ಬೆಂಗ​ಳೂರು(ಸೆ.08): 2019-20ರ ದೇಸಿ ಕ್ರಿಕೆಟ್‌ ಋುತು​ವಿನ ಮೊದಲ ಟೂರ್ನಿ ದುಲೀಪ್‌ ಟ್ರೋಫಿ​ಯಲ್ಲಿ ಭಾರತ ರೆಡ್‌ ತಂಡ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿದೆ. ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ಶನಿ​ವಾರ ಮುಕ್ತಾ​ಯ​ಗೊಂಡ ಫೈನಲ್‌ ಪಂದ್ಯ​ದಲ್ಲಿ, ಭಾರತ ಗ್ರೀನ್‌ ವಿರುದ್ಧ ಇನ್ನಿಂಗ್ಸ್‌ ಹಾಗೂ 38 ರನ್‌ಗಳ ಗೆಲುವು ಸಾಧಿ​ಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ರೆಡ್‌ಗೆ 157 ರನ್‌ ಮುನ್ನಡೆ ಬಿಟ್ಟು​ಕೊಟ್ಟು 2ನೇ ಇನ್ನಿಂಗ್ಸ್‌ ಆರಂಭಿ​ಸಿದ್ದ ಭಾರ​ತ ಗ್ರೀನ್‌ ತಂಡ, ಕೇವಲ 119 ರನ್‌ಗಳಿಗೆ ಆಲೌಟ್‌ ಆಯಿತು. ಪಂದ್ಯದ 4ನೇ ದಿನ​ವಾದ ಶನಿ​ವಾರ, 6 ವಿಕೆಟ್‌ಗೆ 345 ರನ್‌ಗಳಿಂದ ಮೊದಲ ಇನ್ನಿಂಗ್ಸ್‌ ಮುಂದು​ವ​ರಿ​ಸಿದ ಭಾರತ ರೆಡ್‌, 388 ರನ್‌ಗಳಿ​ಗೆ ಆಲೌಟ್‌ ಆಯಿತು.

ದುಲೀಪ್‌ ಟ್ರೋಫಿ ಫೈನಲ್: ಭಾರ​ತ ರೆಡ್‌ಗೆ ಇನ್ನಿಂಗ್ಸ್‌ ಮುನ್ನ​ಡೆ

ದ್ವಿತೀ​ಯ ಇನ್ನಿಂಗ್ಸ್‌ ಆರಂಭಿ​ಸಿದ ಭಾರತ ಗ್ರೀನ್‌, ಆರಂಭಿಕ ಆಘಾತ ಅನು​ಭ​ವಿ​ಸಿತು. ವೇಗಿ ಆವೇಶ್‌ ಖಾನ್‌ ಮಾರಕ ಬೌಲಿಂಗ್‌ ದಾಳಿ ಮೂಲಕ ಅಗ್ರ ಕ್ರಮಾಂಕ​ವನ್ನು ಪೆವಿ​ಲಿ​ಯನ್‌ಗಟ್ಟಿದರು. ವಿದ​ರ್ಭದ ಸ್ಪಿನ್ನರ್‌ ಆದಿತ್ಯ ಸರ್ವಾಟೆ ಮಧ್ಯಮ ಕ್ರಮಾಂಕವನ್ನು ಉರು​ಳಿ​ಸಿ​ದರು. ಸಿದ್ದೇಶ್‌ ಲಾಡ್‌ (42) ಹಾಗೂ ಅಕ್ಷತ್‌ ರೆಡ್ಡಿ (33) ಹೊರ​ತು​ಪ​ಡಿಸಿ ಉಳಿ​ದ್ಯಾವ ಬ್ಯಾಟ್ಸ್‌ಮನ್‌ ಸಹ ಹೋರಾಟ ಪ್ರದ​ರ್ಶಿ​ಸಲಿಲ್ಲ. ಆದಿತ್ಯ 5.5 ಓವ​ರಲ್ಲಿ 15 ರನ್‌ಗೆ 5 ವಿಕೆಟ್‌ ಕಬ​ಳಿ​ಸಿ​ದರು. ಆವೇಶ್‌ 3 ವಿಕೆಟ್‌ ಕಿತ್ತರು. ಕೇವಲ 39.5 ಓವರ್‌ಗಳಲ್ಲಿ ಭಾರತ ಗ್ರೀನ್‌ ಆಲೌಟ್‌ ಆಯಿತು.

ಪಂದ್ಯ​ದಲ್ಲಿ ಟಾಸ್‌ ಗೆದ್ದು ಮೊದ​ಲು ಬ್ಯಾಟ್‌ ಮಾಡಿದ್ದ ಭಾರತ ಗ್ರೀನ್‌, ಮೊದಲ ಇನ್ನಿಂಗ್ಸ್‌ನಲ್ಲಿ 231 ರನ್‌ ಗಳಿ​ಸಿತ್ತು. ಅಭಿ​ಮನ್ಯು ಈಶ್ವ​ರನ್‌ರ ಅಮೋಘ 153 ರನ್‌ಗಳ ಆಟದ ನೆರ​ವಿ​ನಿಂದ ಭಾರ​ತ ರೆಡ್‌, ಮೊದಲ ಇನ್ನಿಂಗ್ಸ್‌ನಲ್ಲಿ 388 ರನ್‌ ಗಳಿಸಿ ದೊಡ್ಡ ಮೊತ್ತದ ಮುನ್ನಡೆ ಪಡೆ​ದು​ಕೊಂಡಿತ್ತು.

ಸ್ಕೋರ್‌:

ಭಾರತ ಗ್ರೀನ್‌ 231 ಹಾಗೂ 119/10

(ಸಿ​ದ್ದೇಶ್‌ 42, ಅಕ್ಷತ್‌ 33, ಆದಿತ್ಯ 5-15, ಆವೇಶ್‌ 3-38),

ಭಾರತ ರೆಡ್‌ 388/10.

ಪಂದ್ಯ ಶ್ರೇಷ್ಠ: ಅಭಿ​ಮನ್ಯು ಈಶ್ವ​ರನ್‌