ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಂಡಿ ರಾಯಲ್ಸ್ ಪರ ಆಡುತ್ತಿರುವ ಭಾರತದ ಮಾಜಿ ಆಟಗಾರ ವಿಜಯ್ ಶಂಕರ್, ಕೊನೆಯ ಓವರ್‌ನಲ್ಲಿ ಒಂದೂ ರನ್ ಗಳಿಸಲು ವಿಫಲರಾದರು. ಈ ಪಂದ್ಯದಲ್ಲಿ ಅವರ ತಂಡ ಸೋತಿದ್ದು, ಮ್ಯಾಚ್ ಫಿನಿಶ್ ಮಾಡಲು ಹೋಗಿ ಶಂಕರ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಬೆಂಗಳೂರು: 2026ನೇ ಸಾಲಿನ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಹಾಗೂ 3ಡಿ ಆಲ್ರೌಂಡರ್ ಖ್ಯಾತಿಯ ವಿಜಯ್ ಶಂಕರ್ ಪಾಲ್ಗೊಂಡಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕ್ಯಾಂಡಿ ರಾಯಲ್ಸ್ ಪರ ಕಣಕ್ಕಿಳಿದಿರುವ ವಿಜಯ್ ಶಂಕರ್, ಮ್ಯಾಚ್ ಫಿನೀಶ್ ಮಾಡಲು ಹೋಗಿ ಟ್ರೋಲ್ ಆಗಿರುವ ಘಟನೆ ನಡೆದಿದೆ.

ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ 18ನೇ ಪಂದ್ಯದಲ್ಲಿ ಜಾಪ್ನಾ ಕಿಂಗ್ಸ್‌ ಹಾಗೂ ಕ್ಯಾಂಡಿ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಜಾಪ್ನಾ ಕಿಂಗ್ಸ್ ತಂಡವು 21 ರನ್‌ಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟ್ ಮಾಡಲಿಳಿದ ಜಾಪ್ನಾ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿತು. ಜಾಪ್ನಾ ಕಿಂಗ್ಸ್ ಪರ ಕಮಿಲ್ ಮಿಶಾರ 49 ಹಾಗೂ ಚಮಿಂದು ವಿಕ್ರಮಸಿಂಘೆ 43 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.

ಇನ್ನು ಕಠಿಣ ಗುರಿ ಬೆನ್ನತ್ತಿದ ಕ್ಯಾಂಡಿ ರಾಯಲ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಪವನ್ ಸಂದೇಶ್ ಕೇವಲ 21 ಎಸೆತಗಳಲ್ಲಿ 48 ರನ್ ಸಿಡಿಸುವ ಮೂಲಕ ಕ್ಯಾಂಡಿ ಪಾಳಯದಲ್ಲಿ ಗೆಲುವಿನ ಅಸೆ ಮೂಡಿಸಿದರು. ಹೀಗಿದ್ದೂ ಕ್ಯಾಂಡಿ ತಂಡವು 200 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 21 ರನ್‌ಗಳ ರೋಚಕ ಸೋಲು ಅನುಭವಿಸಿತು.

ಜಾಪ್ನಾ ಪರ ಗೇಮ್ ಚೇಂಜ್ ಮಾಡಿದ ಮದುಶನಕ; ಟ್ರೋಲ್ ಆದ ವಿಜಯ್ ಶಂಕರ್:

ಕೊನೆಯ ಓವರ್‌ನಲ್ಲಿ ಕ್ಯಾಂಡಿ ರಾಯಲ್ಸ್ ಗೆಲ್ಲಲು 21 ರನ್‌ಗಳ ಅಗತ್ಯವಿತ್ತು. ಜಾಪ್ನಾ ಪರ ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ದಿಲ್ಶಾನ್ ಮದುಶನಕ ಹೊತ್ತುಕೊಂಡರು. ಕ್ಯಾಂಡಿ ಪರ ಭಾರತೀಯ ಮೂಲದ ಕ್ರಿಕೆಟಿಗ ವಿಜಯ್ ಶಂಕರ್ ಹಾಗೂ ನುವಾನ್ ತುಷಾರ ಕ್ರೀಸ್‌ನಲ್ಲಿದ್ದರು. ಕೊನೆಯ ಓವರ್‌ನಲ್ಲಿ ಮಿಂಚಿನ ದಾಳಿ ನಡೆಸಿದ ಮದುಶನಕ ಒಂದೇ ಒಂದು ರನ್ ನೀಡದೇ ಕೊನೆಯ ಎಸೆತದಲ್ಲಿ ವಿಜಯ್ ಶಂಕರ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಕೊನೆಯ ಓವರ್‌ನಲ್ಲಿ ಭಾರತದ 3ಡಿ ಆಲ್ರೌಂಡರ್ ಖ್ಯಾತಿಯ ವಿಜಯ್ ಏನೇ ಪ್ರಯತ್ನ ಮಾಡಿದರೂ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದೀಗ ವಿಜಯ್ ಶಂಕರ್ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದಾರೆ.

Scroll to load tweet…

Scroll to load tweet…

ಎರಡು ತಿಂಗಳ ಹಿಂದಷ್ಟೇ ನಿವೃತ್ತಿ ಘೋಷಿಸಿದ್ದ ವಿಜಯ್ ಶಂಕರ್:

ತಮಿಳುನಾಡು ಮೂಲದ ಅನುಭವಿ ಆಲ್ರೌಂಡರ್ ಕಳೆದ ಮೇ 22ರಂದು ದೇಶಿಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ದೇಶದಾಚೆಗೆ ಟಿ20 ಲೀಗ್‌ಗಳನ್ನು ಆಡುವ ಉದ್ದೇಶದಿಂದ ವಿಜಯ್ ಶಂಕರ್ ನಿವೃತ್ತಿ ಘೋಷಿಸಿದ್ದರು. ಇದಾಗಿ ನಾಲ್ಕು ದಿನಗಳ ಬಳಿಕ ಅಂದರೆ ಮೇ 26ರಂದು 2026ರ ಲಂಕಾ ಪ್ರೀಮಿಯರ್ ಲೀಗ್ ಆಡಲು ಕ್ಯಾಂಡಿ ರಾಯಲ್ಸ್ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಇಲ್ಲಿಯವರೆಗೂ ವಿಜಯ್ ಶಂಕರ್ ಅವರಿಂದ ಇಂಪ್ಯಾಕ್ಟ್ ಇನ್ನಿಂಗ್ಸ್ ಮೂಡಿ ಬಂದಿಲ್ಲ.