IPL 2020: KKR ತಂಡ ಕೂಡಿಕೊಂಡ ಮತ್ತಿಬ್ಬರು ದಿಗ್ಗಜರು..!
ಕಳೆದ 5 ವರ್ಷಗಳಿಂದಲೂ ಐಪಿಎಲ್ ಪ್ರಶಸ್ತಿ ಬರ ಅನುಭವಿಸುತ್ತಿರುವ ಕೋಲ್ಕತಾ ನೈಟ್ರೈಡರ್ಸ್ ತಂಡ ಮುಂಬರುವ 2020ರ ಟೂರ್ನಿಯಲ್ಲಿ ಕಪ್ ಎತ್ತಿ ಹಿಡಿಯಲು ಪಣತೊಟ್ಟಿದೆ.ಹೀಗಾಗಿ ಇಬ್ಬರು ದಿಗ್ಗಜ ಕ್ರಿಕೆಟಿಗರನ್ನು ಕೆಕೆಆರ್ ತಂಡಕ್ಕೆ ಸೇರಿಸಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಅ.06]: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಎಲ್ಲಾ ಫ್ರಾಂಚೈಸಿಗಳು ಸಜ್ಜಾಗುತ್ತಿವೆ. ನಟ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ರೈಡರ್ಸ್(ಕೆಕೆಆರ್) ಆಸ್ಪ್ರೇಲಿಯಾದ ಮಾಜಿ ಆಟಗಾರ ಡೇವಿಡ್ ಹಸ್ಸಿ ಅವರನ್ನು ತನ್ನ ಪ್ರಧಾನ ಸಲಹೆಗಾರನಾಗಿ ನೇಮಿಸಿಕೊಂಡಿದೆ. ನ್ಯೂಜಿಲೆಂಡ್‌ನ ಮಾಜಿ ವೇಗಿ ಕೈಲ್ ಮಿಲ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ.
ವೈಜಾಗ್ ಟೆಸ್ಟ್; ಸೌತ್ ಆಫ್ರಿಕಾ ಮಣಿಸಿದ ಭಾರತಕ್ಕೆ ಟ್ವಿಟರಿಗರ ಮೆಚ್ಚುಗೆ!
ಡೇವಿಡ್ ಹಸ್ಸಿ ಒಟ್ಟಾರೆ 300 ಟಿ20 ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. 2008ರಿಂದ 2010ರ ವರೆಗೆ ಅವರು ಕೆಕೆಆರ್ ಪರ ಆಡಿದ್ದರು. ಇತ್ತೀಚೆಗೆ ಕೆಕೆಆರ್, ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಅವರನ್ನು ಪ್ರಧಾನ ಕೋಚ್ ಆಗಿ ನೇಮಿಸಿತ್ತು. ಡೇವಿಡ್ ಹಸ್ಸಿ ಹಾಗೂ ಬ್ರೆಂಡನ್ ಮೆಕ್ಕಲಂ ಇಬ್ಬರು ಚೊಚ್ಚಲ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದರು. ಜಾಕ್ ಕಾಲೀಸ್ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಮೆಕ್ಕಲಂ ಶಾರುಖ್ ಖಾನ್ ಒಡೆತನದ ತಂಡಕ್ಕೆ ಪ್ರಧಾನ ಕೋಚ್ ಆಗಿ ನೇಮಕವಾಗಿದ್ದಾರೆ.
ಬಿಸಿಸಿಐ ಚುನಾವಣಾ ಕಣಕ್ಕೆ ಸೌರವ್, ಅಜರ್!
ಇನ್ನು ನ್ಯೂಜಿಲೆಂಡ್ ಪರ ಏಕದಿನ ಕ್ರಿಕೆಟ್’ನಲ್ಲಿ ಎರಡನೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿರುವ ಕೈಲ್ ಮಿಲ್ಸ್ ಕೆಕೆಆರ್ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜಿಂಬಾಬ್ವೆಯ ಹೀತ್ ಸ್ಟ್ರೀಕ್ ಕೆಕೆಆರ್ ಬೌಲಿಂಗ್ ಕೋಚ್ ಹುದ್ದೆಯಿಂದ ಹಿಂದೆ ಸರಿದ ಬಳಿಕ ಇದೀಗ ಆ ಹುದ್ದೆ ಮಿಲ್ಸ್ ಪಾಲಾಗಿದೆ.
ಡೇವಿಡ್ ಹಸ್ಸಿ ಹಾಗೂ ಕೈಲ್ ಮಿಲ್ಸ್ ಕೋಲ್ಕತಾ ನೈಟ್ರೈಡರ್ಸ್ ಕುಟುಂಬ ಸೇರಿಕೊಂಡಿದ್ದು, ಅವರಿಗೆ ಸ್ವಾಗತ ಕೋರುತ್ತೇನೆ ಎಂದು ಕೆಕೆಆರ್ ಸಿಇಓ ಹಾಗೂ ವ್ಯವಸ್ಥಾಪಕ ವೆಂಕಿ ಮೈಸೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
KKR ತಂಡಕ್ಕೆ ಹೊಸ ಕೋಚ್; 2ನೇ ಇನಿಂಗ್ಸ್ ಆರಂಭಿಸಿದ ಸ್ಫೋಟಕ ಬ್ಯಾಟ್ಸ್‌ಮನ್!
ಕೋಲ್ಕತಾ ನೈಟ್ರೈಡರ್ಸ್ ತಂಡವು ಗೌತಮ್ ಗಂಭೀರ್ ನಾಯಕತ್ವದಲ್ಲಿ 2 ಬಾರಿ[2012 ಹಾಗೂ 2014] ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ 5 ಆವೃತ್ತಿಗಳಿಂದಲೂ ಪ್ರಶಸ್ತಿ ಗೆಲ್ಲಲು ವಿಫಲವಾಗುತ್ತಿದೆ. ಹೀಗಾಗಿ ಕೆಕೆಆರ್ ಫ್ರಾಂಚೈಸಿ ತಂಡದಲ್ಲಿ ಮೇಜರ್ ಸರ್ಜರಿ ನಡೆಸುತ್ತಿದೆ.