ಅಬುದಾಬಿ[ಜ.14]: ಎಎಫ್‌ಸಿ ಏಷ್ಯನ್‌ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯುವ ಕನಸು ಕಾಣುತ್ತಿರುವ ಭಾರತ ತಂಡ, ಸೋಮವಾರ ತನ್ನ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಬಹರೇನ್ ತಂಡವನ್ನು ಎದುರಿಸಲಿದೆ.

ಈ ಪಂದ್ಯದಲ್ಲಿ ಭಾರತ ಗೆಲ್ಲಬೇಕು ಅಥವಾ ಕನಿಷ್ಠ ಪಕ್ಷ ಡ್ರಾಗೊಳಿಸಿಕೊಳ್ಳಬೇಕಿದೆ. ಒಂದು ವೇಳೆ ಸೋತರೂ ಯುಎಇ-ಥಾಯ್ಲೆಂಡ್ ನಡುವಿನ ಪಂದ್ಯದ ಫಲಿತಾಂಶದ ಆಧಾರದ ಮೇಲೆ ಭಾರತ ನಾಕೌಟ್ ಹಂತಕ್ಕೇರುವ ಸಾಧ್ಯತೆಗಳಿವೆ. ಒಂದು ವೇಳೆ ಭಾರತ ಸೋತರೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುತ್ತದೆ. ಟೂರ್ನಿಯ ನಿಯಮದಂತೆ 6 ಗುಂಪುಗಳಲ್ಲಿ ಉತ್ತಮ ಗೋಲು ಅಂತರದೊಂದಿಗೆ 3ನೇ ಸ್ಥಾನ ಪಡೆಯುವ ಅಗ್ರ 4 ತಂಡಗಳಿಗೆ ನಾಕೌಟ್ ಹಂತಕ್ಕೇರುವ ಅವಕಾಶವಿದೆ. ಸದ್ಯ 3 ಅಂಕಗಳೊಂದಿಗೆ ಭಾರತ ‘ಎ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ.

ಥಾಯ್ಲೆಂಡ್ ವಿರುದ್ಧ 4-1 ಗೋಲುಗಳಲ್ಲಿ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ, 2ನೇ ಪಂದ್ಯದಲ್ಲಿ ಆತಿಥೇಯ ಯುಎಇ ವಿರುದ್ಧ 0-2ರಲ್ಲಿ ಸೋಲುಂಡು ಆಘಾತಕ್ಕೀಡಾಗಿತ್ತು. ಆದರೆ ಪಂದ್ಯದಲ್ಲಿ ಭಾರತ 2 ಬಾರಿ ಗೋಲು ಬಾರಿಸುವ ಅವಕಾಶದಿಂದ ವಂಚಿತಗೊಂಡಿತ್ತು. ಜತೆಗೆ ತಂಡದ ಪ್ರದರ್ಶನ ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಸುಧಾರಿಸಿದೆ ಎನ್ನುವುದು ಸಾಬೀತಾಗಿತ್ತು. ಹೀಗಾಗಿ, ಭಾರತ ನಾಕೌಟ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ.

1964ರಲ್ಲಿ ಇಸ್ರೇಲ್‌ನಲ್ಲಿ ನಡೆದಿದ್ದ ಏಷ್ಯನ್ ಕಪ್‌ನಲ್ಲಿ ಭಾರತ ರನ್ನರ್-ಅಪ್ ಆಗಿತ್ತು. ಆ ಟೂರ್ನಿಯಲ್ಲಿ ಕೇವಲ 4 ತಂಡಗಳು ಮಾತ್ರ ಪಾಲ್ಗೊಂಡಿದ್ದವು. ನಾಕೌಟ್ ಮಾದರಿಯೇ ಟೂರ್ನಿಯಲ್ಲಿ ಇರಲಿಲ್ಲ. ಬಳಿಕ 1984 ಹಾಗೂ 2011ರಲ್ಲಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆದಿದ್ದ ಭಾರತ, ಎರಡೂ ಆವೃತ್ತಿಗಳಲ್ಲಿ ಒಂದೂ ಗೆಲುವು ಕಾಣದೆ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿತ್ತು. ಈ ಬಾರಿ ನಾಕೌಟ್ ಪ್ರವೇಶಿಸುವ ವಿಶ್ವಾಸದಲ್ಲಿರುವ ಭಾರತ, ಫಿಫಾ ರ‌್ಯಾಂಕಿಂಗ್‌ನಲ್ಲಿ 113ನೇ ಸ್ಥಾನದಲ್ಲಿರುವ ಬಹರೇನ್ ವಿರುದ್ಧ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿದೆ. ಭಾರತ ಈವರೆಗೂ ಬಹರೇನ್ ವಿರುದ್ಧ ಆಡಿರುವ 7 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಉಳಿದ 6ರಲ್ಲಿ 5 ಬಹರೇನ್ ಪಾಲಾದರೆ 1 ಪಂದ್ಯ ಡ್ರಾಗೊಂಡಿತ್ತು. ಭಾರತ ತಂಡ ಗೋಲು ಗಳಿಸಲು ಸಂಪೂರ್ಣವಾಗಿ ಚೆಟ್ರಿ ಒಬ್ಬರನ್ನೇ ನೆಚ್ಚಿಕೊಂಡಿರುವುದು ಮುಳುವಾಗುವ ಸಾಧ್ಯತೆ ಇದೆ. ಅನುಭವಿ ಡಿಫೆಂಡರ್'ಗಳಾದ ಸಂದೇಶ್ ಹಾಗೂ ಅನಾಸ್ ಎಡಥೋಡಿಕಾ ನಡುವೆ ಹೊಂದಾಣಿಕೆ ಕೊರತೆ ಇದ್ದು, ಈ ಸಮಸ್ಯೆಗೆ ಭಾರತ ಪರಿಹಾರ ಕಂಡುಕೊಳ್ಳಬೇಕಿದೆ.