ಜಹೀರ್ ಖಾನ್‌ಗಿಂದು 41ನೇ ಹುಟ್ಟುಹಬ್ಬದ ಸಂಭ್ರಮ
ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಸೋಮವಾರ[ಅ.07] 41ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜ್ಯಾಕ್ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಮಹಾಪುರವೇ ಹರಿದು ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಅ.07]: ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಎಡಗೈ ವೇಗಿ ಜಹೀರ್ ಖಾನ್ ಇಂದು ಅ.07 [ಸೋಮವಾರ] 41ನೇ ವಸಂತಕ್ಕೆ ಕಾಲಿರಿಸಿದ್ದಾರೆ. ತಾವಾಡಿದ ಮೂರು ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲೂ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದ ಜಹೀರ್, ಟೀಂ ಇಂಡಿಯಾಗೆ ಹಲವಾರು ಸ್ಮರಣೀಯ ಗೆಲುವು ತಂದಿತ್ತಿದ್ದಾರೆ. ಅದರಲ್ಲೂ 2011ರ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಭಾರತ ತಂಡದ ವೇಗದ ಬೌಲಿಂಗ್ ಸಾರಥ್ಯ ವಹಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಲು ಕಾರಣರಾಗಿದ್ದರು.
IPL 2020: KKR ತಂಡ ಕೂಡಿಕೊಂಡ ಮತ್ತಿಬ್ಬರು ದಿಗ್ಗಜರು..!
ಮಹರಾಷ್ಟ್ರದ ಶ್ರೀರಾಮ್’ಪುರ ಜಿಲ್ಲೆ ದೈಮಾಬಾದ್ ಮೂಲದ ಜಹೀರ್ ಖಾನ್ 2000ನೇ ಇಸವಿಯಲ್ಲಿ ಕೀನ್ಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಮಾರಕ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ತಂಡದ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸುತ್ತಿದ್ದರು. ಎಡಗೈ ಬ್ಯಾಟ್ಸ್’ಮನ್’ಗಳಂತೂ ಜಹೀರ್ ಖಾನ್ ಬೌಲಿಂಗ್ ಎದುರಿಸಲು ತಡಬಡಾಯಿಸುತ್ತಿದ್ದರು. 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೂರು ಮೇಡನ್ ಓವರ್ ಸಹಿತ 2 ವಿಕೆಟ್ ಕಬಳಿಸಿ ಮಿಂಚಿದ್ದರು. 2003ರಿಂದ 2011ರವರೆಗೂ 3 ವಿಶ್ವಕಪ್ ಟೂರ್ನಿಯಲ್ಲೂ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ. ಒಟ್ಟಾರೆ 3 ವಿಶ್ವಕಪ್ ಟೂರ್ನಿಯಿಂದ ಜಹೀರ್ ಖಾನ್ 44 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಜಹೀರ್ ಖಾನ್ ಭಾರತ ಪರ 92 ಟೆಸ್ಟ್ 200 ಏಕದಿನ ಪಂದ್ಯಗಳನ್ನಾಡಿದ್ದು ಕ್ರಮವಾಗಿ 311 ಹಾಗೂ 282 ವಿಕೆಟ್ ಕಬಳಿಸಿದ್ದಾರೆ. 2014ರಲ್ಲಿ ವೆಲ್ಲಿಂಗ್ಟನ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಹೀರ್ ಖಾನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಇನ್ನು ಅಕ್ಟೋಬರ್ 15, 2015ರಂದು ಟ್ವೀಟ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದರು.
ಜಹೀರ್ ಖಾನ್ ಹುಟ್ಟುಹಬ್ಬಕ್ಕೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಟ್ವೀಟ್ ಮೂಲಕ ಶುಭಕೋರಿದ್ದಾರೆ.