ಲಂಡನ್(ಆ.15): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-2 ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾ ಇದೀಗ 3ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ತೃತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ತಯಾರಿ ಬೆನ್ನಲ್ಲೇ ಇದೀಗ ಫಿಟ್ನೆಸ್ ರಿಪೂರ್ಟ್ ಕೂಡ ಬಹಿರಂಗವಾಗಿದೆ.

ಕೈಬೆರಳಿನ ಗಾಯದಿಂದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ತವರಿಗೆ ವಾಪಾಸ್ಸಾದ ವೇಗಿ ಜಸ್‌ಪ್ರೀತ್ ಬುಮ್ರಾ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ 3ನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಕಮ್‌ಬ್ಯಾಕ್ ಮಾಡೋ ಎಲ್ಲಾ ಸಾಧ್ಯತೆ ಇದೆ. 

ಲಾರ್ಡ್ಸ್ ಟೆಸ್ಟ್ ಪಂದ್ಯದ ಬ್ಯಾಟಿಂಗ್ ವೇಳೆ ಆರ್ ಅಶ್ವಿನ್ ಕೂಡ ಗಾಯಗೊಂಡಿದ್ದರು. ಇದೀಗ ಅಶ್ವಿನ್ ಇಂಜುರಿಯಿಂದ ಚೇತರಿಸಿಕೊಂಡು ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ಬುಮ್ರಾ ಹಾಗೂ ಅಶ್ವಿನ್ ಇಬ್ಬರೂ ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ.

ಬೌಲಿಂಗ್ ವಿಭಾಗದ ಇಂಜುರಿ ಸಮಸ್ಯೆ ಬಹುತೇಕ ಇತ್ಯರ್ಥವಾಗಿದೆ. ಆದರೆ ಸಮಸ್ಯೆ ಇರೋದು ಬ್ಯಾಟಿಂಗ್ ವಿಭಾಗದಲ್ಲಿ. ಈಗಾಗಲೇ ಬ್ಯಾಟಿಂಗ್‌ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಟೀಂ ಇಂಡಿಯಾ 3ನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಸವಾಲುಗಳನ್ನ ಎದುರಿಸಬೇಕಿದೆ. ಆದರೆ 2ನೇ ಪಂದ್ಯದ ವೇಳೆ ಬೆನ್ನು ನೋವಿನಿಂದ ಬಳಲಿದ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಕುರಿತು ಅನಿಶ್ಚಿತತೆ ಮುಂದುವರಿದಿದೆ.