2036ರ ಒಲಿಂಪಿಕ್ಸ್‌ನಲ್ಲಿ ಭಾರತವು ಪದಕ ಪಟ್ಟಿಯಲ್ಲಿ ಅಗ್ರ 5 ಸ್ಥಾನ ಪಡೆಯುವ ಗುರಿ ಹೊಂದಿದೆ. 3000 ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತಿದ್ದು, ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ನವದೆಹಲಿ: 2036ರ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಅಗ್ರ-5 ಸ್ಥಾನ ಪಡೆಯುವುದು ಭಾರತದ ಗುರಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

21ನೇ ವಿಶ್ವ ಪೊಲೀಸ್‌ ಹಾಗೂ ಫೈರ್‌ ಗೇಮ್ಸ್‌ನಲ್ಲಿ ಪಾಲ್ಗೊಂಡ ಭಾರತದ ಕ್ರೀಡಾಪಟುಗಳನ್ನು ಸನ್ಮಾನ ಮಾಡಿ ಅವರು ಮಾತನಾಡಿದರು. ‘2036ರ ಒಲಿಂಪಿಕ್ಸ್‌ ಆಯೋಜನೆಗೆ ಭಾರತ ಬಿಡ್‌ ಸಲ್ಲಿಸುತ್ತಿದೆ.

ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 2036ರ ಕ್ರೀಡಾಕೂಟಕ್ಕಾಗಿ ಟಾಪ್ಸ್‌(ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌) ಯೋಜನೆ ಮೂಲಕ 3000 ಅಥ್ಲೀಟ್‌ಗಳನ್ನು ಗುರುತಿಸಲಾಗಿದ್ದು, ಅವರಿಗೆ ಪ್ರತಿ ತಿಂಗಳು 50 ಸಾವಿರ ರು. ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

Scroll to load tweet…

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತದ ಎಲ್ಲಾ ಹಳ್ಳಿಗಳಿಗೂ ಕ್ರೀಡಾಸೌಕರ್ಯ ಒದಗಿಸಲು ಪಣತೊಟ್ಟಿದೆ. ಈ ಮೂಲಕ ಭಾರತವನ್ನು ವಿಶ್ವದಲ್ಲೇ ಶ್ರೇಷ್ಠ ಕ್ರೀಡಾ ದೇಶವನ್ನಾಗಿ ರೂಪಿಸುವುದು ನಮ್ಮ ಗುರಿ ಎಂದರು.

ಕಳೆದ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ಒಂದು ಬೆಳ್ಳಿ ಹಾಗೂ 5 ಕಂಚಿನ ಪದಕ ಸಹಿತ ಒಟ್ಟು 6 ಪದಕಗಳನ್ನು ಗೆಲ್ಲಲಷ್ಟೇ ಶಕ್ತವಾಯಿತು. ಭಾರತ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಜಯಿಸಿದ್ದೇ ಶ್ರೇಷ್ಠ ಸಾಧನೆ ಎನಿಸಿಕೊಂಡಿತು.

ಜೂ. ಏಷ್ಯಾ ಬ್ಯಾಡ್ಮಿಂಟನ್ : ಭಾರತ ತಂಡ ಶುಭಾರಂಭ

ಸೊಲೊ(ಇಂಡೋನೆಷ್ಯಾ): ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್‌ ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶುಭಾರಂಭ ಮಾಡಿದೆ. ಶುಕ್ರವಾರ ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 110- 69 ಅಂಕಗಳ ಅಂತರದಲ್ಲಿ ಮಣಿಸಿತು. ಮಿಶ್ರ ಡಬಲ್ಸ್‌ನಲ್ಲಿ ವಿಷ್ಣು ಕೋಡೆ ಮತ್ತು ರೇಷಿಕಾ ಯು ಜೋಡಿಯು ಕೆನೆತ್‌ ಅರುಗ್ಗೋಡ ಮತ್ತು ಇಸುರಿ ಅಟ್ಟನಾಯಕೆ ಅವರನ್ನು 11 -5 ಅಂತರದಿಂದ ಮಣಿಸಿತು.

ಗಾಯತ್ರಿ ಮತ್ತು ಮಾನಸಾ ರಾವತ್‌ ಅಟ್ಟನಾಯಕೆ ಮತ್ತು ಸಿತುಮಿ ಡಿ ಸಿಲ್ವಾ ವಿರುದ್ಧ 22-14 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಮುನ್ನಡೆ ಹೆಚ್ಚಿಸಿದರು. ಇನ್ನು ವಿಶ್ವದ ನಂ.1 ಕಿರಿಯ ಆಟಗಾರ್ತಿ ತಾನ್ವಿ ಶರ್ಮಾ, ಸಿಥುಲಿ ರಣಸಿಂಘೆ ವಿರುದ್ಧ 33-21 ಅಂತರದಲ್ಲಿ ಗೆದ್ದು 110-69 ಅಂಕಗಳಲ್ಲಿ ಮುನ್ನಡೆ ಸಾಧಿಸಲು ನೆರವಾದರು. ಭಾರತ ತಂಡ ಶನಿವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ.

ಫ್ರೀಸ್ಟೈಲ್‌ ಚೆಸ್‌ನಲ್ಲಿ ಭಾರತದ ಅರ್ಜುನ್‌ ಸೆಮಿಫೈನಲ್‌ಗೆ ಲಗ್ಗೆ

ಲಾಸ್‌ ವೇಗಾಸ್‌: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್‌ ಎರಿಗೈಸಿ ಲಾಸ್‌ ವೇಗಾಸ್‌ ಫ್ರೀಸ್ಟೈಲ್‌ ಗ್ರ್ಯಾನ್‌ಸ್ಲಾಂ ಚೆಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಭಾರತದ ಮತ್ತೋರ್ವ ಚೆಸ್‌ ತಾರೆ ಆರ್‌.ಪ್ರಜ್ಞಾನಂದ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದ್ದಾರೆ.ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಅರ್ಜುನ್‌ ಅವರು ಉಜ್ಬೇಕಿಸ್ತಾನದ ಗ್ರ್ಯಾಂಡ್‌ಮಾಸ್ಟರ್‌ ನೊದಿರ್‌ಬೇಕ್‌ ಅಬ್ದುದತ್ತೊರೊವ್‌ ವಿರುದ್ಧ 1.5-0.5 ಅಂತರದಲ್ಲಿ ಜಯಗಳಿಸಿದರು. ಅವರು ಸೆಮಿಫೈನಲ್‌ನಲ್ಲಿ ಅಮೆರಿಕದ ಲೆವೊನ್‌ ಅರೋನಿಯನ್‌ ವಿರುದ್ಧ ಸೆಣಸಾಡಲಿದ್ದಾರೆ. ಇದೇ ವೇಳೆ, ಪ್ರಜ್ಞಾನಂದ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುನಾ ವಿರುದ್ಧ ಸೋತರು.

200 ಮೀ. ಫ್ರೀಸ್ಟೈಲ್‌ ಈಜು: ತಮ್ಮದೇ ದಾಖಲೆ ಮುರಿದ ರಾಜ್ಯದ ಶ್ರೀಹರಿ ನಟರಾಜ್‌

ನವದೆಹಲಿ: ಜರ್ಮನಿಯಲ್ಲಿ ನಡೆಯುತ್ತಿರುವ ಎಫ್‌ಐಎಸ್‌ಯು ವಿಶ್ವ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜು ‘ಭಾರತದ ಶ್ರೇಷ್ಠ ಸಮಯ’ ದಾಖಲಿಸಿ, ತಮ್ಮದೇ ಹೆಸರಲ್ಲಿದ್ದ ದಾಖಲೆ ಮುರಿದಿದ್ದಾರೆ.

ಶುಕ್ರವಾರ ನಡೆದ ಪುರುಷರ 200 ಮೀ. ಫ್ರೀಸ್ಟೈಲ್‌ನಲ್ಲಿ 2 ಬಾರಿ ಒಲಿಂಪಿಯನ್‌ ನಟರಾಜ್‌ ಅವರು 1 ನಿಮಿಷ 48.22 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಸೆಮಿಫೈನಲ್‌ ಪ್ರವೇಶಿಸಿದರು. ಈ ಮೂಲಕ ಕಳೆದ ತಿಂಗಳು ಸಿಂಗಾಪುರದಲ್ಲಿ ನಿರ್ಮಿಸಿದ್ದ 1 ನಿಮಿಷ 48.26 ಸೆಕೆಂಡ್‌ಗಳ ದಾಖಲೆ ಮುರಿದರು. ಇನ್ನು, ಬೆನೆಡಿಕ್ಷನ್‌ ರೋಹಿತ್‌ ಪುರುಷರ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ 24 ಸೆಕೆಂಡ್‌ಗಳ ಒಳಗೆ ಗುರಿ ತಲುಪಿದ ಮೊದಲ ಭಾರತೀಯ ಎನಿಸಿಕೊಂಡರು. ಅವರು ಸೆಮಿಫೈನಲ್‌ನಲ್ಲಿ 23.96 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಸೆಮಿಫೈನಲ್‌ ತಲುಪಿದರು.