ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಮತ್ತೊಂದೆಡೆ, 2027ರ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ವೇಗಿ ಮೊಹಮ್ಮದ್ ಶಮಿಯನ್ನು ತಂಡಕ್ಕೆ ವಾಪಸ್ ಕರೆತರುವ ಬಗ್ಗೆ ಆಯ್ಕೆಗಾರರು ಚಿಂತನೆ ನಡೆಸಿದ್ದಾರೆ.
ಬೆಂಗಳೂರು: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಶ್ರೇಯಸ್ ಅಯ್ಯರ್ ಅವರ ವಾಪಸಾತಿ ಇನ್ನಷ್ಟು ತಡವಾಗುವ ಸಾಧ್ಯತೆಯಿದೆ. ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಉಪನಾಯಕ ಶ್ರೇಯಸ್ ಆಡುವುದು ಅನುಮಾನ. ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೇಯಸ್ ಅವರ ದೇಹದ ತೂಕ ಆರು ಕೆಜಿಯಷ್ಟು ಕಡಿಮೆಯಾಗಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತರಬೇತಿ ಪಡೆಯುತ್ತಿರುವ ಶ್ರೇಯಸ್ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ ಎಂದು ತಿಳಿದುಬಂದಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ವೈದ್ಯರು ಶ್ರೇಯಸ್‌ಗೆ ಅನುಮತಿ ನೀಡಿರಲಿಲ್ಲ.
ದೇಶೀಯ ಕ್ರಿಕೆಟ್‌ನಲ್ಲಿ ಆಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರೆ ಮಾತ್ರ ಭಾರತೀಯ ತಂಡಕ್ಕೆ ಪರಿಗಣಿಸಲಾಗುವುದು ಎಂಬುದು ಬಿಸಿಸಿಐ ನಿಯಮ. ಇದರಿಂದಾಗಿ ಕಿವೀಸ್ ವಿರುದ್ಧದ ಸರಣಿಗೆ ಶ್ರೇಯಸ್ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಶ್ರೇಯಸ್ ಬದಲಿಗೆ ಋತುರಾಜ್ ಗಾಯಕ್ವಾಡ್ ತಂಡದಲ್ಲಿ ಮುಂದುವರಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಫೀಲ್ಡಿಂಗ್ ಮಾಡುವಾಗ ಶ್ರೇಯಸ್‌ಗೆ ಗಾಯವಾಗಿತ್ತು. ಜನವರಿ 11 ರಿಂದ ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ.
ಶಮಿ ಕಮ್‌ಬ್ಯಾಕ್ ಬಹುತೇಕ ಕನ್ಫರ್ಮ್
ಇನ್ನು, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ವೇಗಿ ಮೊಹಮ್ಮದ್ ಶಮಿಯನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ. 2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಆಯ್ಕೆಗಾರರು ಈ ನಿರ್ಧಾರ ಕೈಗೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಶಮಿಯ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಶೀಘ್ರದಲ್ಲೇ ಶಮಿ ತಂಡಕ್ಕೆ ಮರಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳಿಂದ ಮಾಹಿತಿ ಲಭಿಸಿದೆ. 2025ರ ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಭಾರತ ತಂಡದ ಪರ ಕೊನೆಯ ಬಾರಿಗೆ ಆಡಿದ್ದರು. ಆ ಟೂರ್ನಿಯಲ್ಲಿ ಶಮಿ ಒಂಬತ್ತು ವಿಕೆಟ್ ಪಡೆದಿದ್ದರು.
ಶಮಿ ವಾಪಸಾತಿ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು, 'ಮೊಹಮ್ಮದ್ ಶಮಿ ವಿಷಯವನ್ನು ನಾವು ಸದಾ ಪರಿಗಣಿಸುತ್ತೇವೆ. ಶಮಿ ಉತ್ತಮ ವಿಕೆಟ್ ಟೇಕಿಂಗ್ ಬೌಲರ್. ಫಿಟ್‌ನೆಸ್ ಮಾತ್ರ ಚಿಂತೆಯ ವಿಷಯ. ತಂಡದ ಆಯ್ಕೆಯ ರೇಡಾರ್‌ನಿಂದ ಶಮಿ ಹೊರಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಿದರೆ, ಅದು ಉತ್ತಮ ನಿರ್ಧಾರ. ಒಂದು ವೇಳೆ ಅವರು ತಂಡಕ್ಕೆ ಬಂದರೂ ಆಶ್ಚರ್ಯಪಡಬೇಕಾಗಿಲ್ಲ. 2027ರ ವಿಶ್ವಕಪ್‌ನಲ್ಲೂ ಶಮಿಗೆ ಅವಕಾಶಗಳಿವೆ' ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಇನ್ನುಳಿದಂತೆ ಶುಭ್‌ಮನ್ ಗಿಲ್ ಕೂಡಾ ಭಾರತ ಏಕದಿನ ತಂಡವನ್ನು ಕೂಡಿಕೊಳ್ಳಲಿದ್ದು, ಅನುಭವಿ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡಾ ಏಕದಿನ ಸರಣಿಗೆ ತಂಡ ಕೂಡಿಕೊಳ್ಳಲಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ವಿಜಯ್ ಹಜಾರೆ ಟೂರ್ನಿಯಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.


