Super Cup Football: ಇಂದು ಬಿಎಫ್‌ಸಿ vs ಒಡಿಶಾ ಫೈನಲ್ ಫೈಟ್
ಸೂಪರ್ ಕಪ್ ಫುಟ್ಬಾಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ
ಸೂಪರ್ ಕಪ್ ಫುಟ್ಬಾಲ್ ಬೆಂಗಳೂರಿಗೆ 2ನೇ ಪ್ರಶಸ್ತಿ ಗುರಿ
ಪ್ರಶಸ್ತಿಗಾಗಿ ಬಿಎಫ್‌ಸಿ-ಒಡಿಶಾ ಎಫ್‌ಸಿ ನಡುವೆ ಫೈಟ್
ಕಲ್ಲಿಕೋಟೆ(ಏ.25): 3ನೇ ಆವೃತ್ತಿಯ ಸೂಪರ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಹಣಾಹಣಿಗೆ ವೇದಿಕೆ ಸಜ್ಜಾಗಿದ್ದು, ಪ್ರಶಸ್ತಿಗಾಗಿ ಮಂಗಳವಾರ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ತಂಡಗಳು ಸೆಣಸಲಿವೆ. ಇತ್ತೀಚೆಗಷ್ಟೇ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್)ನ ಫೈನಲ್ನಲ್ಲಿ ಸೋತು ಪ್ರಶಸ್ತಿ ಗೆಲ್ಲುವ ಅವಕಾಶ ತಪ್ಪಿಸಿಕೊಂಡಿದ್ದ ಬಿಎಫ್‌ಸಿ ಈ ವರ್ಷದ ಮೊದಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.
ಗುಂಪು ಹಂತದಲ್ಲಿ ‘ಎ’ ಗುಂಪಿನಲ್ಲಿದ್ದ ಬಿಎಫ್‌ಸಿ ಆಡಿದ 3 ಪಂದ್ಯಗಳಲ್ಲಿ 1 ಗೆಲುವು, 1 ಡ್ರಾದೊಂದಿಗೆ 5 ಅಂಕ ಸಂಪಾದಿಸಿ ಅಗ್ರಸ್ಥಾನಿಯಾಗಿತ್ತು. ಬಳಿಕ ಸೆಮಿಫೈನಲ್ನಲ್ಲಿ ಬಲಿಷ್ಠ ಜಮ್ಶೇಡ್ಪುರ ಎಫ್‌ಸಿ ತಂಡವನ್ನು 2-0 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಸುತ್ತಿಗೇರಿದೆ. ಅತ್ತ ‘ಬಿ’ ಗುಂಪಿನಲ್ಲಿ 2 ಗೆಲುವುಗಳೊಂದಿಗೆ ಅಗ್ರಸ್ಥಾನಿಯಾಗಿದ್ದ ಒಡಿಶಾ ಎಫ್‌ಸಿ, ಸೆಮೀಸ್ನಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ 3-1 ಗೆಲುವು ಸಾಧಿಸಿತು. 2018ರಲ್ಲಿ ಚಾಂಪಿಯನ್ ಆಗಿದ್ದ ಬಿಎಫ್‌ಸಿ 2ನೇ ಫೈನಲ್ ಆಡುತ್ತಿದ್ದರೆ, ಒಡಿಶಾಗೆ ಇದು ಮೊದಲ ಫೈನಲ್.
ಈ ಸೂಪರ್ ಕಪ್ ಫೈನಲ್ ಪಂದ್ಯದ ಕುರಿತಂತೆ ಮಾತನಾಡಿದ ಒಡಿಶಾ ಎಫ್‌ಸಿ ತಂಡದ ಕೋಚ್ ಸ್ಲಿಪ್ಪೊರ್ಡ್ ಮಿರಾಂಡ, " ನಮಗಿದು ಮತ್ತೊಂದು ಪಂದ್ಯವೆಂದೇ ಆಡುತ್ತೇವೆ. ಬಲಿಷ್ಠ ತಂಡದ ಎದುರು ಉತ್ತಮವಾಗಿ ಆಡಲು ಎದುರು ನೋಡುತ್ತಿದ್ದೇವೆ. ನಾವು ಮೊದಲ ಫೈನಲ್ ಪಂದ್ಯವನ್ನು ಆಡುತ್ತಿರುವುದರ ಬಗ್ಗೆ ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.
ಎದುರಾಳಿ ಬೆಂಗಳೂರು ಎಫ್‌ಸಿ ತಂಡವು, ಈ ಋತುವಿನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಾ ಬಂದಿದೆ. ಬೆಂಗಳೂರು ಎಫ್‌ಸಿ ತಂಡವು ಡುರಾಂಡ್ ಕಪ್ ಜಯಿಸಿದೆ. ಇದಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಎಟಿಕೆ ಮೋಹನ್ ಬಗಾನ್ ಎದುರು ಶೂಟೌಟ್‌ನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
‘ಪೋಡಿಯಂನಿಂದ ಫುಟ್ಪಾತ್ವರೆಗೆ': ಫುಟ್ಪಾತ್ನಲ್ಲೇ ಮಲಗಿದ ಒಲಿಂಪಿಕ್ಸ್ ಸಾಧಕರು!
ಇದೀಗ ಎರಡು ಬಲಿಷ್ಠ ತಂಡಗಳ ಮುಖಾಮುಖಿಗೆ ಫೈನಲ್ ವೇದಿಕೆ ಸಜ್ಜಾಗಿದೆ. ಎರಡು ತಂಡಗಳಲ್ಲೂ ಸಾಕಷ್ಟು ತಾರಾ ಆಟಗಾರರು ಕೂಡಿರುವುದರಿಂದ ಫುಟ್ಬಾಲ್ ಅಭಿಮಾನಿಗಳಿಗಿಂದು ಭರಪೂರ ಮನರಂಜನೆ ಸಿಗುವ ಸಾಧ್ಯತೆಯಿದೆ. ಒಂದು ಕಡೆ ಬೆಂಗಳೂರು ಎಫ್‌ಸಿ ತಂಡದಲ್ಲಿ ನಾಯಕ ಸುನಿಲ್ ಚೆಟ್ರಿ, ಜಾವಿ ಹೆರ್ನಾಂಡೀಜ್ ಹಾಗೂ ರಾಯ್ ಕೃಷ್ಣ ಅವರಂತಹ ಆಟಗಾರರಿದ್ದರೆ, ಡಿಯಾಗೊ ಮ್ಯುರಿಕೊ, ನಂದಕುಮಾರ್, ವಿಕ್ಟರ್ ರೋಡ್ರಿಗಜ್, ಜೆರ್ರಿ ಅವರಂತಹ ಆಟಗಾರರ ಬಲ ಒಡಿಶಾ ತಂಡಕ್ಕಿದೆ.
ಪಂದ್ಯ: ರಾತ್ರಿ 7ಕ್ಕೆ,
ಪ್ರಸಾರ: ಸೋನಿ ಸ್ಪೋರ್ಟ್ಸ್/ಫ್ಯಾನ್‌ಕೋಡ್ ಆ್ಯಪ್
ಸೈಕ್ಲಿಂಗ್ ಸಂಸ್ಥೆಗೆ ಶಾಸಕ ಪಂಕಜ್ ಸಿಂಗ್ ಅಧ್ಯಕ್ಷ
ನವದೆಹಲಿ: ಭಾರತೀಯ ಸೈಕ್ಲಿಂಗ್ ಫೆಡರೇಷನ್(ಸಿಎಫ್ಐ) ನೂತನ ಅಧ್ಯಕ್ಷರಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ, ನೋಯ್ಡಾ ಶಾಸಕ ಪಂಕಜ್ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸೋಮವಾರ ವಾರ್ಷಿಕ ಸಭೆಯಲ್ಲಿ ಘೋಷಣೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಪಂಕಜ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇತರೆ ಸ್ಥಾನಗಳಿಗೂ ತಲಾ ಒಬ್ಬೊಬ್ಬರೇ ಅರ್ಜಿ ಸಲ್ಲಿಸಿದ್ದರಿಂದ ಎಲ್ಲರೂ ಅವಿರೋಧಯವಾಗಿ ಆಯ್ಕೆಯಾಗಿದ್ದಾರೆ. ಪಂಕಜ್ ಈ ಮೊದಲು ಭಾರತೀಯ ಫೆನ್ಸಿಂಗ್ ಸಂಸ್ಥೆ ಅಧ್ಯಕ್ಷರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದ್ದರು.