ಲಾಡರ್‌ಹಿಲ್‌[ಆ.03]: ಕಳೆದ ಎರಡು ಮೂರು ವರ್ಷಗಳಿಂದ ಭಾರತ ಆಡುವ ಪ್ರತಿ ಪಂದ್ಯವೂ 2019ರ ಏಕದಿನ ವಿಶ್ವಕಪ್‌ನ ಸಿದ್ಧತೆಯ ಭಾಗವಾಗಿತ್ತು. ಇದೀಗ ವಿಶ್ವಕಪ್‌ ಮುಗಿದಿದೆ. ಸೆಮಿಫೈನಲ್‌ನಲ್ಲಿ ಮುಗ್ಗರಿಸಿ ಭಾರತ ನಿರಾಸೆ ಅನುಭವಿಸಿದ್ದೂ ಆಯ್ತು. ಕಹಿ ನೆನಪನ್ನು ಮರೆತು ಹೊಸ ಅಧ್ಯಾಯಕ್ಕೆ ಭಾರತ ತಂಡ ಅಣಿಯಾಗುತ್ತಿದೆ. ವಿಶ್ವಕಪ್‌ ಬಳಿಕ ತಂಡ ಮೊದಲ ಪ್ರವಾಸ ಕೈಗೊಂಡಿದ್ದು, ವಿಂಡೀಸ್‌ ವಿರುದ್ಧ ಎಲ್ಲಾ ಮೂರೂ ಮಾದರಿಯ ಸರಣಿಗಳನ್ನು ಆಡಲಿದೆ. ಶನಿವಾರ ಭಾರತದ ವಿಂಡೀಸ್‌ ಪ್ರವಾಸಕ್ಕೆ ಚಾಲನೆ ಸಿಗಲಿದ್ದು, 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ.

ಈ ಸರಣಿಯೊಂದಿಗೆ ಟೀಂ ಇಂಡಿಯಾ 2020ರ ಐಸಿಸಿ ಟಿ20 ವಿಶ್ವಕಪ್‌ಗೆ ಅಧಿಕೃತವಾಗಿ ಸಿದ್ಧತೆ ಆರಂಭಿಸಲಿದೆ. ಬಿಸಿಸಿಐ ಆಯ್ಕೆಗಾರರು ಕೆಲ ಯುವ ಆಟಗಾರರನ್ನು ಗುರುತಿಸಿದ್ದು, ಆ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ನಾಯಕ ವಿರಾಟ್‌ ಕೊಹ್ಲಿ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಈ ಸರಣಿ ಮೊದಲ ಹೆಜ್ಜೆಯಾಗಲಿದೆ.

ಟಿ20 ಹಾಗೂ ಏಕದಿನ ಸರಣಿಗೆ ಕೊಹ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎನ್ನುವ ನಿರೀಕ್ಷೆಯಿತ್ತು. ಆದರೆ ವಿರಾಟ್‌ ಎಲ್ಲಾ ಮೂರು ಸರಣಿಗಳಲ್ಲಿ ಆಡಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ತಾರಾ ವೇಗಿ ಜಸ್‌ಪ್ರೀತ್‌ ಬೂಮ್ರಾ ಹಾಗೂ ಹಾರ್ದಿಕ್‌ ಪಾಂಡ ಈ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ.

ಏಕದಿನ ವಿಶ್ವಕಪ್‌ ತಂಡದಲ್ಲಿ ಅವಕಾಶ ಪಡೆಯದ ಶ್ರೇಯಸ್‌ ಅಯ್ಯರ್‌ ಹಾಗೂ ಮನೀಶ್‌ ಪಾಂಡೆ ಪಾಲಿಗೆ ಈ ಪ್ರವಾಸ ನಿರ್ಣಾಯಕವಾಗಲಿದೆ. ಪಾಂಡೆ ಭಾರತ ಪರ ಕೊನೆಯದ್ದಾಗಿ ಆಡಿದ್ದು 2018ರ ನವೆಂಬರ್‌ನಲ್ಲಿ. ಶ್ರೇಯಸ್‌ 2018ರ ಫೆಬ್ರವರಿಯಲ್ಲಿ ಕೊನೆ ಬಾರಿಗೆ ತಂಡದಲ್ಲಿ ಕಾಣಿಸಿಕೊಂಡಿದ್ದರು. ಈ ಇಬ್ಬರು ತಂಡದ ಮಧ್ಯಮ ಕ್ರಮಾಂಕದ ಬಲ ಎನಿಸಿದ್ದಾರೆ. ಭಾರತ ‘ಎ’ ಪರ ವಿಂಡೀಸ್‌ ಪ್ರವಾಸ ಕೈಗೊಂಡಿದ್ದ ಪಾಂಡೆ ಹಾಗೂ ಶ್ರೇಯಸ್‌ ಈಗಾಗಲೇ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ.

ಸ್ಪಿನ್ನರ್‌ಗಳಾದ ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಹರ್‌, ವೇಗಿಗಳಾದ ನವ್‌ದೀಪ್‌ ಸೈನಿ, ಖಲೀಲ್‌ ಅಹ್ಮದ್‌, ದೀಪಕ್‌ ಚಹರ್‌ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ. ರೋಹಿತ್‌ ಶರ್ಮಾ ಹಾಗೂ ಶಿಖರ್‌ ಧವನ್‌ ಜೋಡಿ ಮತ್ತೆ ಒಂದಾಗಿದ್ದು, 4ನೇ ಕ್ರಮಾಂಕದಲ್ಲಿ ಕೆ.ಎಲ್‌.ರಾಹುಲ್‌ ಆಡುವ ನಿರೀಕ್ಷೆ ಇದೆ.

ಏಕದಿನ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ರೋಹಿತ್‌ ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ರೋಹಿತ್‌ ಜತೆಗಿನ ಮನಸ್ತಾಪದ ವದಂತಿ ನಡುವೆ ಕೊಹ್ಲಿ ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿದ್ದಾರೆ. ಕೊಹ್ಲಿ ಬ್ಯಾಟಿಂಗ್‌ಗಿಂತ ಹೆಚ್ಚಾಗಿ ಅವರ ನಾಯಕತ್ವದ ಮೇಲೆ ಎಲ್ಲರ ಗಮನವಿದೆ. ಸೀಮಿತ ಓವರ್‌ ತಂಡಕ್ಕೆ ರೋಹಿತ್‌ರನ್ನು ನಾಯಕನನ್ನಾಗಿ ನೇಮಿಸಬೇಕು ಎಂಬ ಚರ್ಚೆ ಶುರುವಾಗಿರುವ ಬೆನ್ನಲ್ಲೇ, ಕೊಹ್ಲಿ ತಮ್ಮ ನಾಯಕತ್ವ ಗುಣಗಳನ್ನು ಮತ್ತೊಮ್ಮೆ ಸಾಬೀತು ಮಾಡಬೇಕಾದ ಸವಾಲು ಎದುರಿಸಲಿದ್ದಾರೆ.

ಹೆಚ್ಚಿದ ಪಂತ್‌ ಜವಾಬ್ದಾರಿ: ಈ ಪ್ರವಾಸದಿಂದ ರಿಷಭ್‌ ಪಂತ್‌ ಮೇಲಿನ ಜವಾಬ್ದಾರಿ ಹೆಚ್ಚಾಗಲಿದೆ. ಎಲ್ಲಾ ಮೂರೂ ಮಾದರಿಗಳಲ್ಲಿ ಪಂತ್‌ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಲಿದ್ದಾರೆ. ಧೋನಿ ಭವಿಷ್ಯದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ಮುಂದಿನ ವರ್ಷದ ವಿಶ್ವಕಪ್‌ ವೇಳೆಗೆ ಪಂತ್‌ ಮತ್ತಷ್ಟುಪರಿಪಕ್ವತೆ ಹೊಂದಬೇಕಿದೆ.

ವಿಂಡೀಸ್‌ಗೆ ತಾರಾ ಆಟಗಾರರ ಬಲ: ಭಾರತವೇ ಸರಣಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆಯಾದರೂ, ಕಿರೋನ್‌ ಪೊಲ್ಲಾರ್ಡ್‌, ಸುನಿಲ್‌ ನರೈನ್‌, ಎವಿನ್‌ ಲೆವಿಸ್‌, ನಿಕೋಲಸ್‌ ಪೂರನ್‌ರಂತಹ ಟಿ20 ತಜ್ಞರನ್ನು ಹೊಂದಿರುವ ವಿಂಡೀಸ್‌ ತಂಡವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಬೂಮ್ರಾ ಅನುಪಸ್ಥಿತಿಯಲ್ಲಿ ಭುವನೇಶ್ವರ್‌ ಕುಮಾರ್‌ ಭಾರತದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದು, ಪಂದ್ಯ ಭಾರೀ ಕುತೂಹಲ ಹುಟ್ಟಿಸಿದೆ.

ಒಟ್ಟು ಮುಖಾಮುಖಿ: 11

ಭಾರತ: 05

ವಿಂಡೀಸ್‌: 05

ಫಲಿತಾಂಶವಿಲ್ಲ: 01

ತಂಡಗಳು

ಭಾರತ: ರೋಹಿತ್‌, ಧವನ್‌, ಕೊಹ್ಲಿ(ನಾಯಕ), ರಾಹುಲ್‌, ಶ್ರೇಯಸ್‌ ಅಯ್ಯರ್‌, ಪಾಂಡೆ, ರಿಷಭ್‌, ಕೃನಾಲ್‌, ಜಡೇಜಾ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಹರ್‌, ಭುವನೇಶ್ವರ್‌, ಖಲೀಲ್‌, ದೀಪಕ್‌ ಚಹರ್‌, ನವ್‌ದೀಪ್‌.

ವಿಂಡೀಸ್‌: ಕ್ಯಾಂಪ್‌ಬೆಲ್‌, ಲೆವಿಸ್‌, ಹೆಟ್ಮೇಯರ್‌, ಪೂರನ್‌, ಪೊಲ್ಲಾರ್ಡ್‌, ಪೋವೆಲ್‌,ಬ್ರಾಥ್‌ವೇಟ್‌(ನಾಯಕ), ಪೌಲ್‌, ನರೈನ್‌, ಕಾಟ್ರೆಲ್‌, ಥಾಮಸ್‌, ಆ್ಯಂಟೋನಿ ಬ್ರಾಂಬಲ್‌, ಖಾರ್ರಿ ಪಿಯರ್‌, ಜೇಸನ್‌ ಮೊಹಮದ್‌.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸೋನಿ ಟೆನ್‌ 1

ಪಿಚ್‌ ರಿಪೋರ್ಟ್‌

ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಹಲವು ದೊಡ್ಡ ಮೊತ್ತಗಳಿಗೆ ಸಾಕ್ಷಿಯಾಗಿದೆ. ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯಗಳಲ್ಲೂ ಬ್ಯಾಟ್ಸ್‌ಮನ್‌ಗಳೇ ಇಲ್ಲಿ ಹೆಚ್ಚು ಯಶಸ್ಸು ಸಾಧಿಸಿದ್ದರು. ಮೊದಲು ಬ್ಯಾಟ್‌ ಮಾಡುವ ತಂಡ ಕನಿಷ್ಠ 180-190 ರನ್‌ ಗಳಿಸಬೇಕಾದ ಒತ್ತಡಕ್ಕೆ ಸಿಲುಕಲಿದೆ.