ಅವಿರೋಧವಾಗಿ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾಗ್ತಾರಾ ವೆಂಕಟೇಶ್ ಪ್ರಸಾದ್? , ಮಾಜಿ ಕ್ರಿಕೇಟರ್ ವೆಂಕಟೇಶ್ ಪ್ರಸಾದ್ ಬಣ ಹಾಗೂ ಬ್ರಿಜೇಶ್ ಬಣದ ನಡುವೆ ತೀವ್ರ ಪೈಪೋಟಿ ಎರ್ಪಟ್ಟಿತ್ತು. ಆದರೆ ಭಾರಿ ಟ್ವಿಸ್ಟ್ ಮೂಲಕ ಎಲ್ಲವೂ ಬದಲಾಗಿದೆ.

ಬೆಂಗಳೂರು (ನ.24) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೆಂಕಟೇಶ್ ಪ್ರಸಾದ್ ವಿರುದ್ಧ ಕೆಎಸ್‌ಸಿಎ ಮಾಜಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಬಣದ ಶಾಂತಕುಮಾರ್ ಸ್ಪರ್ಧಿಸಿದ್ದರು. ಆದರೆ ತಾಂತ್ರಿಕ ದೋಷಗಳ ಕಾರಣ ಶಾಂತಕುಮಾರ್ ನಾಮಪತ್ರ ತಿರಸ್ಕೃತಗೊಂಡ ಹಿನ್ನಲೆಯಲ್ಲಿ ವೆಂಕಟೇಶ್ ಪ್ರಸಾದ್ ಯಾವುದೇ ಅಡೆ ತಡೇ ಇಲ್ಲದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 7ಕ್ಕೆ ಚುನಾವಣೆ

ಆರ್‌ಸಿಬಿ ಕಾಲ್ತುಳಿತ ಪ್ರಕರಣದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದರು. ಹೀಗಾಗಿ ಚುನಾವಣೆ ಎದುರಾಗಿತ್ತು. ಆದರೆ ಹೈಕೋರ್ಟ್ ಸೂಚನೆಯಂತೆ ಡಿಸೆಂಬರ್ 7ಕ್ಕೆ ಚುನಾವಣೆ ನಡೆಸುವಂತೆ ಸೂಚನೆ ನೀಡಿತ್ತು. ಇದರಂತೆ ಡಿಸೆಂಬರ್ 7ಕ್ಕೆ ಚುನಾವಣೆ ನಡೆಯಲಿದೆ. ಆದರೆ ನಾಮಪತ್ರ ಸಲ್ಲಿಕೆ ಅಂತ್ಯಗೊಂಡು ಪರಿಶೀಲನೆ ವೇಳೆ ಶಾಂತಕುಮಾರ್ ನಾಮಪತ್ರ ತಿರಸ್ಕೃತಗೊಂಡಿದೆ. ಇದು ಬ್ರಿಜೇಶ್ ಪಟೇಲ್ ಬಣಕ್ಕೆ ತೀವ್ರ ನಿರಾಸೆಯಾಗಿದೆ.

ವೆಂಕಟೇಶ್ ಪ್ರಸಾದ್‌ಗೆ ಅನಿಲ್ ಕುಂಬ್ಳೆ ಸೇರಿ ದಿಗ್ಗಜರ ಬೆಂಬಲ

ವೆಂಕಟೇಶ್ ಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕಣಕ್ಕಿಳಿಯುತ್ತಿದ್ದಂತೆ ದಿಗ್ಗಜ ಕ್ರಿಕೆಟಿಗರು ವೆಂಕಟೇಶ್ ಪ್ರಸಾದ್‌ಗೆ ಬೆಂಬಲ ನೀಡಿದ್ದರು. ಮಾಜಿ ಕ್ರಿಕೆಟಿಗ, ಮಾಜಿ ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸೇರಿದಂತೆ ಹಲವರು ಬೆಂಬಲ ನೀಡಿದ್ದರು. ವೆಂಕಟೇಶ್ ಪ್ರಸಾದ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವೈಭವ ಮರುಕಳಿಸುತ್ತಾರೆ ಎಂದು ಅನಿಲ್ ಕುಂಬ್ಳೆ ಹೇಳಿದ್ದರು.