ಟಿ -20 ಕ್ರಿಕೆಟ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿರುವ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಇದೀಗ ರೆಡ್ ಬಾಲ್ ಕ್ರಿಕೆಟ್ನ ಮತ್ತೊಂದು ದೊಡ್ಡ ಪರೀಕ್ಷೆಗೆ ಸಜ್ಜಾಗಿದ್ದಾರೆ.
ಐಪಿಎಲ್ ನಲ್ಲಿ ಶತಕ ಸಿಡಿಸಿ ದಾಖಲೆ ಬರೆದಿರುವ ವೈಭವ್ಗೆ ಮುಂದಿನ ಸವಾಲು ದುಲೀಪ್ ಟ್ರೋಫಿ. ಆಗಸ್ಟ್ 23ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಈ ಟೂರ್ನಿಯಲ್ಲಿ ವೈಭವ್ ತಮ್ಮ ಬ್ಯಾಟಿಂಗ್ನ ಮತ್ತೊಂದು ಮುಖವನ್ನು ಜಗತ್ತಿಗೆ ತೋರಿಸಲು ಸಿದ್ಧರಾಗಿದ್ದಾರೆ.
ದುಲೀಪ್ ಟ್ರೋಫಿಗೆ ಸಿದ್ಧತೆ
ಟಿ -20ಯಲ್ಲಿ ಬೌಲರ್ಗಳ ಬೆವರಿಳಿಸುವ ವೈಭವ್, ನಾಲ್ಕೈದು ದಿನಗಳ ಪಂದ್ಯದಲ್ಲಿ ಹೇಗೆ ಆಡ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಬರೀ ಟಿ- 20 ಮಾತ್ರವಲ್ಲ ಗಂಟೆಗಟ್ಟಲೆ ಕ್ರೀಸ್ ನಲ್ಲಿ ನಿಂತು ಬ್ಯಾಟ್ ಬೀಸುವ ಸಾಮರ್ಥ್ಯ ನನಗೂ ಇದೆ ಎಂಬುದನ್ನು ಸಾಭೀತುಪಡಿಸಲು ಈಗ ವೈಭವ್ ಸೂರ್ಯವಂಶಿ ಸಜ್ಜಾಗ್ತಿದ್ದಾರೆ.
ಟಿ -20ಯಲ್ಲಿ ಕೆಲವೇ ಓವರ್ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಹುದು. ಆದರೆ ರೆಡ್ ಬಾಲ್ ಕ್ರಿಕೆಟ್ನಲ್ಲಿ ಒಂದು ಉತ್ತಮ ಇನ್ನಿಂಗ್ಸ್ ಕಟ್ಟಲು ತಾಳ್ಮೆ, ಏಕಾಗ್ರತೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಆಟ ಬದಲಿಸುವ ಸಾಮರ್ಥ್ಯ ಬೇಕು. ಇದನ್ನು ಅರಿತಿರುವ ವೈಭವ್ ತಮ್ಮ ಆಟದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ತಮ್ಮ ಬಾಲ್ಯದ ಕೋಚ್ ಮನೀಷ್ ಓಝಾ ಅವರನ್ನು ವಿಶೇಷವಾಗಿ ನಾಗ್ಪುರದಲ್ಲಿರುವ ರಾಜಸ್ಥಾನ್ ರಾಯಲ್ಸ್ ಅಕಾಡೆಮಿಗೆ ಕರೆಸಿಕೊಂಡಿದ್ದಾರೆ.
ಸುಮಾರು ಆರು ದಿನಗಳ ಕಾಲ ಇಬ್ಬರೂ ಒಟ್ಟಿಗೆ ತರಬೇತಿ ನಡೆಸಿದ್ದು, ಕೇವಲ ತಾಂತ್ರಿಕ ಅಂಶಗಳಿಗಿಂತ ದೀರ್ಘಕಾಲ ಬ್ಯಾಟಿಂಗ್ ಮಾಡುವ ಮಾನಸಿಕತೆ ಬೆಳೆಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಮನೀಷ್ ಓಝಾ ಅವರ ಪ್ರಕಾರ, ಅವರನ್ನು ರಾಜಸ್ಥಾನ್ ರಾಯಲ್ಸ್ ಕರೆಸಿರಲಿಲ್ಲ. ಬದಲಿಗೆ ವೈಭವ್ ಸೂರ್ಯವಂಶಿಯೇ ತಮ್ಮ ಬಾಲ್ಯದ ಕೋಚ್ಗೆ ಕರೆ ಮಾಡಿ ನಾಗ್ಪುರಕ್ಕೆ ಬರುವಂತೆ ಕೇಳಿಕೊಂಡಿದ್ದರು. ಬಾಲ್ಯದಿಂದಲೂ ವೈಭವ್ ಜೊತೆ ಕೆಲಸ ಮಾಡಿರುವ ಓಝಾಗೆ ಅವರ ಆಟದ ಶಕ್ತಿ ಮತ್ತು ದುರ್ಬಲತೆಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ವೈಭವ್ ಕೂಡ ತಮ್ಮ ಹಳೆಯ ಕೋಚ್ ಮುಂದೆ ಹೆಚ್ಚು ಸಹಜವಾಗಿರುತ್ತಾರೆ. ಅದಕ್ಕಾಗಿಯೇ ರೆಡ್ ಬಾಲ್ ಕ್ರಿಕೆಟ್ಗೆ ತಯಾರಿ ನಡೆಸುವಾಗ ಓಝಾ ಅವರ ಮಾರ್ಗದರ್ಶನವನ್ನು ಬಯಸಿದ್ದಾರೆ.
ತರಬೇತಿಯ ವೇಳೆ ವೈಭವ್ಗೆ ಒಂದು ಪ್ರಮುಖ ವಿಚಾರವನ್ನು ಮನವರಿಕೆ ಮಾಡಿಕೊಡಲಾಗಿದೆ. ರೆಡ್ ಬಾಲ್ ಕ್ರಿಕೆಟ್ ಆಡಲು ತಮ್ಮ ಸ್ವಾಭಾವಿಕ ಆಕ್ರಮಣಕಾರಿ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಬೇಕಿಲ್ಲ. ಬದಲಿಗೆ ಸರಿಯಾದ ಚೆಂಡಿಗಾಗಿ ಕಾಯಬೇಕು. ಒಳ್ಳೆಯ ಚೆಂಡು ಬಂದಾಗ ಅದಕ್ಕೆ ಗೌರವ ನೀಡಿ, ಅಗತ್ಯವಿದ್ದರೆ ಬಿಟ್ಟುಬಿಡಬೇಕು. ಆದರೆ ಬೌಲರ್ ಕೆಟ್ಟ ಚೆಂಡು ಎಸೆದಾಗ ಅದನ್ನು ಬೌಂಡರಿಗೆ ಅಟ್ಟಲು ಯಾವುದೇ ಹಿಂಜರಿಕೆ ಇರಬಾರದು ಎಂಬುದನ್ನು ವೈಭವ್ ಕಲಿಯುತ್ತಿದ್ದಾರೆ.
90 ಓವರ್ಗಳವರೆಗೆ ಕ್ರೀಸ್ನಲ್ಲಿ ನಿಲ್ಲುವ ಗುರಿ!
ವೈಭವ್ನ ತಯಾರಿಯಲ್ಲಿ ಅತ್ಯಂತ ಪ್ರಮುಖ ಅಂಶವೆಂದರೆ ದೀರ್ಘಕಾಲ ಕ್ರೀಸ್ನಲ್ಲಿ ನಿಂತು ಬ್ಯಾಟಿಂಗ್ ಮಾಡುವುದು. ರೆಡ್ ಬಾಲ್ ಕ್ರಿಕೆಟ್ನಲ್ಲಿ ಒಂದು ಸೆಷನ್ ಉತ್ತಮವಾಗಿ ಆಡಿದರೆ ಸಾಕಾಗುವುದಿಲ್ಲ. ಬೆಳಗಿನ ಸೆಷನ್, ಲಂಚ್ ನಂತರದ ಸೆಷನ್, ಟೀ ನಂತರದ ಸೆಷನ್ ಹೀಗೆ ಇಡೀ ದಿನದ ಆಟವನ್ನು ಹಂತ ಹಂತವಾಗಿ ಯೋಜಿಸಬೇಕು. ಅಗತ್ಯವಿದ್ದರೆ 90 ಓವರ್ಗಳವರೆಗೆ ಬ್ಯಾಟ್ ಮಾಡುವ ಮಾನಸಿಕ ಸಿದ್ಧತೆ ಇರಬೇಕು ಎಂಬುದೇ ಕೋಚ್ ನೀಡಿರುವ ಪ್ರಮುಖ ಸಂದೇಶ.
ವೈಭವ್ ಇನ್ನೂ ಕೇವಲ 15 ವರ್ಷದವರು. ಆದರೆ ಈ ವಯಸ್ಸಿನಲ್ಲೇ ಐಪಿಎಲ್ನಲ್ಲಿ ಶತಕ ಸಿಡಿಸಿ, ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಾಗಿದೆ. ಜಿಂಬಾಬ್ವೆಯಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಗೌರವ ಪಡೆದಿದ್ದರೂ ವೈಭವ್ನಲ್ಲಿ ಯಾವುದೇ ಅಹಂಕಾರ ಕಾಣಿಸುತ್ತಿಲ್ಲ ಎಂದು ಅವರ ಬಾಲ್ಯದ ಕೋಚ್ ಮನೀಷ್ ಓಝಾ ಹೇಳಿದ್ದಾರೆ. ಅವರ ಪ್ರಕಾರ, ವೈಭವ್ ಇನ್ನೂ ಅದೇ ಸರಳ ಹುಡುಗ. ಸ್ಟಾರ್ ಆದರೂ ಅವರ ವರ್ತನೆಯಲ್ಲಿ ದೊಡ್ಡ ಬದಲಾವಣೆ ಬಂದಿಲ್ಲ.
ಅಭಿಮಾನಿಗಳ ಕಣ್ಣು ಈಗ ದುಲೀಪ್ ಟ್ರೋಫಿಯತ್ತ
ಟಿ -20ಯಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ವೈಭವ್ ಈಗಾಗಲೇ ತೋರಿಸಿದ್ದಾರೆ. ಐಪಿಎಲ್ನಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯನ್ನೂ ನೀಡಿದ್ದಾರೆ. ಆದರೆ ರೆಡ್ ಬಾಲ್ ಕ್ರಿಕೆಟ್ನಲ್ಲಿ ತಾಳ್ಮೆ, ತಂತ್ರ, ಏಕಾಗ್ರತೆ ಮತ್ತು ದೀರ್ಘ ಇನ್ನಿಂಗ್ಸ್ ಈ ನಾಲ್ಕನ್ನೂ ಒಟ್ಟಿಗೆ ತೋರಿಸುವ ಸವಾಲು ಅವರ ಮುಂದಿದೆ. ಹಾಗಾಗಿ ದುಲೀಪ್ ಟ್ರೋಫಿ ವೈಭವ್ ಸೂರ್ಯವಂಶಿಗೆ ಮತ್ತೊಂದು ಪಂದ್ಯವಲ್ಲ, ಮುಂದಿನ ದೊಡ್ಡ ಹೆಜ್ಜೆ ಎನ್ನಬಹುದು.


