ಟೀಂ ಇಂಡಿಯಾಗೆ ಹೊಸದಾಗಿ ಬಂದಿದ್ದ ವಿರಾಟ್ ಕೊಹ್ಲಿಗೆ, ಯುವರಾಜ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಪ್ರಾಂಕ್ ಮಾಡಿದ್ದರು. ತಂಡದ ಸಂಪ್ರದಾಯದಂತೆ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ಬೀಳಬೇಕೆಂದು ಹೇಳಿದ್ದರು. ಆದರೆ, ಸಚಿನ್ ಅವರೇ ಇದು ತಮಾಷೆ ಎಂದು ಹೇಳಿದಾಗ ಕೊಹ್ಲಿಗೆ ಸತ್ಯ ತಿಳಿದಿತ್ತು.
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ರನ್ ಮಷೀನ್ ವಿರಾಟ್ ಕೊಹ್ಲಿ ಇಂದು ದಿಗ್ಗಜ ಕ್ರಿಕೆಟಿಗನಾಗಿ ಬೆಳೆದು ನಿಂತಿದ್ದಾರೆ. ಅಂಡರ್-19 ವಿಶ್ವಕಪ್ ಗೆದ್ದು ಆ ಬಳಿಕ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದ ವಿರಾಟ್ ಕೊಹ್ಲಿಗೆ ಆಗಿನ ದಿಗ್ಗಜ ಕ್ರಿಕೆಟಿಗರು ಬ್ರೈನ್‌ವಾಷ್ ಮಾಡುವ ಮೂಲಕ ಪ್ರಾಂಕ್ ಮಾಡಿ ಮಜಾ ತೆಗೆದುಕೊಂಡಿದ್ದರು ಎನ್ನುವ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿ, ಸಂದರ್ಶನವೊಂದರಲ್ಲಿ ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ.
ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿದ್ದೇನು?
ವಿರಾಟ್ ಕೊಹ್ಲಿ 2008ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆಗ ಭಾರತ ಕ್ರಿಕೆಟ್ ತಂಡದಲ್ಲಿ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಇರ್ಫಾನ್ ಪಠಾಣ್, ವಿರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜ ಆಟಗಾರರಿದ್ದರು. ಟೀಂ ಇಂಡಿಯಾಗೆ ಕೊಹ್ಲಿ ಎಂಟ್ರಿಕೊಟ್ಟಾಗ ಕೊಂಚ ನರ್ವಸ್ ಆಗಿದ್ದರಂತೆ. ಇದನ್ನೇ ಬಂಡವಾಳ ಮಾಡಿಕೊಂಡ ಯುವರಾಜ್ ಸಿಂಗ್, ಮುನಾಫ್ ಪಟೇಲ್, ಇರ್ಫಾನ್ ಪಠಾಣ್, ಕೊಹ್ಲಿಯನ್ನು ಫ್ರಾಂಕ್ ಮಾಡಿದ್ದರಂತೆ.
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ ಸೇರಿಕೊಂಡಾಗ ಯುವಿ ಹಾಗೂ ಇರ್ಫಾನ್ ಸೇರಿಕೊಂಡು, ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ಗೆ ಯಾರೇ ಎಂಟ್ರಿಕೊಟ್ಟರೂ, ಮೊದಲಿಗೆ ಸಚಿನ್ ತೆಂಡೂಲ್ಕರ್ ಕಾಲಿಗೆ ಬೀಳಬೇಕು. ಅದು ಇಲ್ಲಿಯವರೆಗೂ ನಡೆದುಕೊಂಡು ಬಂದ ಸಂಪ್ರದಾಯ. ಒಂದು ವೇಳೆ ನೀನು ಹಾಗೆ ಮಾಡದೇ ಹೋದರೇ ನಿಮ್ಮ ಕ್ರಿಕೆಟ್ ವೃತ್ತಿಬದುಕು ತೊಂದರೆಗೆ ಸಿಲುಕಬಹುದು ಎಂದು ಬ್ರೈನ್‌ವಾಷ್ ಮಾಡಿದ್ದರು ಎಂದು ಆ ದಿನಗಳನ್ನು ಕೊಹ್ಲಿ ಮೆಲುಕು ಹಾಕಿದ್ದಾರೆ.
ಸಚಿನ್ ಮೊದಲ ಭೇಟಿಯಲ್ಲಿ ಬಯಲಾಯ್ತು ಸತ್ಯ:
ಇನ್ನು ಸಚಿನ್ ತೆಂಡೂಲ್ಕರ್ ಅವರನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಮೊದಲ ಸಲ ನೋಡುತ್ತಿದ್ದಂತೆಯೇ ವಿರಾಟ್ ಕೊಹ್ಲಿ, ನೇರವಾಗಿ ಹೋಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಮುಂದಾದರಂತೆ. ಆಗ ಸಚಿನ್, ಕೊಹ್ಲಿಯನ್ನು ತಡೆದು ಹೀಗ್ಯಾಕೆ ಮಾಡುತ್ತೀರಾ? ಇದು ಅವರು ಮಾಡುತ್ತಿರುವ ತಮಾಷೆ ಎಂದು ಹೇಳಿದಾಗಲೇ ಇದೊಂದು ಫ್ರಾಂಕ್ ಎಂದು ಕೊಹ್ಲಿಗೆ ಅರ್ಥವಾಯಿತಂತೆ. ಈ ಫ್ರಾಂಕ್ ಹಿಂದಿನ ನಿಜವಾದ ಮಾಸ್ಟರ್ ಮೈಂಡ್ ಮುನಾಫ್ ಪಟೇಲ್ ಆಗಿದ್ರು ಎಂದು ಕೊಹ್ಲಿ ಹೇಳಿದ್ದಾರೆ.
ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೆ 18 ವರ್ಷ:
ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೆ 18 ವರ್ಷಗಳಾಗಿವೆ. ಕೊಹ್ಲಿ ಆಗಸ್ಟ್ 18, 2008ರಲ್ಲಿ ಶ್ರೀಲಂಕಾ ವಿರುದ್ದ ದಂಬುಲ್ಲಾದಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ. ಕೊಹ್ಲಿ ಇದೀಗ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ.


