ಬೆಂಗಳೂರು(ಆ.03):  ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಸಹಯೋಗದಲ್ಲಿ ‘ಓಷನ್‌ ವೈಬ್ರಾನ್ಸ್‌’ ಎಂಬ ಖಾಸಗಿ ಸಂಸ್ಥೆ ಭಾನುವಾರದಿಂದ ಮಹಿಳಾ ಟಿ20 ಕ್ರಿಕೆಟ್‌ ಲೀಗ್‌ ಅನ್ನು ಆಯೋಜಿಸುತ್ತಿದೆ. ಲೀಗ್‌ನಲ್ಲಿ ಭಾರತ ತಂಡದ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್‌, ಕರ್ನಾಟಕ ತಂಡದ ನಾಯಕಿ ರಕ್ಷಿತಾ.ಕೆ, ವೇಗಿ ಆಕಾಂಕ್ಷ ಕೊಹ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡಗಳ ಜೆರ್ಸಿ ಹಾಗೂ ಟ್ರೋಫಿ ಅನಾವರಣಗೊಳಿಸಲಾಯಿತು.

ಇದನ್ನೂ ಓದಿ: ಇಂದು ಭಾರತ-ವಿಂಡೀಸ್‌ ಮೊದಲ ಟಿ20

ಒಟ್ಟು 4 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಪ್ರತಿ ದಿನ 2 ಪಂದ್ಯಗಳು ನಡೆಯಲಿದ್ದು, ಆ.8ರಂದು ಫೈನಲ್‌ ನಡೆಯಲಿದೆ. ತಂಡಗಳಿಗೆ ಕಾವೇರಿ, ನರ್ಮದಾ, ಸಿಂಧು ಹಾಗೂ ಯಮುನಾ ಎಂದು ಹೆಸರಿಡಲಾಗಿದೆ. ನಗರದ ಥಣಿಸಂದ್ರ ಬಳಿಯಿರುವ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: ಸರಣಿ ಗೆದ್ದು ಸಂಭ್ರಮಾಚರಣೆ; ಬೈಕ್‌ನಿಂದ ಬಿದ್ದ ಲಂಕಾ ಕ್ರಿಕೆಟಿಗ!

‘ರಾಜ್ಯದ ವಿವಿಧ ಕ್ಲಬ್‌ಗಳ ಯುವ ಆಟಗಾರ್ತಿಯರಿಗೆ ಈ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಸಿಗಲಿದ್ದು, ಈ ರೀತಿಯ ಟೂರ್ನಿಗಳು ಮಹಿಳಾ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿಸಲಿದೆ’ ಎಂದು ಕೆಎಸ್‌ಸಿಎ ಸಹಾಯಕ ಕಾರ‍್ಯದರ್ಶಿ ಸಂತೋಷ್‌ ಮೆನನ್‌ ಅಭಿಪ್ರಾಯಪಟ್ಟರು.