ಟೀಂ ಇಂಡಿಯಾ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಕೇವಲ 30 ಟೆಸ್ಟ್ ಪಂದ್ಯಗಳನ್ನು ಆಡಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ.
ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 30ನೇ ಪಂದ್ಯವನ್ನು ಆಡಿದರು. ಆದರೆ ಈ 30 ಟೆಸ್ಟ್ಗಳು ಬೇರೆ ಬೇರೆ ಕ್ರೀಡಾಂಗಣದಲ್ಲಿ ಆಡುವ ಮೂಲಕ ಅಪರೂಪದ ಹಾಗೂ ವಿನೂತನ ದಾಖಲೆಯನ್ನು ತಮ್ಮ ಹೆಸರಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಭಾರತ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸಂಜಯ್ ಮಂಜ್ರೇಕರ್ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
30 ಪಂದ್ಯ ವಿಭಿನ್ನ ಕ್ರೀಡಾಂಗಣ!
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತ್ಯಧಿಕ ಟೆಸ್ಟ್‌ಗಳನ್ನು ಬೇರೆ ಬೇರೆ ವೇದಿಕೆಗಳಲ್ಲಿ ಆಡಿದ ದಾಖಲೆ ಸಂಜಯ್ ಮಂಜ್ರೇಕರ್ ಅವರ ಹೆಸರಿನಲ್ಲಿದೆ. ಇವರು ಸತತವಾಗಿ 33 ಟೆಸ್ಟ್‌ಗಳನ್ನು ಬೇರೆ ಬೇರೆ ವೇದಿಕೆಗಳಲ್ಲಿ ಆಡಿದ್ದರು. ಸಚಿನ್ ತೆಂಡೂಲ್ಕರ್ ಅವರು ತಮ್ಮ ಮೊದಲ 32 ಟೆಸ್ಟ್‌ಗಳಲ್ಲಿ ಬೇರೆ ಬೇರೆ ಮೈದಾನಗಳಲ್ಲಿ ಆಡಿದ್ದರು.
ಈಗ ಯಶಸ್ವಿ ಜೈಸ್ವಾಲ್ 30 ಟೆಸ್ಟ್‌ಗಳಲ್ಲಿ ಈ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಜೈಸ್ವಾಲ್ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಟೆಸ್ಟ್ಗಳು ವಿಭಿನ್ನ ಕ್ರೀಡಾಂಗಣದಲ್ಲಿ ಆಡಿರುವುದು ವಿಶೇಷವಾಗಿದೆ. ಒಂದು ಟೆಸ್ಟ್ ಆಡಿದ ಕ್ರೀಡಾಂಗಣದಲ್ಲಿಯೇ ಮತ್ತೊಮ್ಮೆ ಆಡದೆ ಇರೋದು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಅಪರೂಪದ ಘಟನೆ ಎಂದು ಹೇಳಬಹುದಾಗಿದೆ.
ಟೆಸ್ಟ್‌ನಲ್ಲಿ ಮೂರು ಬಾರಿ ಜೈಸ್ವಾಲ್ ರನೌಟ್!
ಯಶಸ್ವಿ ಜೈಸ್ವಾಲ್ ಇದುವರೆಗೂ ಆಡಿದ 30 ಪಂದ್ಯಗಳಲ್ಲಿ 55 ಇನ್ನಿಂಗ್ಸ್ ಗಳಲ್ಲಿ 48.70 ಸರಾಸರಿಯಲ್ಲಿ 2,567 ರನ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ 7 ಶತಕ, 13 ಅರ್ಧ ಶತಕ ಸೇರಿದೆ. ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 214 ರನ್ ಗಳ ವೈಯುಕ್ತಿಕ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ವಿಶೇಷ ಎಂದರೆ ಜೈಸ್ವಾಲ್ ಟೆಸ್ಟ್‌ನಲ್ಲಿ ಎರಡು ದ್ವಿಶತಕಗಳನ್ನು ಸಿಡಿಸಿದ್ದು, ಆದರೆ ಗಾಲೆ ಪಂದ್ಯದಲ್ಲಿ ಅವರಿಗೆ ನಿರಾಸೆ ಎದುರಾಗಿತ್ತು. 32 ರನ್ ಗಳಿಸಿದ ಸಂದರ್ಭದಲ್ಲಿ ರನ್ ಔಟ್ ಆಗುವ ಮೂಲಕ ಪೆವಿಲಿಯನ್‌ಗೆ ಹಿಂದಿರುಗಿದ್ದಾರೆ. 11ನೇ ಓವರ್ ಅಂತಿಮ ಎಸೆತದಲ್ಲಿ ಕೆಎಲ್ ರಾಹುಲ್ ಸಿಂಗಲ್ ರನ್ ಮಾಡುವ ಪ್ರಯತ್ನ ಮಾಡಿದ್ದರು, ಆದರೆ ಬೌಲರ್ ಕೇಶರ ಅಡ್ಡಿಯಾಗಿ ಬಂದ ಕಾರಣ ಜೈಸ್ವಾಲ್ ಬ್ಯಾಲೆನ್ಸ್ ಮಿಸ್ ಆಗಿ ಜಾರಿ ಬಿದ್ದರು. ಈ ನಡುವೆ ಜೈಸ್ವಾಲ್, ರಾಹುಲ್ ಇಬ್ಬರು ಒಂದೇ ಎಂಡ್‌ನಲ್ಲಿ ನಿಂತಿದ್ದರು. ರಾಹುಲ್ ಮೊದಲಿಗೆ ಕ್ರಿಸ್‌ಗೆ ಬಂದ ಕಾರಣ ಜೈಸ್ವಾಲ್ ಔಟ್ ಆಗಿ ಹಿಂದಿರುಗಿದರು.
ಅಂದಹಾಗೇ, ಟೆಸ್ಟ್‌ನಲ್ಲಿ ಜೈಸ್ವಾಲ್ ರನೌಟ್ ಆಗಿದ್ದು ಇದು ಮೂರನೇ ಬಾರಿ. ಇದಕ್ಕೂ ಮುನ್ನ 2024ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ 82 ರನ್‌ಗಳಿಸಿ ರನೌಟ್ ಆಗಿದ್ದರು. ಕಳೆದ ವರ್ಷ ವೆಸ್ಟ್‌ಇಂಡೀಸ್ ವಿರುದ್ಧ ದೆಹಲಿಯಲ್ಲಿ ನಡೆದ ಟೆಸ್ಟ್‌ನಲ್ಲಿ 175 ರನ್‌ಗಳಿಸಿದ್ದ ಸಂದರ್ಭದಲ್ಲಿ ರನೌಟ್ ಆಗಿದ್ದರು.
ಎರಡನೇ ದಿನದಾಟದ ಆರಂಭಕ್ಕೆ ಮಳೆ ಅಡ್ಡಿ!
ಗಾಲೆ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ಮೊದಲ ದಿನ ಉತ್ತಮ ಪ್ರದರ್ಶನ ನೀಡಿದ್ದಾರೆ. ಕನ್ನಡಿಗ ಪಡಿಕ್ಕಲ್ 134 ಎಸೆತಗಳಲ್ಲಿ ಶತಕ ಸಿಡಿಸಿದರೆ, ಇದರಲ್ಲಿ 09 ಬೌಂಡರಿ, ಒಂದು ಸಿಕ್ಸರ್ ಸೇರಿದೆ. ಮೊದಲ ದಿನದಾಟದ ಅಂತ್ಯಕ್ಕೆ ಪಡಿಕ್ಕಲ್ 131 ರನ್ ಗಳೊಂದಿಗೆ ಅಜೇಯರಾಗಿ ಉಳಿದರೆ, ಕೆಎಲ್ ರಾಹುಲ್ ಕೂಡ ಗಮನ ಸೆಳೆದರು. 77 ರನ್ ಗಳಿಸಿದ್ದ ಸಂದರ್ಭದಲ್ಲಿ ರಿಟೈರ್ಡ್ ಹರ್ಟ್ ಆಗಿ ಮೈದಾನದಿಂದ ಹೊರ ನಡೆದರು. ಉಳಿದಂತೆ ನಾಯಕ ಗಿಲ್ ನಿರಾಸೆ ಮೂಡಿಸಿದರೆ, ಪಂತ್ ದಿನದಾಟದ ಅಂತ್ಯದಲ್ಲಿ ಪಡಿಕ್ಕಲ್‌ಗೆ ಸಾಥ್ ನೀಡಿದ್ದರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 288 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡರೆ, 27 ರನ್ ಗಳಿಸಿದ ಪಂತ್ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 2ನೇ ದಿನದಾಟದ ಆರಂಭಕ್ಕೆ ಮಳೆ ಅಡ್ಡಿ ಉಂಟು ಮಾಡಿದ್ದು, ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.


