ಭಾರತ ಮಹಿಳಾ ಕಬಡ್ಡಿ ತಂಡವು 2ನೇ ಆವೃತ್ತಿಯ ವಿಶ್ವಕಪ್ ಫೈನಲ್‌ನಲ್ಲಿ ಚೈನೀಸ್‌ ತೈಪೆ ತಂಡವನ್ನು 35-28 ಅಂಕಗಳಿಂದ ಮಣಿಸಿ ಚಾಂಪಿಯನ್ ಆಗಿದೆ. 13 ವರ್ಷಗಳ ಬಳಿಕ ನಡೆದ ಟೂರ್ನಿಯಲ್ಲಿ ಭಾರತ ಅಜೇಯವಾಗಿ ಉಳಿದು ಟ್ರೋಫಿ ಗೆದ್ದುಕೊಂಡಿತು. ಕರ್ನಾಟಕದ ತೇಜಸ್ವಿನಿ ಬಾಯಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು ವಿಶೇಷ.

ಢಾಕಾ: ಭಾರತ ಮಹಿಳಾ ಕಬಡ್ಡಿ ತಂಡ ವಿಶ್ವಕಪ್‌ ಟ್ರೋಫಿಗೆ ಮುತ್ತಿಟ್ಟಿದೆ. ಸೋಮವಾರ ನಡೆದ 2ನೇ ಆವೃತ್ತಿಯ ಫೈನಲ್‌ನಲ್ಲಿ ಚೈನೀಸ್‌ ತೈಪೆ ವಿರುದ್ಧ 35-28 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

11 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದ ಭಾರತ, ನಿರೀಕ್ಷೆಯಂತೆಯೇ ಫೈನಲ್‌ನಲ್ಲೂ ಗೆಲುವು ಸಾಧಿಸಿತು. ಆ ಮೂಲಕ 13 ವರ್ಷಗಳ ಬಳಿಕ ನಡೆದ ಟೂರ್ನಿಯಲ್ಲಿ ಟ್ರೋಫಿ ತನ್ನದಾಗಿಸಿಕೊಂಡಿತು. ಮೊದಲ ಆವೃತ್ತಿಯು 2012ರಲ್ಲಿ ಭಾರತದಲ್ಲೇ ನಡೆದಿತ್ತು.

ಸೆಮಿಫೈನಲ್‌ನಲ್ಲಿ ಭಾರತ 33-21ರಲ್ಲಿ ಇರಾನ್‌ ವಿರುದ್ಧ ಗೆದ್ದಿತ್ತು. ಮತ್ತೊಂದೆಡೆ ಚೈನೀಸ್‌ ತೈಪೆ 25-18ರಲ್ಲಿ ಆತಿಥೇಯ ಬಾಂಗ್ಲಾದೇಶವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು.

ಮೋದಿ, ಶಾ ಅಭಿನಂದನೆ

ವಿಶ್ವಕಪ್‌ ವಿಜೇತ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಭಿನಂದಿಸಿದ್ದಾರೆ. ಇಬ್ಬರೂ ಸಾಮಾಜಿಕ ತಾಣ ‘ಎಕ್ಸ್‌’ನಲ್ಲಿ ತಂಡದ ಸಾಧನೆಯನ್ನು ಕೊಂಡಾಡಿದ್ದಾರೆ.

Scroll to load tweet…

ಭಾರತ ತಂಡಕ್ಕೆ ರಾಜ್ಯದ ರಾಜ್ಯದ ತೇಜಸ್ವಿನಿ ಕೋಚ್‌

ವಿಶ್ವಕಪ್‌ ವಿಜೇತ ತಂಡಕ್ಕೆ ಮಾರ್ಗದರ್ಶನ ನೀಡಿದ್ದು ಕರ್ನಾಟಕದ ತೇಜಸ್ವಿನಿ ಬಾಯಿ. ಅರ್ಜುನ ಪ್ರಶಸ್ತಿ ವಿಜೇತೆ ತೇಜಸ್ವಿನಿ ಹಲವು ವರ್ಷಗಳ ಕಾಲ ಭಾರತ ತಂಡದ ನಾಯಕಿಯಾಗಿದ್ದರು. ಅವರ ನಾಯಕತ್ವದಲ್ಲಿ ಭಾರತ ತಂಡ 2010ರ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿತ್ತು. ಕೆಲ ವರ್ಷಗಳ ಹಿಂದೆ ಅವರನ್ನು ಭಾರತ ತಂಡದ ಕೋಚ್‌ ಆಗಿ ನೇಮಿಸಲಾಗಿತ್ತು. ಇನ್ನು ತಂಡದಲ್ಲಿ ಕರ್ನಾಟಕದ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಸಹ ಇದ್ದರು.