ನವದೆಹಲಿ: ಚಿನ್ನದ ಓಟಗಾರ್ತಿ ಅಸ್ಸಾಂನ ಹಿಮಾ ದಾಸ್‌ಗೆ ಸರ್ಕಾರ ಟಾಪ್ ಯೋಜನೆಯಡಿಯಲ್ಲಿ ಟೋಕಿಯೋ ಒಲಿಂಪಿಕ್ಸ್ ತಯಾರಿಗಾಗಿ ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಲಿದೆ ಎಂದು ಸ್ಪೋರ್ಟ್ಸ್ ಇಂಡಿಯಾದ ನಿರ್ದೇಶಕಿ ನೀಲಮ್ ಕಪೂರ್ ತಿಳಿಸಿದ್ದಾರೆ.

ಫಿನ್‌ಲ್ಯಾಂಡ್‌ನ ಟ್ಯಾಂಪಿಯರ್‌ನಲ್ಲಿ ನಡೆದ ಮಹಿಳೆಯರ 400 ಮೀ. ಓಟದಲ್ಲಿ ಹಿಮಾ ದಾಸ್, ಚೊಚ್ಚಲ ಬಾರಿಗೆ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು. ‘ಹಿಮಾ, ಕಾಮನ್‌ವೆಲ್ತ್‌ನಲ್ಲಿ 400 ಮೀ. ದೂರವನ್ನು 15.32 ಸೆಕೆಂಡ್‌ಗಳಲ್ಲಿ ಕ್ರಮಿಸಿ, ವೈಯಕ್ತಿಕ ದಾಖಲೆ ಉತ್ತಮಗೊಳಿಸಿಕೊಂಡಿದ್ದರು. ಆ ಬಳಿಕ ಅವರನ್ನು ಟಾಪ್ ಯೋಜನೆಗೆ ಸೇರಿಸಲಾಗಿತ್ತು. 

ಸದ್ಯ ಅವರಿಗೆ ₹50,000 ತಿಂಗಳ ಭತ್ಯೆ ಹಾಗೂ ಒಲಿಂಪಿಕ್ಸ್‌ವರೆಗೂ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಸಿಗಲಿದೆ’ ಎಂದು ಕಪೂರ್ ತಿಳಿಸಿದ್ದಾರೆ. ಹಿಮಾ ದಾಸ್ ಸಾಧನೆಯನ್ನ ಪರಿಗಣಿಸಿ ಅವರಿಗೆ ಎಲ್ಲಾ ಸೌಲಭ್ಯ ನೀಡಲು ಸ್ಪೋರ್ಟ್ಸ್ ಇಂಡಿಯಾ ನಿರ್ಧರಿಸಿದೆ ಎಂದಿದ್ದಾರೆ.