ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ, ಕೇರಳ ಸರ್ಕಾರವು ಜುಲೈ 20ರಂದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ. ಮಧ್ಯರಾತ್ರಿ ನಡೆಯುವ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಪಂದ್ಯ ವೀಕ್ಷಿಸಲು ಅನುಕೂಲವಾಗುವಂತೆ, ಸಾರ್ವಜನಿಕರ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತಿರುವನಂತಪುರಂ: ಫುಟ್‌ಬಾಲ್ (Football)ಅಂದರೆ ಕೇರಳಿಗರಿಗೆ ಕೇವಲ ಕ್ರೀಡೆಯಲ್ಲ, ಅದೊಂದು ಭಾವನೆ. ಇದೀಗ ಫಿಫಾ ವಿಶ್ವಕಪ್ ಫೈನಲ್ (fifa world cup final) ಪಂದ್ಯದ ಜ್ವರ ಇಡೀ ಕೇರಳವನ್ನು ಆವರಿಸಿದ್ದು, ಇದರ ಬೆನ್ನಲ್ಲೇ ಕೇರಳ ಸರ್ಕಾರವು ಜುಲೈ 20, 2026ರ ಸೋಮವಾರದಂದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ (School, College and education institutions) ಘೋಷಿಸಿ ಆದೇಶ ಹೊರಡಿಸಿದೆ.

ಕ್ರೀಡಾ ಪ್ರೇಮಕ್ಕೆ ಸರ್ಕಾರದ ಸಾಥ್

ಕ್ರೀಡಾ ಕ್ಷೇತ್ರವನ್ನು ಪ್ರೋತ್ಸಾಹಿಸುವ ತನ್ನ ನೀತಿಯ ಭಾಗವಾಗಿ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವೃತ್ತಿಪರ ಕಾಲೇಜುಗಳು ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೋಮವಾರ ರಜೆ ಇರಲಿದೆ. 'ಫುಟ್‌ಬಾಲ್ ಫೈನಲ್ ಪಂದ್ಯವು ಮಧ್ಯರಾತ್ರಿ ನಡೆಯುವುದರಿಂದ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮುಂಜಾನೆ ಶಾಲಾ-ಕಾಲೇಜುಗಳಿಗೆ ಹಾಜರಾಗುವುದು ಕಷ್ಟವಾಗಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಈಗಾಗಲೇ ನಿಗದಿಯಾಗಿರುವ ಸಾರ್ವಜನಿಕ ಸೇವಾ ಆಯೋಗ (PSC) ಮತ್ತು ವಿಶ್ವವಿದ್ಯಾಲಯಗಳ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಸೋಶಿಯಲ್ ಮೀಡಿಯಾ ಒತ್ತಾಯಕ್ಕೆ ಮಣಿದ ಸರ್ಕಾರ

ಫೈನಲ್ ಪಂದ್ಯ ವೀಕ್ಷಿಸಲು ಸೋಮವಾರ ರಜೆ ನೀಡಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಅಭಿಯಾನ ನಡೆದಿತ್ತು. ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಸಚಿವ ಎನ್. ಶಂಸುದೀನ್ ಅವರಿಗೆ ಕರೆ ಮಾಡಿ ರಜೆಗಾಗಿ ಮನವಿ ಮಾಡಿದ್ದರು. ಯೂತ್ ಕಾಂಗ್ರೆಸ್ ಕೂಡ ಈ ಬಗ್ಗೆ ಒತ್ತಾಯಿಸಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಉನ್ನತ ಮಟ್ಟದ ಚರ್ಚೆಯ ನಂತರ ರಜೆ ಘೋಷಿಸಿದ್ದಾರೆ.

ಸಚಿವರ ಹರ್ಷ: ಮೆಸ್ಸಿ vs ಯಮಾಲ್ ಹಣಾಹಣಿ

ಸೋಮವಾರ ರಜೆ ಘೋಷಣೆಯಾಗುತ್ತಿದ್ದಂತೆ ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್ ಅವರು ಹರ್ಷ ವ್ಯಕ್ತಪಡಿಸಿದ್ದು, 'ಎಲ್ಲರೂ ಫೈನಲ್ ಮ್ಯಾಚ್‌ನ ಕಿಕ್ ಎಂಜಾಯ್ ಮಾಡಿ' ಎಂದು ಕರೆ ನೀಡಿದ್ದಾರೆ. ಭಾರತೀಯ ಕಾಲಮಾನ ರಾತ್ರಿ 12:30ಕ್ಕೆ ಈ ರೋಚಕ ಪಂದ್ಯ ಆರಂಭವಾಗಲಿದೆ. ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಮತ್ತು ಸ್ಪೇನ್ ತಂಡಗಳು ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗುತ್ತಿವೆ. ವಿಶೇಷವಾಗಿ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಮತ್ತು ಯುವ ಪ್ರತಿಭೆ ಲ್ಯಾಮಿನೆ ಯಮಾಲ್ ಅವರ ನಡುವಿನ ಕಾದಾಟವನ್ನು ನೋಡಲು ಇಡೀ ಕೇರಳವೇ ಕಾದು ಕುಳಿತಿದೆ.

ಕೇರಳದ ಮೂಲೆ ಮೂಲೆಯಲ್ಲೂ ಫುಟ್‌ಬಾಲ್ ಸಂಭ್ರಮ ಮನೆ ಮಾಡಿದ್ದು, ದೊಡ್ಡ ಸ್ಕ್ರೀನ್‌ಗಳ ಮೂಲಕ ಪಂದ್ಯ ವೀಕ್ಷಿಸಲು ಭರ್ಜರಿ ಸಿದ್ಧತೆಗಳು ನಡೆದಿವೆ. ಸರ್ಕಾರದ ಈ ರಜೆ ನಿರ್ಧಾರವು ಫುಟ್‌ಬಾಲ್ ಪ್ರೇಮಿಗಳ ಖುಷಿಯನ್ನು ಇಮ್ಮಡಿಗೊಳಿಸಿದೆ.