ಪ್ಯಾರಿಸ್ ಒಲಿಂಪಿಕ್ಸ್ ನಂತರ ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಂ ಮೊದಲ ಬಾರಿಗೆ ಸಿಲೆಸಿಯಾ ಡೈಮಂಡ್ ಲೀಗ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಮುನ್ನ ನೀರಜ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

ಸಿಲೆಸಿಯಾ(ಪೋಲೆಂಡ್‌): ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ಆ.16ರಂದು ಮೊದಲ ಬಾರಿಗೆ ಭಾರತದ ತಾರಾ ಜಾವೆಲಿನ್‌ ಥ್ರೋ ಪಟು, 2 ಬಾರಿ ಒಲಿಂಪಿಕ್‌ ಪದಕ ವಿಜೇತ ನೀರಜ್‌ ಚೋಪ್ರಾ, ಹಾಲಿ ಒಲಿಂಪಿಕ್‌ ಚಾಂಪಿಯನ್‌ ಪಾಕಿಸ್ತಾನದ ಅರ್ಷದ್‌ ನದೀಂ ಮುಖಾಮುಖಿಯಾಗಲಿದ್ದಾರೆ. 

ಈ ಇಬ್ಬರೂ ಪೋಲೆಂಡ್‌ನಮ ಸಿಲೆಸಿಯಾ ಡೈಮಂಡ್‌ ಲೀಗ್‌ನಲ್ಲಿ ಸೆಣಸಲಿದ್ದಾರೆ. ಆ.8, 2024ರಂದು ನಡೆದಿದ್ದ ಪ್ಯಾರಿಸ್‌ ಒಲಿಂಪಿಕ್ಸ್‌ನ ಜಾವೆಲಿನ್‌ ಸ್ಪರ್ಧೆಯಲ್ಲಿ ನದೀಂ 92.97 ಮೀ. ದೂರ ದಾಖಲಿಸಿ ಚಿನ್ನ ಜಯಿಸಿದ್ದರು. 89.45 ಮೀ. ಎಸೆದಿದ್ದ ನೀರಜ್‌ ಬೆಳ್ಳಿಗೆ ತೃಪ್ತಿಪಟ್ಟಿದ್ದರು. ನೀರಜ್‌ ಅತ್ಯುತ್ತಮ ಲಯದಲ್ಲಿದ್ದು, ಸೆಪ್ಟೆಂಬರ್‌ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೂ ಮುನ್ನ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ ಸಿದ್ಧತೆಗೆ ನೀರಜ್‌ಗೆ ಕೇಂದ್ರ ₹19 ಲಕ್ಷ ನೆರವು

ನವದೆಹಲಿ: ಸೆ.13ರಿಂದ ಟೋಕಿಯೋದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಅಥ್ಲೀಟ್‌ಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ, ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯಡಿ ಆರ್ಥಿಕ ನೆರವು ಘೋಷಿಸಿದೆ. ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ, ವಿಶ್ವ ಚಾಂಪಿಯನ್‌ಶಿಪ್‌ಗೆ ಚೆಕ್‌ ಗಣರಾಜ್ಯದ ಪ್ರಾಗ್‌ ಹಾಗೂ ನೈಮ್ಬರ್ಕ್‌ನಲ್ಲಿ 57 ದಿನಗಳ ಕಾಲ ಅಭ್ಯಾಸ ನಡೆಸಲಿದ್ದು, ಅವರಿಗೆ ಕ್ರೀಡಾ ಸಚಿವಾಲಯ 19 ಲಕ್ಷ ರು. ಆರ್ಥಿಕ ನೆರವು ಘೋಷಿಸಿದೆ.

ಅಥ್ಲೆಟಿಕ್ಸ್‌ಗೆ ಮರಳಿದ ಭಾರತದ ಶ್ರೀಶಂಕರ್‌

ಪುಣೆ: ಮಂಡಿ ಗಾಯಕ್ಕೆ ತುತ್ತಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದ ಭಾರತದ ಲಾಂಗ್‌ಜಂಪ್‌ ಪಟು ಶ್ರೀಶಂಕರ್‌ ಮುರಳಿ ಅಥ್ಲೆಟಿಕ್ಸ್‌ಗೆ ವಾಪಸಾಗಿದ್ದಾರೆ. ಶನಿವಾರ ಇಲ್ಲಿ ಮಹಾರಾಷ್ಟ್ರ ಅಥ್ಲೆಟಿಕ್ಸ್‌ ಸಂಸ್ಥೆ ಸಹಯೋಗದಲ್ಲಿ ನಡೆದ ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಕೂಟದಲ್ಲಿ ಶ್ರೀಶಂಕರ್‌ 8.05 ಮೀ. ನೆಗೆದು ಮೊದಲ ಸ್ಥಾನ ಗಳಿಸಿದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ಒಲಿಂಪಿಕ್ಸ್‌ ಸಿದ್ಧತೆ ವೇಳೆ ಗಾಯಗೊಂಡಿದ್ದ ಶ್ರೀಶಂಕರ್‌ ಆ ಬಳಿಕ ಕತಾರ್‌ನ ದೋಹಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಆರ್ಚರಿ ವಿಶ್ವಕಪ್‌: 2 ಪದಕ ಗೆದ್ದ ಭಾರತ

ಮ್ಯಾಡ್ರಿಡ್‌: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ 4ನೇ ಹಂತದಲ್ಲಿ ಶನಿವಾರ ಭಾರತ ಒಂದು ಬೆಳ್ಳಿ ಹಾಗೂ ಒಂದು ಕಂಚು ಜಯಿಸಿದೆ. ಕಾಂಪೌಂಡ್‌ ವಿಭಾಗದಲ್ಲಿ ಜ್ಯೋತಿ ಸುರೇಖಾ, ಪರ್ನೀತ್‌ ಕೌರ್‌ ಹಾಗೂ 16 ವರ್ಷದ ಪ್ರೀತಿಕಾ ಪ್ರದೀಪ್‌ ಅವರನ್ನೊಳಗೊಂಡ ಮಹಿಳಾ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಫೈನಲ್‌ನಲ್ಲಿ ಚೈನೀಸ್‌ ತೈಪೆ ವಿರುದ್ಧ 225-227 ಅಂಕಗಳಲ್ಲಿ ಸೋಲುಂಡಿತು. ಇನ್ನು, ಮಿಶ್ರ ತಂಡ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ಹಾಗೂ ರಿಷಭ್‌ ಯಾದವ್‌ ಕಂಚು ಪಡೆದರು. ಎಲ್‌ ಸಾಲ್ವೊಡೊರ್‌ ವಿರುದ್ಧ 156-153ರಲ್ಲಿ ಜಯಿಸಿತು. ಶುಕ್ರವಾರ ಸೆಮೀಸ್‌ನಲ್ಲಿ ಭಾರತೀಯ ಜೋಡಿ ನೆದರ್‌ಲೆಂಡ್ಸ್‌ ವಿರುದ್ಧ ಸೋತಿತ್ತು.

ಭದ್ರತೆ ಪರಿಶೀಲನೆ ಬಳಿಕ ಭಾರತಕ್ಕೆ ಪಾಕ್ ಹಾಕಿ ತಂಡ

ಕರಾಚಿ: ಈ ವರ್ಷ ಭಾರತದಲ್ಲಿ ನಡೆಯಲಿರುವ ಏಷ್ಯಾ ಕಪ್ ಮತ್ತು ಕಿರಿಯರ ವಿಶ್ವಕಪ್‌ಗೆ ತನ್ನ ಹಾಕಿ ತಂಡಗಳನ್ನು ಕಳುಹಿಸುವ ಮೊದಲು, ಭಾರತದಲ್ಲಿನ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಲು ಪಾಕಿಸ್ತಾನ ನಿರ್ಧರಿಸಿದೆ. ಇತ್ತೀಚೆಗಷ್ಟೇ ಎರಡೂ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ಇದ್ದ ಕಾರಣ, ತನ್ನ ಆಟಗಾರರನ್ನು ಅಪಾಯಕ್ಕೆ ದೂಡಲು ಇಚ್ಚಿಸುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆ.27ರಿಂದ ಸೆ.7ರ ವರೆಗೂ ಬಿಹಾರದ ರಾಜ್‌ಗಿರ್‌ನಲ್ಲಿ ಏಷ್ಯಾಕಪ್‌, ನ.28ರಿಂದ ಡಿ.10ರ ವರೆಗೂ ಚೆನ್ನೈ, ಮಧುರೈನಲ್ಲಿ ಕಿರಿಯ ಪುರುಷರ ಹಾಕಿ ವಿಶ್ವಕಪ್‌ ನಡೆಯಲಿದೆ.