ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಕರ್ನಾಟಕದ ಆಟಗಾರರನ್ನು ಕಡೆಗಣಿಸಲಾಗಿದೆ. ಕಳೆದ ಆವೃತ್ತಿಗಳಲ್ಲಿ ಸಿಕ್ಕ ಸೀಮಿತ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ತೋರಿ ಭರವಸೆ ಮೂಡಿಸಿದ್ದ ಆಟಗಾರರು 7ನೇ ಆವೃತ್ತಿಗೆ ಗೈರಾಗಲಿದ್ದಾರೆ. 

ಪ್ರೊ ಕಬಡ್ಡಿ ಆಟಗಾರರ ಹರಾಜು: ಪಾಟ್ನಾ ಪಾಲಾದ ಜಾಂಗ್ ಕುನ್ ಲೀ

ಇಲ್ಲಿ ನಡೆದ 2 ದಿನಗಳ ಹರಾಜು ಪ್ರಕ್ರಿಯೆಯಲ್ಲಿ ರಾಜ್ಯದ ಆಟಗಾರರಿಗೆ ಹೆಚ್ಚಿನ ಬೇಡಿಕೆ ಕಂಡುಬರಲಿಲ್ಲ. ಪ್ರಮುಖವಾಗಿ ಬೆಂಗಳೂರು ಬುಲ್ಸ್ ಒಬ್ಬನೇ ಒಬ್ಬ ಕರ್ನಾಟಕದ ಆಟಗಾರನನ್ನು ಖರೀದಿ ಮಾಡದೆ ಇರುವುದು ನಿರಾಸೆ ಮೂಡಿಸಿದೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್’ನಲ್ಲಿದ್ದ ರೈಡರ್‌ಗಳಾದ ಹರೀಶ್ ನಾಯ್ಕ್, ಆನಂದ್.ವಿ, ಡಿಫೆಂಡರ್‌ಗಳಾದ ನಿತೇಶ್ ಬಿ. ಆರ್, ಜವಾಹರ್ ವಿವೇಕ್ ಬಿಕರಿಯಾಗದೆ ಉಳಿದರು. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಹೆಸರಿಗೆ ಮಾತ್ರ ಬೆಂಗಳೂರು ತಂಡವಾಗಿರುವಂತೆ, ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಕನ್ನಡಿಗರಿಲ್ಲದೆ ಕರ್ನಾಟಕವನ್ನು ಪ್ರತಿನಿಧಿಸಲಿದೆ.

ಪ್ರೊ ಕಬಡ್ಡಿ: ಈ ಸಲ ಇಬ್ಬರೇ ಕೋಟ್ಯಧಿಪತಿಗಳು!

ಇದೇ ವೇಳೆ, ಯು.ಪಿ.ಯೋಧಾ ತಂಡದಲ್ಲಿದ್ದ ಸಂತೋಷ್ ಬಿ. ಎಸ್, ತೆಲುಗು ಟೈಟಾನ್ಸ್‌ನಲ್ಲಿದ್ದ ರಕ್ಷಿತ್, ಗುಜರಾತ್ ತಂಡದ ಪ್ರಮುಖ ಡಿಫೆಂಡರ್ ಆಗಿ ಕಾಣಿಸಿಕೊಂಡು 22 ಪಂದ್ಯಗಳಲ್ಲಿ 25 ಟ್ಯಾಕಲ್ ಅಂಕಗಳನ್ನು ಗಳಿಸಿದ್ದ ಸಚಿನ್ ವಿಠ್ಠಲ, ತಮಿಳ್ ತಲೈವಾಸ್ ಪರ 5ನೇ, 6ನೇ ಆವೃತ್ತಿಯಲ್ಲಿ ಆಡಿದ್ದ ಡಿಫೆಂಡರ್ ದರ್ಶನ್.ಜೆ ಬಿಕರಿಯಾಗದೆ ಉಳಿದಿದ್ದು ಅಚ್ಚರಿಗೆ ಕಾರಣವಾಯಿತು.

ಸುಕೇಶ್‌ಗೆ ಕನಿಷ್ಠ ಮೊತ್ತ:
ಹರಾಜಿನಲ್ಲಿ ಕರ್ನಾಟಕದ 23 ಆಟಗಾರರು ಪಾಲ್ಗೊಂಡಿದ್ದರು. ಈ ಪೈಕಿ ಪ್ರಮುಖ ಆಟಗಾರರಾದ ಪ್ರಶಾಂತ್ ರೈ, ಸುಕೇಶ್ ಹೆಗ್ಡೆ, ಜೀವ ಕುಮಾರ್, ಶಬ್ಬೀರ್ ಬಾಪು ಬಿಕರಿಯಾದರು. ಪ್ರಶಾಂತ್ ₹77 ಲಕ್ಷ ಪಡೆದರೆ, ಇನ್ನುಳಿದ ಆಟಗಾರರು ಸಾಧಾರಣ ಮೊತ್ತಕ್ಕೆ ಬಿಕರಿಯಾದರು. ಮೊದಲ ದಿನ ಬಿಕರಿಯಾಗದೆ ಉಳಿದಿದ್ದ ತಾರಾ ರೈಡರ್ ಸುಕೇಶ್, 2ನೇ ದಿನವಾದ ಮಂಗಳವಾರ ಮೂಲ ಬೆಲೆ ₹20 ಲಕ್ಷಕ್ಕೆ ಬೆಂಗಾಲ್ ವಾರಿಯರ್ಸ್‌ ತಂಡ ಸೇರಿದರು. 

5ನೇ ಆವೃತ್ತಿಯಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ್ದ ಸುಕೇಶ್, ಕಳೆದ ವರ್ಷ ತಮಿಳ್ ತಲೈವಾಸ್ ತಂಡದ ಡು ಆರ್ ಡೈ ರೈಡ್ ತಜ್ಞರಾಗಿ ಮಿಂಚಿದ್ದರು. ಇನ್ನು ಜೀವ ಕುಮಾರ್
₹31 ಲಕ್ಷಕ್ಕೆ ಬೆಂಗಾಲ್ ಪಾಲಾದರು. ಶಬ್ಬೀರ್ ಸಹ ಅತಿಕಡಿಮೆ ಮೊತ್ತಕ್ಕೆ ಬಿಕರಿಯಾದರು.

ವರದಿ: ಸ್ಪಂದನ್ ಕಣಿಯಾರ್, ಕನ್ನಡಪ್ರಭ