ಮುಂಬೈ(ಮಾ.17): ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿ ಅಂತಿಮ ಹಂತ ತಲುಪಿದ್ದು, ಭಾನುವಾರ ಇಲ್ಲಿನ ಫುಟ್ಬಾಲ್‌ ಅರೇನಾದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಗೋವಾ ಎಫ್‌ಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ISL Football: ಸತತ 2ನೇ ಬಾರಿ ಫೈನಲ್ ತಲುಪಿದ ಬೆಂಗಳೂರು!

ಉಭಯ ತಂಡಗಳ ಫೈನಲ್‌ ಹಾದಿ ವಿಭಿನ್ನವಾಗಿತ್ತು. ಬಿಎಫ್‌ಸಿ ತಂಡ ನಾರ್ಥ್’ಈಸ್ಟ್‌ ಯುನೈಟೆಡ್‌ ವಿರುದ್ಧ ಸೆಮಿಫೈನಲ್‌ನ ಮೊದಲ ಚರಣದಲ್ಲಿ 1-2 ಗೋಲುಗಳಿಂದ ಸೋತು ಹಿನ್ನಡೆ ಅನುಭವಿಸಿತ್ತು. ಆದರೆ ತವರಿನಲ್ಲಿ ನಡೆದ 2ನೇ ಚರಣದ ಪಂದ್ಯದಲ್ಲಿ 3-0 ಗೋಲುಗಳಿಂದ ಜಯಿಸಿ ಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿತು.

ISL ಫೈನಲ್‌: BFCಗೆ ಗೋವಾ ಎಫ್‌ಸಿ ಎದುರಾಳಿ

ಮತ್ತೊಂದೆಡೆ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಸೆಮೀಸ್‌ ಮೊದಲ ಚರಣದ ಪಂದ್ಯದಲ್ಲಿ 5-0 ಗೋಲುಗಳಿಂದ ಜಯಿಸಿದ್ದ ಗೋವಾ ಎಫ್‌ಸಿ, 2ನೇ ಚರಣದ ಪಂದ್ಯದಲ್ಲಿ 0-1 ಗೋಲಿನಿಂದ ಪರಾಭವಗೊಂಡಿತು. ಆದರೆ ಒಟ್ಟಾರೆ 5-1 ಗೋಲುಗಳ ವ್ಯತ್ಯಾಸದೊಂದಿಗೆ ಫೈನಲ್‌ ಟಿಕೆಟ್‌ ಗಳಿಸಿತು.

ಎರಡೂ ತಂಡಗಳು 2ನೇ ಬಾರಿಗೆ ಫೈನಲ್‌ ಪ್ರವೇಶಿಸಿವೆ. 2015ರಲ್ಲಿ ಗೋವಾ ಎಫ್‌ಸಿ, ಫೈನಲ್‌ನಲ್ಲಿ ಸೋಲುಂಡು ರನ್ನರ್‌-ಅಪ್‌ ಪ್ರಶಸ್ತಿ ಪಡೆದಿತ್ತು. 2017-18ರ ಆವೃತ್ತಿಯಲ್ಲಿ ಬೆಂಗಳೂರು ತಂಡ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ವಿಶೇಷವೆಂದರೆ ಎರಡೂ ತಂಡಗಳು ಫೈನಲ್‌ನಲ್ಲಿ ಚೆನ್ನೈಯನ್‌ ಎಫ್‌ಸಿ ವಿರುದ್ಧ ಸೋಲುಂಡಿದ್ದವು.

ಬಿಎಫ್‌ಸಿ ಪರವಿದೆ ಇತಿಹಾಸ: ಗೋವಾ ಎಫ್‌ಸಿ ವಿರುದ್ಧ ಬಿಎಫ್‌ಸಿ ಉತ್ತಮ ದಾಖಲೆ ಹೊಂದಿದೆ. ಈ ಆವೃತ್ತಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಬೆಂಗಳೂರು ತಂಡ ಜಯಭೇರಿ ಬಾರಿಸಿತ್ತು. ಟೂರ್ನಿಯಲ್ಲಿ ಒಟ್ಟು 4 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಬಿಎಫ್‌ಸಿ 3 ಪಂದ್ಯಗಳಲ್ಲಿ ಗೆದ್ದರೆ, ಗೋವಾ 1ರಲ್ಲಿ ಮಾತ್ರ ಜಯ ಕಂಡಿದೆ.

ಚೆಟ್ರಿ, ಮಿಕು ಮೇಲೆ ನಿರೀಕ್ಷೆ: ಬೆಂಗಳೂರು ಎಫ್‌ಸಿ ಉತ್ತಮ ಲಯದಲ್ಲಿದ್ದು, ತಂಡ ಗೋಲುಗಳಿಗಾಗಿ ಇಬ್ಬರು ತಾರಾ ಆಟಗಾರರಾದ ನಾಯಕ ಸುನಿಲ್‌ ಚೆಟ್ರಿ ಹಾಗೂ ಗೋಲ್‌ ಮಷಿನ್‌ ಮಿಕು ಮೇಲೆ ಹೆಚ್ಚಾಗಿ ಅವಲಂಬಿತಗೊಂಡಿದೆ. ಯುವ ಆಟಗಾರ ಉದಾಂತ ಸಿಂಗ್‌ ಮೇಲೂ ತಂಡ ನಿರೀಕ್ಷೆ ಇರಿಸಿದೆ. ಉದಾಂತ ಈ ಆವೃತ್ತಿಯಲ್ಲಿ 5 ಗೋಲುಗಳನ್ನು ಬಾರಿಸಿದ್ದಾರೆ. ತಂಡ ಬಲಿಷ್ಠ ಮಿಡ್‌ಫೀಲ್ಡ್‌ ಹಾಗೂ ಡಿಫೆಂಡರ್‌ಗಳನ್ನು ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ತಂಡದ ಗೋಲ್‌ ಕೀಪರ್‌ ಗುರ್‌ಪ್ರೀತ್‌ ಸಿಂಗ್‌ ಸಂಧು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಗುರ್‌ಪ್ರೀತ್‌ ಈ ಆವೃತ್ತಿಯಲ್ಲಿ ಒಟ್ಟು 59 ಗೋಲುಗಳನ್ನು ತಡೆದಿದ್ದಾರೆ. ಗೋವಾ ವಿರುದ್ಧವೂ ಅವರು ಕ್ಲೀನ್‌ ಶೀಟ್‌ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಕೊರೊಮಿನಾಸ್‌ ಪ್ರಮುಖ ಅಸ್ತ್ರ: ಬಿಎಫ್‌ಸಿಯ ಗೋಡೆ ಗುರ್‌ಪ್ರೀತ್‌ ಹಾಗೂ ಡಿಫೆಂಡರ್‌ಗಳಿಗೆ 36 ವರ್ಷದ ಸ್ಪೇನ್‌ ಆಟಗಾರ ಫೆರ್ರಾನ್‌ ಕೊರೊಮಿನಾಸ್‌ ಆತಂಕ ಮೂಡಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರು 16 ಗೋಲುಗಳನ್ನು ಬಾರಿಸಿದ್ದು, ಗರಿಷ್ಠ ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜತೆಗೆ ತಂಡದ 7 ಗೋಲುಗಳಿಗೆ ಅವರಿಗೆ ಸಹಕಾರ ನೀಡಿದ್ದಾರೆ. ಅವರೊಂದಿಗೆ ಎಡು ಬೆಡಿಯಾ ಸಹ ಗೋವಾದ ಪ್ರಮುಖ ಅಸ್ತ್ರ ಎನಿಸಿದ್ದಾರೆ. ಬೆಡಿಯಾ 7 ಗೋಲು ಹಾಗೂ 6 ಗೋಲುಗಳಿಗೆ ಸಹಕಾರ ನೀಡಿದ್ದಾರೆ. ಈ ಜೋಡಿ ತಮ್ಮ ದಿನದಂದು ಬಿಎಫ್‌ಸಿಯ ಬಲಿಷ್ಠ ರಕ್ಷಣಾ ಪಡೆಯನ್ನು ಛಿದ್ರಗೊಳಿಸುವ ಸಾಮರ್ಥ್ಯ ಹೊಂದಿದೆ. ಎರಡು ಬಲಿಷ್ಠ ತಂಡಗಳ ನಡುವೆ ಸ್ಪರ್ಧೆ ಏರ್ಪಡಲಿದ್ದು, ಭಾರೀ ಪೈಪೋಟಿ ನಿರೀಕ್ಷೆ ಮಾಡಬಹುದಾಗಿದೆ.

ಫುಟ್ಬಾಲ್‌ನಲ್ಲೂ ಬೆಂಗ್ಳೂರಿಗೆ ಕಪ್‌?

ಈ ವರ್ಷ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್‌ ಲೀಗ್‌ಗಳಲ್ಲಿ ಬೆಂಗಳೂರು ತಂಡ ಪ್ರಶಸ್ತಿ ಜಯಿಸಿದೆ. ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಚಾಂಪಿಯನ್‌ ಆದರೆ, ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಬೆಂಗಳೂರು ರಾರ‍ಯಪ್ಟರ್ಸ್ ತಂಡ ಪ್ರಶಸ್ತಿ ಜಯಿಸಿತ್ತು. ಇದೀಗ ಬಿಎಫ್‌ಸಿ ಸಹ ಚಾಂಪಿಯನ್‌ ಆಗಿ ಬೆಂಗಳೂರಿಗೆ ಮತ್ತೊಂದು ಪ್ರಶಸ್ತಿ ತಂದುಕೊಡಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಒಟ್ಟು ಮುಖಾಮುಖಿ: 04

ಬಿಎಫ್‌ಸಿ: 03

ಗೋವಾ: 01

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1