ಫುಟ್ಬಾಲ್ ಆಟಗಾರ್ತಿಯಾಗುವ ತನ್ನ ಕನಸು ನನಸಾಗದಿದ್ದರೂ, ಹಿಂದುಳಿದ ಹುಡುಗಿಯರಿಗಾಗಿ ಉಚಿತ ಫುಟ್ಬಾಲ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದರು. ಆರ್ಥಿಕ ಸಂಕಷ್ಟಗಳ ನಡುವೆಯೂ, ಅವರು ಅನೇಕ ಹುಡುಗಿಯರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಡಲು ತರಬೇತಿ ನೀಡಿ, ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ. ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಬಾಲ್ಯದಿಂದಲೂ ಅವರಿಗೆ ಕ್ರೀಡೆಯಲ್ಲಿ ಅಪಾರ ಆಸಕ್ತಿ ಇತ್ತು. ಅವರು ಅಥ್ಲೆಟಿಕ್ಸ್‌ನಲ್ಲಿ ಬಹಳ ಪರಿಣತಿ ಹೊಂದಿದ್ದರು, ಅಲ್ಲದೇ ಕ್ರೀಡಾಪಟುವಾಗಿಯೂ ಹೆಸರು ಮಾಡಿದ್ದರು. ಅವರ ಮನಸ್ಸಿನಲ್ಲಿ ಫುಟ್ಬಾಲ್ ಆಟಗಾರನಾಗುವ ಕನಸು ಅಡಗಿತ್ತು. ಆದರೆ ಕುಟುಂಬದ ಜವಾಬ್ದಾರಿಗಳು, ಸಾಮಾಜಿಕ ಅಡೆತಡೆಗಳು ಮತ್ತು ಆರ್ಥಿಕ ನಿರ್ಬಂಧಗಳಿಂದಾಗಿ, ಆ ಕನಸು ನನಸಾಗಲಿಲ್ಲ. ಬಂಕುರಾದ ಛಟ್ನಾ ಬ್ಲಾಕ್‌ನಲ್ಲಿರುವ ದುಮ್ದುಮಿಯ ದಿಟ್ಟ ಮಹಿಳೆ ಭಾರತಿ ಮುಡಿ, ಮೈದಾನವನ್ನು ತೊರೆದು ಅಂತಿಮವಾಗಿ ಕುಟುಂಬವನ್ನು ನಿರ್ವಹಿಸಬೇಕಾಯಿತು.
ದೃಢಸಂಕಲ್ಪದೊಂದಿಗೆ ಹೆಜ್ಜೆ!
ನನಸಾಗದ ಕನಸನ್ನು ಅರ್ಧಕ್ಕೆ ನಿಲ್ಲಿಸಲು ಬಿಡಲಿಲ್ಲ. ತಮ್ಮದೇ ಆದ ದೃಢಸಂಕಲ್ಪ ಮತ್ತು ಮಗಳು ತಾನಿಯಾ ಮುಡಿಯ ಪ್ರೋತ್ಸಾಹದಿಂದ, ಅವರು 2009 ರಲ್ಲಿ ಸಂಪೂರ್ಣವಾಗಿ ಉಚಿತ ಫುಟ್ಬಾಲ್ ತರಬೇತಿ ಕೇಂದ್ರ ಪ್ರಾರಂಭಿಸಿದ್ದಾರೆ. ಈ ಹೋರಾಟಗಾರ್ತಿ ಮಹಿಳೆ ಬಂಕುರಾದ ದೂರದ ಹಳ್ಳಿಗಳ ಬುಡಕಟ್ಟು ಹುಡುಗಿಯರನ್ನು ಯಾವುದೇ ಸಂಭಾವನೆಯಿಲ್ಲದೆ ಫುಟ್ಬಾಲ್‌ನ ಮುಖ್ಯವಾಹಿನಿಗೆ ಮರಳಿ ತರಲು ಸಮರ್ಪಣಾಭಾವದಿಂದ ಮೈದಾನಕ್ಕೆ ಇಳಿದಿದ್ದಾರೆ.
25 ಹುಡುಗಿಯರಿಗೆ ಪುಟ್ಬಾಲ್ ಕೋಚಿಂಗ್!
ಪ್ರಸ್ತುತ, ಸುಮಾರು 25 ಬುಡಕಟ್ಟು ಹುಡುಗಿಯರು ಅವರಿಂದ ನಿಯಮಿತವಾಗಿ ಫುಟ್ಬಾಲ್ ಪಾಠ ಕಲಿಯುತ್ತಿದ್ದಾರೆ. ಈ ದೀರ್ಘ ಪ್ರಯಾಣದಲ್ಲಿ, ಅವರ ತರಬೇತಿಯಿಂದ ಕನಿಷ್ಠ 18 ಫುಟ್ಬಾಲ್ ಆಟಗಾರರು ರಾಜ್ಯ ಮಟ್ಟದಲ್ಲಿ ಆಡಿದ್ದಾರೆ. ಅನೇಕರು ಗೋವಾ, ಚಂಡೀಗಢ ಮತ್ತು ಭೋಪಾಲ್‌ನಂತಹ ನಗರಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭಾ ಕೌಶಲ್ಯ ಸಾಬೀತುಪಡಿಸಿದ್ದಾರೆ. ಅವರ ಸ್ವಂತ ಮಗಳು ತಾನಿಯಾ ಮುಡಿ ಕೂಡ ತನ್ನ ತಾಯಿಯಿಂದ ಫುಟ್ಬಾಲ್ ಕಲಿತು ಈಗ ಯಶಸ್ವಿ ಫುಟ್ಬಾಲ್ ರೆಫ್ರಿಯಾಗಿದ್ದಾರೆ.
ಹಾದಿ ಸುಗಮವಾಗಿರಲಿಲ್ಲ!
ಈ ನಿಸ್ವಾರ್ಥ ಹೋರಾಟದ ಹಾದಿ ಸುಗಮವಾಗಿರಲಿಲ್ಲ. ಈ ತರಬೇತಿ ಕೇಂದ್ರ ನಡೆಸುವಾಗ ಭಾರತಿ ಮುಡಿ ನಿರಂತರವಾಗಿ ವಿವಿಧ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಫುಟ್ಬಾಲ್,ಶೂಗಳು, ಜೆರ್ಸಿ ಸೇರಿ ಹೆಚ್ಚಿನ ಕ್ರೀಡಾ ಸಾಮಗ್ರಿಗಳನ್ನು ಅವರು ಸ್ವಂತ ಹಣದಿಂದಲೇ ಖರೀದಿಸಬೇಕಾಗಿತ್ತು. ಈ ಕಷ್ಟಕರ ಕೆಲಸದಲ್ಲಿ ಅವರ ಪತಿ ಯಾವಾಗಲೂ ಅವರಿಗೆ ಆರ್ಥಿಕವಾಗಿ ಬೆಂಬಲ ನೀಡಿದರು. ಯಾವುದೇ ಸರ್ಕಾರಿ ಅನುದಾನವಿಲ್ಲದೆ, ಈ ಫುಟ್ಬಾಲ್ ಶಿಬಿರವು ಕೇವಲ ಅದಮ್ಯ ಇಚ್ಛಾಶಕ್ತಿಯೊಂದಿಗೆ ಮುಂದುವರಿಯುತ್ತಿದೆ.
ಭಾರತಿ ಮುಡಿ ಹೇಳವುದೇನು?
ಭಾರತಿ ಮುಡಿ ಹೇಳುವಂತೆ, ಫುಟ್ಬಾಲ್ ಕೇವಲ ಆಟವಲ್ಲ, ಹುಡುಗಿಯರಿಗೆ ಸ್ವಾವಲಂಬನೆಯ ದೊಡ್ಡ ಸಾಧನಗಳಲ್ಲಿ ಒಂದಾಗಿದೆ. ಅವರ ಅಡಿಯಲ್ಲಿ ತರಬೇತಿ ಪಡೆದ ನಂತರ, ಅನೇಕ ಅಂಚಿನಲ್ಲಿರುವ ಫುಟ್ಬಾಲ್ ಆಟಗಾರರು ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅವಕಾಶಗಳನ್ನು ಪಡೆದಿದ್ದಾರೆ. ಈಗ ಅವರ ಏಕೈಕ ಗುರಿಯೆಂದರೆ, ಈ ದೂರದ ಮತ್ತು ಹಿಂದುಳಿದ ಪ್ರದೇಶದ ಹುಡುಗಿ ಒಂದು ದಿನ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಜೆರ್ಸಿಯಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವುದೇ ಭಾರತಿ ಆಶಯವಾಗಿದೆ.
ತರಬೇತಿ ಪಡೆದ ಫುಟ್ಬಾಲ್ ಆಟಗಾರರು ಹೇಳುವುದೇನು?
ತರಬೇತಿ ಪಡೆದ ಫುಟ್ಬಾಲ್ ಆಟಗಾರ್ತಿ ಮಂಪಿ ಬೌರಿ, ಪ್ರೀತಿಯ ಭಾರತಿ ಮುಡಿಯ ಸ್ಫೂರ್ತಿಯೇ ತಮ್ಮನ್ನು ಮುನ್ನಡೆಸುವ ಪ್ರಮುಖ ಶಕ್ತಿ. ತೀವ್ರ ಆರ್ಥಿಕ ಸಂಕಷ್ಟದ ಹೊರತಾಗಿಯೂ, ಅವರು ಎಂದಿಗೂ ಇನ್ನೊಬ್ಬರಿಗೆ ಕಲಿಸಬೇಕೆಂಬ ಹಠ ಬಿಡಲಿಲ್ಲ. ಸ್ವತಃ ಫುಟ್ಬಾಲ್ ಆಟಗಾರ್ತಿಯಾಗಲು ಸಾಧ್ಯವಾಗದಿದ್ದರೂ, ಇಂದು ಭಾರತಿ ಮುಡಿ ಅಸಂಖ್ಯಾತ ಬುಡಕಟ್ಟು ಹುಡುಗಿಯರ ಕನಸುಗಳನ್ನು ನನಸಾಗಿಸುವ ಕರುಣಾಮಯಿ ಆಗಿರುವುದಲ್ಲದೇ, ಮಹಿಳಾ ಸಬಲೀಕರಣದ ವಿಶಿಷ್ಟ ಉದಾಹರಣೆಯಾಗಿದ್ದಾರೆ.


