ ಕಾಲ ಆಳಿದ, ಶತಕಗಳ ಸರದಾರ, ದಾಖಲೆಗಳ ವೀರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಇಂದು(ಏ.24) ಹುಟ್ಟು ಹಬ್ಬದ ಸಂಭ್ರಮ. 46ನೇ ವಸಂತಕ್ಕೆ ಕಾಲಿಟ್ಟಿರುವ ಸಚಿನ್ ತೆಂಡೂಲ್ಕರ್ ಕುಟುಂಬ ಹಾಗೂ ಮುಂಬೈ ತಂಡದ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

 

 

1989ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ 2013ರ ವರೆಗೆ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿದ್ದರು. 200 ಟೆಸ್ಟ್ ಪಂದ್ಯ ಆಡಿದ ಏಕೈಕ  ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ಸಚಿನ್, 15921 ರನ್ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ  ದಾಖಲೆ ಬರೆದಿದ್ದಾರೆ. ಟೆಸ್ಟ್‌ನಲ್ಲಿ 51 ಶತಕ, 6 ದ್ವಿಶತಕ ಹಾಗೂ 68 ಅರ್ಧಶತಕ ಸಿಡಿಸಿದ್ದಾರೆ.

ಇದನ್ನೂ ಓದಿ: 2011ರ ವಿಶ್ವಕಪ್ ಸಂಭ್ರಮ: ದಿಗ್ಗಜ ಕ್ರಿಕೆಟಿಗರು ನೆನಪಿಸಿಕೊಂಡಿದ್ದು ಹೀಗೆ!

ಏಕದಿನದಲ್ಲಿ463 ಪಂದ್ಯ ಆಡಿರುವ ಸಚಿನ್ 18426 ರನ್ ಭಾರಿಸಿದ್ದಾರೆ. 49 ಶತಕ, 1 ದ್ವಿಶತಕ ಹಾಗೂ 96 ಅರ್ಧಶತಕ ಸಿಡಿಸಿದ್ದಾರೆ. 2011ರ ವಿಶ್ವಕಪ್ ಟೂರ್ನಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸಚಿನ್ ತೆಂಡುಲ್ಕರ್, 2012ರಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದರು. 

ಇದನ್ನೂ ಓದಿ: 2019ರ ವಿಶ್ವಕಪ್ ಫೈನಲ್ ಪ್ರವೇಶಿಸೋ ತಂಡ ಯಾವುದು?- ಭವಿಷ್ಯ ನುಡಿದ ದ್ರಾವಿಡ್!

ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ರತಿನಿಧಿಸಿದ್ದ ಸಚಿನ್ ಇದೀಗ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 46ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಸಚಿನ್‌ಗೆ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಗಣ್ಯರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.