ದೆಹಲಿಯಲ್ಲಿ ನಡೆದ ಖೋ-ಖೋ ವಿಶ್ವಕಪ್‌ನಲ್ಲಿ ಭಾರತ ಪುರುಷರ ತಂಡ ನೇಪಾಳವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮಂಡ್ಯದ ಆಟೋ ಚಾಲಕನ ಮಗ ಎಂ.ಕೆ.ಗೌತಮ್ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದರು. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದ ಗೌತಮ್, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ.
- ಮಂಡ್ಯ ಮಂಜುನಾಥ, ಕನ್ನಡಪ್ರಭ
ಮಂಡ್ಯ: ಭಾರತ ಪುರುಷರ ಖೋ-ಖೋ ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ 52-32 ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಟೂರ್ನಿಯಲ್ಲಿ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುವಾಗಿ ಭಾಗವಹಿಸಿದ್ದ ಎಂ.ಕೆ.ಗೌತಮ್ ಮಂಡ್ಯದ ಹುಡುಗ ಎನ್ನುವುದು ಚಿನ್ನದ ಗರಿ ಮೂಡಿಸಿದೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಅಭೂತ ಪೂರ್ವ ಸಾಧನೆ ಮಾಡಿರುವ ಎಂ.ಕೆ.ಗೌತಮ್ ಒಬ್ಬ ಆಟೋ ಡ್ರೈವರ್ ಮಗ. ಚಿಕ್ಕ ವಯಸ್ಸಿನಲ್ಲೇ ಖೋ-ಖೋ ಆಟಕ್ಕೆ ಆಕರ್ಷಿತರಾಗಿ ಅದರಲ್ಲೇ ಭವಿಷ್ಯ ಕಂಡುಕೊಳ್ಳುವ ಛಲದೊಂದಿಗೆ ಮುನ್ನಡೆದ ಗೌತಮ್ ಇಂದು ವಿಶ್ವಮಟ್ಟದಲ್ಲಿ ಎಲ್ಲರ ಗಮನಸೆಳೆದಿದ್ದಾನೆ.
ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಪಂದ್ಯದ ಉತ್ತಮ ಆಟಗಾರ ಪ್ರಶಸ್ತಿಗೆ ಎಂ.ಕೆ.ಗೌತಮ್ ಭಾಜನರಾಗುವುದರೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ.
ಖೋ ಖೋ ವಿಶ್ವಕಪ್ 2025: ಭಾರತ ಪುರುಷರ ತಂಡ ಚಾಂಪಿಯನ್
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡ ಮಲ್ಲೀಗೆರೆ ಗ್ರಾಮದ ಎಂ.ಕಪನೀಗೌಡ ಮತ್ತು ರೇಖಾವತಿ ಅವರ ಪುತ್ರ ಎಂ.ಕೆ.ಗೌತಮ್. ಊರಿನಲ್ಲಿದ್ದುಕೊಂಡು ಕುಟುಂಬ ಸಾಗಿಸುವುದು ಕಷ್ಟವಾದ್ದರಿಂದ ತಂದೆ ಕಪನಿಗೌಡ ಕುಟುಂಬದೊಂದಿಗೆ ಬೆಂಗಳೂರು ಸೇರಿಕೊಂಡು ಆಟೋ ಚಾಲನೆ ಮಾಡುತ್ತಾ ಜೀವನ ನಡೆಸುತ್ತಿದ್ದರು. ಹಗಲು-ರಾತ್ರಿ ಶ್ರಮವಹಿಸಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿದರು.
ಎಂ.ಕೆ.ಗೌತಮ್2007ರಿಂದಲೇ ಖೋ-ಖೋ ಆಡುವುದಕ್ಕೆ ಆರಂಭಿಸಿದರು. ಓಟದಲ್ಲಿ ಚುರುಕುತನ, ವೇಗವನ್ನು ಹೊಂದಿದ್ದ ಈತನ ಪ್ರತಿಭೆಯನ್ನು ಗುರುತಿಸಿದ ಮಾದೇಶ್ ಎಂಬ ಕೋಚ್ ಉತ್ತಮ ಕ್ರೀಡಾಪಟುವಾಗಿ ಬೆಳೆಯುತ್ತಾನೆಂಬುದನ್ನು ಅಂದೇ ಗುರುತಿಸಿದ್ದರು. ನಂತರ ಯಂಗ್ ಪಯೋನಿರ್ ಕ್ಲಬ್ ಸೇರಿಕೊಂಡು ಖೋ-ಖೋ ಕ್ರೀಡೆಯನ್ನು ಮುಂದುವರೆಸಿದರು.
ಕಳೆದ ೧೮ ವರ್ಷಗಳಿಂದ ರಾಜ್ಯ-ರಾಷ್ಟ್ರಮಟ್ಟದ ಹಲವಾರು ಖೋ-ಖೋ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನದೊಂದಿಗೆ ಐದು ಚಿನ್ನದ ಪದಕ, ಎರಡು ಬೆಳ್ಳಿ ಹಾಗೂ ಐದು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಖೋ ಖೋ ವಿಶ್ವಕಪ್ 2025: ಭಾರತ ಮಹಿಳಾ ತಂಡ ಚಾಂಪಿಯನ್
ಗೌತಮ್ ಈವರೆಗೆ ಮೂರು ಬಾರಿ ಬೆಂಗಳೂರು ವಿಶ್ವವಿದ್ಯಾಲಯ ತಂಡ, ೧೮ ಬಾರಿ ಕರ್ನಾಟಕ ತಂಡ, ಎರಡು ಬಾರಿ ಭಾರತ ತಂಡ ಹಾಗೂ 2 ಬಾರಿ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರು ಬಾರಿ ಕರ್ನಾಟಕ ಖೋ-ಖೋ ತಂಡದ ನಾಯಕರಾಗಿ ಗೌತಮ್ ಪ್ರದರ್ಶನ ನೀಡಿದ್ದಾರೆ.
ಖೋ-ಖೋ ಫ್ರಾಂಚೈಸಿ ಲೀಗ್ ಪಂದ್ಯಾವಳಿಗಳಲ್ಲೂ ಎಂ.ಕೆ.ಗೌತಮ್ ಆಟವಾಡಿದ್ದಾರೆ. ಗೌತಮ್ ಆಟದಿಂದ ಆಕರ್ಷಿತರಾದ ಒಡಿಸ್ಸಾ ತಂಡ ಫ್ರಾಂಚೈಸಿ ಲೀಗ್‌ನಲ್ಲಿ ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿತು. ಆ ಮೂಲಕ ಒಡಿಸ್ಸಾ ತಂಡದ ಪರವಾಗಿ ಆಟವಾಡಿದ ಕರ್ನಾಟಕದ ಮೊದಲ ಆಟಗಾರ ಎಂಬ ಕೀರ್ತಿಗೂ ಗೌತಮ್ ಪಾತ್ರರಾಗಿದ್ದಾರೆ.
ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿರುವ ಎಂ.ಕೆ.ಗೌತಮ್ ಕ್ರೀಡಾ ಕೋಟಾದಡಿ ೨೦೨೩ರಿಂದ ಬೆಂಗಳೂರಿನ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಹುಮಾನ ಘೋಷಿಸದ ಕರ್ನಾಟಕ ಸರ್ಕಾರ
ಇದೇ ಮೊದಲ ಬಾರಿಗೆ ಖೋ-ಖೋ ವಿಶ್ವಕಪ್ ಪಂದ್ಯಾವಳಿ ಆಯೋಜನೆಗೊಂಡು ಭಾರತ ತಂಡದ ಪುರುಷ ಮತ್ತು ಮಹಿಳಾ ತಂಡಗಳು ದಿಗ್ವಿಜಯ ಸಾಧಿಸಿದ್ದರೂ ಕರ್ನಾಟಕದಿಂದ ಭಾಗವಹಿಸಿದ್ದ ಇಬ್ಬರು ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಇದುವರೆಗೂ ಬಹುಮಾನ ಘೋಷಿಸದಿರುವುದು ನಿರಾಸೆ ಮೂಡಿಸಿದೆ.
ಭಾರತದ ಪುರುಷ ತಂಡದ ಪರವಾಗಿ ಎಂ.ಕೆ.ಗೌತಮ್, ಮಹಿಳಾ ತಂಡದ ಪರ ಚೈತ್ರಾ ಅವರು ಕರ್ನಾಟಕದಿಂದ ಆಟವಾಡಿದ್ದರು. ಅದೇ ಮಹಾರಾಷ್ಟ್ರದಿಂದ ಭಾರತ ತಂಡವನ್ನು ಪ್ರತಿನಿಧಿಸಿದ್ದ ಐವರು ಆಟಗಾರರಿಗೆ ಅಲ್ಲಿನ ಸರ್ಕಾರ ತಲಾ 2.25 ಕೋಟಿ ರು.ನಗದು ಬಹುಮಾನ ಘೋಷಿಸಿದೆ. ಎಲ್ಲಾ ಕ್ರೀಡೆಗಳಂತೆಯೇ ಖೋ-ಖೋ ಕ್ರೀಡೆಗೂ ಸಮಾನ ಆದ್ಯತೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದ್ದರೆ, ಕರ್ನಾಟಕ ಸರ್ಕಾರ ಖೋ-ಖೋ ಕ್ರೀಡೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದಂತೆ ಕಂಡುಬರುತ್ತಿದೆ.
ವಿಶ್ವಕಪ್ ಗೆದ್ದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಖೋ-ಖೋ ಕ್ರೀಡೆಯತ್ತ ಆಕರ್ಷಿತನಾಗಿದ್ದೆ. ಇದರಲ್ಲೇ ಅತ್ಯುನ್ನತ ಸಾಧನೆ ಮಾಡುವ ಕನಸು ಕಂಡಿದ್ದೆ. ಅದೀಗ ನಿಜವಾಗಿದೆ. ಕ್ರೀಡೆಯಲ್ಲಿ ಒಳ್ಳೆಯ ಭವಿಷ್ಯವಿದೆ. ಎಲ್ಲರೂ ಸದ್ಭಳಕೆ ಮಾಡಿಕೊಳ್ಳಬೇಕು. ಕ್ರಿಕೆಟ್, ಫುಟ್‌ಬಾಲ್ ಕ್ರೀಡೆಗಳಿಗೆ ಸೀಮಿತವಾಗಿ ವಿಶ್ವಕಪ್ ನಡೆಯುತ್ತಿತ್ತು. ಮೊದಲ ಬಾರಿಗೆ ಖೋ-ಖೋ ವಿಶ್ವಕಪ್‌ನಲ್ಲಿ ಭಾರತ ವಿಜಯ ಪತಾಕೆ ಹಾರಿಸಿದೆ. ಪ್ರಧಾನಿ ಮೋದಿ ಅವರು ಮುಂಬರುವ ಒಲಿಂಪಿಕ್ಸ್ ಆತಿಥ್ಯ ಭಾರತಕ್ಕೆ ದೊರೆತರೆ ಖೋ-ಖೋ ಕ್ರೀಡೆಯನ್ನೂ ಅದರಲ್ಲಿ ಸೇರಿಸುವ ಭರವಸೆ ನೀಡಿದ್ದಾರೆ.
- ಎಂ.ಕೆ.ಗೌತಮ್, ಭಾರತ ತಂಡದ ಆಟಗಾರ
ಖೋ-ಖೋ ಆಟದಲ್ಲಿ ಭವಿಷ್ಯವಿಲ್ಲ ಎಂದುಕೊಂಡಿದ್ದೆವು. ಆದರೆ, ಮಗ ಖೋ-ಖೋ ಪಂದ್ಯವನ್ನೇ ಆಡಿ ಸಾಧನೆ ಮಾಡಿ ತೋರಿಸಿದ್ದಾನೆ. ಬಹಳ ಸಂತೋಷವಾಗಿದೆ. ನಾನು ಈಗಲೂ ಆಟೋ ಓಡಿಸಿಕೊಂಡೇ ಜೀವನ ಸಾಗಿಸುತ್ತಿದ್ದೇವೆ. ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಖೋ-ಖೋ ನನ್ನ ಮಗನಿಗೆ ಭವಿಷ್ಯ ರೂಪಿಸಿಕೊಟ್ಟಿರುವುದು ನೆಮ್ಮದಿ ತಂದಿದೆ.
- ಎಂ.ಕಪನಿಗೌಡ, ಗೌತಮ್ ತಂದೆ
