ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ರಾಜ್ಯದ ಮನು
* ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ಗೆ ರಾಜ್ಯದ ಮನು ಡಿಪಿ ಅರ್ಹತೆ
* ಅಮೆರಿಕದಲ್ಲಿ ಜುಲೈ 14ರಿಂದ 24ರ ವರೆಗೂ ನಡೆಯಲಿರುವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್
* ಆರ್ಥಿಕ ನೆರವನ್ನು ಎದುರು ನೋಡುತ್ತಿರುವ ಪ್ರತಿಭಾನ್ವಿತ ಜಾವೆಲಿನ್ ಥ್ರೋ ಪಟು
ಬೆಂಗಳೂರು(ಮೇ.23): ಕರ್ನಾಟಕದ ಯುವ ಜಾವೆಲಿನ್ ಥ್ರೋ ಪಟು ಮನು ಡಿ.ಪಿ (Manu DP)., ಜುಲೈ 14ರಿಂದ 24ರ ವರೆಗೂ ಅಮೆರಿಕದ ಯುಜೀನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ (World Athletics Championships) ಅರ್ಹತೆ ಪಡೆದಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 32 ಸ್ಥಾನಗಳಲ್ಲಿರುವ ಕ್ರೀಡಾಪಟುಗಳಿಗೆ ನೇರ ಪ್ರವೇಶ ದೊರೆಯಲಿದ್ದು, ಮನು 16ನೇ ಸ್ಥಾನದಲ್ಲಿರುವ ಕಾರಣ ಅವರಿಗೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಶನ್(ಐಎಎಎಫ್) ಕೂಟದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದೆ. ಸದ್ಯ ಭಾರತದ 9 ಕ್ರೀಡಾಪಟುಗಳು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದು, ಕರ್ನಾಟಕದ ಏಕೈಕ ಅಥ್ಲೀಟ್ ಎನ್ನುವ ಹಿರಿಮೆಗೆ ಮನು ಪಾತ್ರರಾಗಿದ್ದಾರೆ. ಕೇರಳದ ತಿರುವನಂತಪುರಂ ನಡೆದಿದ್ದ ಭಾರತೀಯ ಗ್ರ್ಯಾನ್ ಪ್ರಿ ಕೂಟದಲ್ಲಿ 82.43 ಮೀ. ದೂರಕ್ಕೆ ಜಾವೆಲಿನ್ ಎಸೆದು ಮನು, 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದರು.
ಮೊದಲ ವಿದೇಶಿ ಪ್ರವಾಸಕ್ಕೆ ಅಣಿಯಾಗುತ್ತಿರುವ ಮನು!
ಮೇ 24ರಂದು ನಡೆಯಲಿರುವ ಭಾರತೀಯ ಅಥ್ಲೆಟಿಕ್ಸ್ ಗ್ರ್ಯಾನ್ ಪ್ರಿ ಕೂಟದಲ್ಲಿ ಸ್ಪರ್ಧಿಸಲು ರೈಲಿನಲ್ಲಿ ಪುಣೆಯಿಂದ ಭುವನೇಶ್ವರಕ್ಕೆ ಪ್ರಯಾಣಿಸುತ್ತಿದ್ದ ವೇಳೆಯೇ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ಖುಷಿ ಹಂಚಿಕೊಂಡ ಮನು, ‘ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುವುದು ನನ್ನ ಗುರಿಯಾಗಿತ್ತು. ಅದೀಗ ಈಡೇರಿದೆ. 2022ರ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿರುವ ಕರ್ನಾಟಕದ ಮೊದಲ ಅಥ್ಲೀಟ್ ಎನ್ನುವ ಹೆಮ್ಮೆಯಿದ್ದು, ಉತ್ತಮ ಪ್ರದರ್ಶನ ತೋರಲಿದ್ದೇನೆ ಎನ್ನುವ ವಿಶ್ವಾಸವಿದೆ’ ಎಂದರು. ‘ಮೊದಲ ಬಾರಿಗೆ ಭಾರತದಾಚೆ ಸ್ಪರ್ಧಿಸಲಿದ್ದೇನೆ. ಮುಂದಿನ ಒಂದು ತಿಂಗಳು ನನ್ನ ಪಾಲಿಗೆ ಬಹಳ ಮುಖ್ಯ’ ಎಂದರು.
ಮನುಗೆ ಆರ್ಥಿಕ ನೆರವು ಬೇಕಿದೆ: ಕೋಚ್ ಕಾಶಿನಾಥ್
ವಿಮಾನ ಟಿಕೆಟ್‌ಗಳು ದುಬಾರಿಯಾದ ಕಾರಣ ಗ್ರ್ಯಾನ್ ಪ್ರಿಯಲ್ಲಿ ಸ್ಪರ್ಧಿಸಲು ರೈಲಿನಲ್ಲಿ ಹೋಗುತ್ತಿದ್ದೇವೆ. ಮನುಗೆ ಯಾವುದೇ ಸರ್ಕಾರಿ ಇಲ್ಲವೇ ಖಾಸಗಿ ಸಂಸ್ಥೆಗಳಿಂದ ನೆರವು ದೊರೆಯುತ್ತಿಲ್ಲ ಎಂದು ಮನು ಅವರ ಕೋಚ್ ಕಾಶಿನಾಥ್ ಬೇಸರ ವ್ಯಕ್ತಪಡಿಸಿದರು. ‘ಇತ್ತೀಚೆಗಷ್ಟೇ 1.25 ಲಕ್ಷ ರು. ಖರ್ಚು ಮಾಡಿ ನೀರಜ್ ಚೋಪ್ರಾ ಸೇರಿ ಅಗ್ರ ಅಥ್ಲೀಟ್‌ಗಳು ಬಳಸುವ ವಿಶ್ವ ದರ್ಜೆಯ ಜಾವೆಲಿನ್ ಖರೀದಿಸಿದೆವು. ಭಾರತವನ್ನು ಪ್ರತಿನಿಧಿಸುವಾಗ ಪ್ರಯಾಣ ಭತ್ಯೆ ಸೇರಿ ಉಳಿದ ಖರ್ಚನ್ನು ಫೆಡರೇಶನ್ ನೋಡಿಕೊಳ್ಳಲಿದೆ. ಇದರ ಹೊರತಾಗಿಯೂ ಸಾಕಷ್ಟು ವೆಚ್ಚವಾಗಲಿದ್ದು, ಪ್ರಾಯೋಜಕತ್ವ ದೊರೆತರೆ ಮನು ಹೆಚ್ಚಿನ ಸಾಧನೆ ಮಾಡಲು ನೆರವಾಗಲಿದೆ’ ಎಂದರು.
ರಾಜ್ಯ ಮಿನಿ ಒಲಿಂಪಿಕ್ಸ್‌ಗೆ ವೈಭವದ ತೆರೆ, 7 ದಿನ ನಡೆದ ಕ್ರೀಡಾಕೂಟ
90 ಮೀ. ಎಸೆತ ಮುಂದಿನ ಗುರಿ: ನೀರಜ್ ಚೋಪ್ರಾ
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ (Tokyo Olympics) ಚಿನ್ನ ವಿಜೇತ ಜಾವೆಲಿನ ಎಸೆತಗಾರ ನೀರಜ್ ಚೋಪ್ರಾ (Neraj Chopra) 90 ಮೀ. ದೂರಕ್ಕೆ ಜಾವೆಲಿನ್ ಎಸೆಯುವುದು ತಮ್ಮ ಮುಂದಿನ ಗುರಿ ಎಂದು ಹೇಳಿದ್ದಾರೆ. ಟರ್ಕಿಯಲ್ಲಿ ಅಭ್ಯಾಸ ನಿರತರಾಗಿರುವ ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ದೂರದ ಎಸೆತದ ಬಗ್ಗೆ ಚಿಂತಿಸಿ ಒತ್ತಡಕ್ಕೆ ಒಳಗಾಗುವುದಿಲ್ಲ. ಆದರೆ 90 ಮೀ. ದೂರಕ್ಕೆ ಎಸೆಯುವುದು ನನ್ನ ಕನಸು. ಇದೇ ವರ್ಷ ಅದನ್ನು ಸಾಧಿಸಲು ಪ್ರಯತ್ನಿಸುತ್ತೇನೆ’ ಎಂದರು.