ರಾಜ್ಯ ಮಿನಿ ಒಲಿಂಪಿಕ್ಸ್‌ಗೆ ವೈಭವದ ತೆರೆ, 7 ದಿನ ನಡೆದ ಕ್ರೀಡಾಕೂಟ
* ಎರಡನೇ ಆವೃತ್ತಿಯ ಕರ್ನಾಟಕ ಮಿನಿ ಒಲಿಂಪಿಕ್ಸ್‌ಗೆ ಅದ್ಧೂರಿ ತೆರೆ
* ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾಕೂಟದ ಸಮಾರೋಪ ಸಮಾರಂಭ
* ಅಥ್ಲೆಟಿಕ್ಸ್ ಬಾಲಕರ ವಿಭಾಗದಲ್ಲಿ ಉಡುಪಿಯ ಅನುರಾಗ್ ಚಾಂಪಿಯನ್
ಬೆಂಗಳೂರು(ಮೇ.23): 7 ದಿನಗಳ ಕಾಲ ನಡೆದ 2ನೇ ಆವೃತ್ತಿಯ ಕರ್ನಾಟಕ ಮಿನಿ ಒಲಿಂಪಿಕ್ಸ್‌ಗೆ (Karnataka Mini Olympics) ಭಾನುವಾರ ತೆರೆ ಬಿದ್ದಿದೆ. ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ (Sree Kanteerava indore Stadium) ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆದಿದ್ದು, ಕ್ರೀಡಾ ಸಚಿವ ಡಾ.ಕೆ.ಸಿ. ನಾರಾಯಣಗೌಡ, ತೋಟಗಾರಿಕೆ ಸಚಿವ ಮುನಿರತ್ನ, ಕರ್ನಾಟಕ ಮಿನಿ ಒಲಿಂಪಿಕ್ಸ್ ಸಂಸ್ಥೆ(ಕೆಒಎ) ಅಧ್ಯಕ್ಷ ಡಾ.ಗೋವಿಂದರಾಜು ಸೇರಿದಂತೆ ಗಣ್ಯರು ಪಾಲ್ಗೊಂಡರು.
ಬಳಿಕ ಮಾತನಾಡಿದ ಗೋವಿಂದರಾಜು, ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದನ್ನು ವರ್ಷಕ್ಕೆ 2 ಬಾರಿ ನಡೆಸಿದರೆ ಒಳ್ಳೆಯದು ಎಂಬ ಭಾವನೆ ಹುಟ್ಟುಹಾಕಿದೆ. ಪುಟ್ಟಮಕ್ಕಳ ಉತ್ಸಾಹ ನಿಜಕ್ಕೂ ಖುಷಿ ತಂದಿದ್ದು, ಮುಂದೆ ದೊಡ್ಡ ಬಜೆಟ್‌ನಲ್ಲಿ ಗೇಮ್ಸ್ ಆಯೋಜಿಸುತ್ತೇವೆ. ರಾಜ್ಯದಲ್ಲಿ ಜೂನಿಯರ್ ಒಲಿಂಪಿಕ್ಸ್ ಆಯೋಜಿಸುವ ಉದ್ದೇಶವಿದೆ ಎಂದರು.
ಅನುರಾಗ್, ಸ್ವರಾ ಚಾಂಪಿಯನ್
ಕ್ರೀಡಾಕೂಟದ ಅಥ್ಲೆಟಿಕ್ಸ್ ಬಾಲಕರ ವಿಭಾಗದಲ್ಲಿ ಉಡುಪಿಯ ಅನುರಾಗ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯ ಸ್ವರಾ ಸಂತೋಷ್ ಸಿಂಧೆ ಚಾಂಪಿಯನ್ ಪಟ್ಟಕ್ಕೆ ಮುತ್ತಿಕ್ಕಿದರು. ಬೆಂಗಳೂರಿನ ಮಕ್ಕಳು ಗೇಮ್ಸ್‌ನ ಬಹುತೇಕ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದರು. ವಿವಿಧ ಸ್ಪರ್ಧೆಗಳ ವಿಜೇತ ತಂಡಗಳಿಗೆ ಸಮಾರಂಭದಲ್ಲಿ ಟ್ರೋಫಿ ವಿತರಿಸಲಾಯಿತು.
ಸ್ವಿಜರ್‌ಲೆಂಡ್ ಕೂಟದಲ್ಲಿ ರಾಜ್ಯದ ಪ್ರಿಯಾಗೆ ಚಿನ್ನ
ಜಿನೆವಾ: ಕರ್ನಾಟಕದ ಯುವ ಅಥ್ಲೀಟ್ ಪ್ರಿಯಾ ಮೋಹನ್ ಸ್ವಿಜರ್‌ಲೆಂಡ್‌ನ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದ 400 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಅವರು 52.93 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಸ್ವಿಜರ್‌ಲೆಂಡ್‌ನ ಒಲಿಂಪಿಯನ್ ಸಿಲ್ಕ್ ಲೆಮ್ಮೆನ್ಸ್‌ರನ್ನು(53.45 ಸೆಕೆಂಡ್) ಹಿಂದಿಕ್ಕಿ 19 ವರ್ಷದ ಪ್ರಿಯಾ ಚಿನ್ನಕ್ಕೆ ಮುತ್ತಿಟ್ಟರು. ಕಳೆದ ವಾರ ಫ್ರಾನ್ಸ್‌ನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ 400 ಮೀ. ಓಟವನ್ನು 53.18 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ 5ನೇ ಸ್ಥಾನ ಪಡೆದಿದ್ದರು.
Thomas Cup ಜಯಿಸಿದ್ದು ಸಣ್ಣ ಸಾಧನೆಯಲ್ಲ; ಭಾರತ ತಂಡವನ್ನು ಗುಣಗಾನ ಮಾಡಿದ ಪ್ರಧಾನಿ ಮೋದಿ
ಫ್ರೆಂಚ್ ಓಪನ್: ಸ್ಪೇನ್‌ನ ಮುರುಗುಜಾಗೆ ಆಘಾತ
ಪ್ಯಾರಿಸ್: ಭಾನುವಾರ ಆರಂಭಗೊಂಡ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್, ಸ್ಪೇನ್‌ನ ಗಾರ್ಬಿನ್ ಮುಗುರುಜಾ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.10 ಮುಗುರುಜಾ, ಟೂರ್ನಿಯ ಅತೀ ಹಿರಿಯ ಆಟಗಾರ್ತಿ, ಎಸ್ಟೋನಿಯಾದ 37 ವರ್ಷದ ಕಿಯಾ ಕನೇಪಿ ವಿರುದ್ಧ 6-2, 3-6, 4-6 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದರು. ವಿಶ್ವ ನಂ.6 ಟ್ಯುನೀಷಿಯಾದ ಒನ್ಸ್ ಜಬೆಯುರ್, ಪೋಲೆಂಡ್‌ನ ಮಗ್ದಾ ಲಿನೆಟ್ಟೆವಿರುದ್ಧ ಪರಾಭವಗೊಂಡರು. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.9, ಕೆನಡಾದ ಫೆಲಿಕ್ಸ್ ಅಲಿಯಾಸ್ಸಿಮ್ ಶುಭಾರಂಭ ಮಾಡಿದರು.