ಈ ಬಾರಿಯ IPL ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಬಿಸಿಸಿಐ ಜೊತೆ ಮಾತುಕತೆ ನಡೆಸುತ್ತಿದೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಪ್ರಕಾರ, ರಾಜ್ಯ ಸರ್ಕಾರದಿಂದಲೂ ಇದಕ್ಕೆ ಹಸಿರು ನಿಶಾನೆ ದೊರೆತಿದ್ದು, ಶೀಘ್ರ ದಿನಾಂಕ ನಿಗದಿಯಾಗುವ ನಿರೀಕ್ಷೆ

ಬೆಂಗಳೂರು (ಡಿ.16): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸುವ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಗಂಭೀರ ಪ್ರಯತ್ನ ನಡೆಸುತ್ತಿದೆ.

ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಕೆಎಸ್‌ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರು, ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯವನ್ನು ಆಯೋಜಿಸುವಂತೆ ಈಗಾಗಲೇ ಬಿಸಿಸಿಐ (BCCI) ಜೊತೆ ಮಾತುಕತೆ ನಡೆಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಬಿಸಿಸಿಐ ಸಹ ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದಿಂದ ಗ್ರೀನ್ ಸಿಗ್ನಲ್

ಸಾಮಾನ್ಯವಾಗಿ ಪ್ರತಿ ವರ್ಷ ಐಪಿಎಲ್ ಟ್ರೋಫಿ ಗೆದ್ದ ತಂಡದ ತವರು ಮೈದಾನದಲ್ಲೇ ಉದ್ಘಾಟನಾ ಪಂದ್ಯ ನಡೆಯುತ್ತಿತ್ತು. ಆದರೆ, ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ನಡೆದ ಘಟನೆಯಿಂದಾಗಿ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಹೀಗಾಗಿ, ಹೊಸದಾಗಿ ಆಯ್ಕೆಯಾಗಿರುವ ನಮ್ಮ ಕೆಎಸ್‌ಸಿಎ ತಂಡವು ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಈಗಾಗಲೇ ಪಂದ್ಯಾವಳಿ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಗೃಹ ಸಚಿವರ ಜೊತೆ ಕೂಡ ಫೋನ್ ಮೂಲಕ ಮಾತನಾಡಿದ್ದೇನೆ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.

ಶೀಘ್ರದಲ್ಲೇ ದಿನಾಂಕ ನಿಗದಿ

ಐಪಿಎಲ್, ಅಂತರಾಷ್ಟ್ರೀಯ ಸೇರಿದಂತೆ ಎಲ್ಲಾ ಮಾದರಿಯ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. ಶೀಘ್ರದಲ್ಲೇ ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯದ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆಯು ಆರ್‌ಸಿಬಿ ಮತ್ತು ಕ್ರಿಕೆಟ್ ಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.